ತುಂಗಭದ್ರಾ ಡ್ಯಾಂನಿಂದ ನದಿಗೆ 1 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು: ಹಂಪಿಯ ಸ್ಮಾರಕಗಳು ಜಲಾವೃತ..!
* ಮುಳುಗಡೆಯಾದ ಶ್ರೀಕೃಷ್ಣದೇವರಾಯ ಸಮಾಧಿ
* ಸೆಲ್ಫಿಗೆ ಮುಗಿಬಿದ್ದ ಜನ
* ತುಂಗಭದ್ರಾ ಪ್ರವಾಹ, ಕಂಪ್ಲಿ ಸೇತುವೆ ಬಂದ್
ಹೊಸಪೇಟೆ/ಕೊಪ್ಪಳ(ಜು.14): ತುಂಗಭದ್ರಾ ಜಲಾಶಯ ಭರ್ತಿಯಾಗಿರುವುದರಿಂದ ಜಲಾಶಯದ 33 ಕ್ರಸ್ಟ್‌ಗೇಟ್‌ಗಳ ಪೈಕಿ 30 ಗೇಟ್‌ಗಳನ್ನು ತಲಾ 2.5 ಅಡಿ ಎತ್ತರಿಸಿ 1,08,510 ಕ್ಯುಸೆಕ್ ನೀರು ನದಿಗೆ ಹರಿಸಲಾಗಿದೆ. ಇದರಿಂದ ಹಂಪಿ ಭಾಗದಲ್ಲಿ ಪ್ರವಾಹ ಉಂಟಾಗಿ ಪುರಂದರದಾಸರ ಮಂಟಪ, ರಾಮದೇವರ ದೇವಸ್ಥಾನ ಸೇರಿದಂತೆ ವಿವಿಧ ಸ್ಮಾರಕಗಳು ಜಲಾವೃತವಾಗಿವೆ. ತುಂಗಭದ್ರಾ ಜಲಾಶಯದ ಒಳ ಹರಿವು 1,10,048 ಕ್ಯುಸೆಕ್ ತಲುಪಿರುವ ಹಿನ್ನೆಲೆಯಲ್ಲಿ ಡ್ಯಾಂನಿಂದ ನದಿಗೆ ಭಾರಿ ಪ್ರಮಾಣದ ನೀರು ಹರಿಸಲಾಯಿತು. ಈಗಾಗಲೇ ಜಲಾಶಯ ಭರ್ತಿಯಾಗಿರುವುದರಿಂದ ಬೆಳಗ್ಗೆ 10 ಗಂಟೆಗೆ 28 ಗೇಟ್‌ಗಳಿಂದ 84,184 ಕ್ಯುಸೆಕ್ ನೀರು ಹರಿಸಲಾಯಿತು. ಜಲಾಶಯದ ಒಳ ಹರಿವು ಏರುತ್ತಲೇ ಸಾಗಿದ್ದರಿಂದ ಬೆಳಗ್ಗೆ 11 ಗಂಟೆ ಹೊತ್ತಿಗೆ 30 ಗೇಟ್‌ಗಳಿಂದ 1,01,500 ಕ್ಯುಸೆಕ್ ನೀರು ನದಿಗೆ ಹರಿಸಲಾಯಿತು. ಜಲಾಶಯದ ಒಳ ಹರಿವು ಏರುತ್ತಲೇ ಸಾಗಿದ್ದರಿಂದ ಡ್ಯಾಂನ 30 ಗೇಟ್‌ಗಳನ್ನು ತಲಾ 2.5 ಅಡಿ ಎತ್ತರಿಸಿ 1,08,510 ಕ್ಯುಸೆಕ್ ನೀರು ಹರಿಸಲಾಯಿತು.
ಹಂಪಿ ಸ್ಮಾರಕಗಳು ಜಲಾವೃತ:
ತುಂಗಭದ್ರಾ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರಬಿಟ್ಟಿರುವುದರಿಂದ ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇಗುಲದ ಸಮೀಪದಲ್ಲಿ ನದಿ ದಂಡೆಯಲ್ಲಿರುವ ಧಾರ್ಮಿಕ ವಿಧಿ-ವಿಧಾನ ನೆರವೇರಿಸುವ ಮಂಟಪ, ವಿಷ್ಣು ಮಂಟಪ ಸೇರಿದಂತೆ ವಿವಿಧ ಸ್ಮಾರಕಗಳು ಜಲಾವೃತವಾಗಿವೆ.
ಭೋರ್ಗರೆಯುತ್ತಿದೆ ತುಂಗಭದ್ರಾ ಜಲಾಶಯ, ನೋಡ ನೋಡ ನೀರು ಎಷ್ಟು ಚಂದ ಅಲಾ...
ಹಂಪಿಯ ರಾಮದೇವರ ಗುಡಿ, ಕೋಟಿಲಿಂಗ, ಪುರಂದರ ಮಂಟಪ, ಕಾಲು ಸೇತುವೆ ಸೇರಿದಂತೆ ವಿವಿಧ ಮಂಟಪಗಳು ಜಲಾವೃತಗೊಂಡಿವೆ. ಸ್ಮಾರಕಗಳು ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಹರಿಯುತ್ತಿರುವ ನೀರನ್ನು ಕಣ್ಣದುಂಬಿಕೊಳ್ಳುತ್ತಿದ್ದಾರೆ. ಅತ್ತ ಪೊಲೀಸರೂ ಹಂಪಿ ನದಿಯ ಬಳಿ ಸೂಕ್ತ ಬಂದೋಬಸ್‌್ತ ಕೈಗೊಂಡಿದ್ದಾರೆ.
ಸಂಬಂಧಿಸಿದ ಜಿಲ್ಲಾಡಳಿತಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮವಹಿಸಬೇಕು. ಪ್ರವಾಹದಿಂದ ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮೂರನೇ ಅಲರ್ಚ್ ಸಂದೇಶವನ್ನೂ ತುಂಗಭದ್ರಾ ಮಂಡಳಿ ರವಾನಿಸಿದೆ.
ತುಂಗಭದ್ರಾ ಪ್ರವಾಹ, ಕಂಪ್ಲಿ ಸೇತುವೆ ಬಂದ್
ಕೊಪ್ಪಳ: ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರಿಂದ 30 ಕ್ರಸ್ಟ್ ಗೇಟ್‌ಗಳನ್ನು ತೆರೆದು ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದ್ದು, ತುಂಗಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಪರಿಣಾಮ ಗಂಗಾವತಿ ಕಂಪ್ಲಿ ರಸ್ತೆ, ಸೇತುವೆ ಮೇಲೆ ಸಂಚಾರ ನಿಷೇಧ ಮಾಡಲಾಗಿದೆ.
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಇನ್ನೂ ಹೆಚ್ಚುತ್ತಲೇ ಇರುವುದರಿಂದ ನದಿಯುದ್ದಕ್ಕೂ ಈಗಾಗಲೇ ಎಚ್ಚರಿಕೆ ನೀಡಲಾಗಿದ್ದು, ಯಾವುದೇ ಸಂದರ್ಭದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಳ ಮಾಡುವ ಸಾಧ್ಯತೆ ಇರುವುದರಿಂದ ನದಿಯ ಎರಡು ಬದಿಯಲ್ಲಿ ಜನರು ಜಾಗ್ರತೆಯಿಂದ ಇರುವಂತೆ ಸೂಚಿಸಲಾಗಿದೆ.
ಗಂಗಾವತಿ- ಕಂಪ್ಲಿ ಮಾರ್ಗದಲ್ಲಿರುವ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯ ಮೇಲೆ ಸಂಚಾರ ನಿಷೇಧ ಮಾಡಿ ಕೊಪ್ಪಳ ವಿಭಾಗಾಧಿಕಾರಿ ಬಸಣ್ಣೆಪ್ಪ ಅವರು ಆದೇಶ ಹೊರಡಿಸಿದ್ದಾರೆ. ಸೇತುವೆಯ ಎರಡು ಬದಿಯಲ್ಲಿಯೂ ಪೊಲೀಸ್ ಕಾವಲು ಹಾಕಲಾಗಿದ್ದು, ಸಂಚಾರವನ್ನು ನಿಷೇಧ ಮಾಡಿರುವುದರಿಂದ ಬುಕ್ಕಸಾಗರ ಮಾರ್ಗವಾಗಿ ಸಂಚಾರ ಮಾಡುವಂತೆ ಪರ್ಯಾಯ ಮಾರ್ಗದ ಕುರಿತು ಮಾಹಿತಿ ನೀಡಲಾಗಿದೆ.
ಮುಳುಗಡೆಯಾದ ಸಮಾಧಿ:
ತುಂಗಭದ್ರಾ ನದಿಯಲ್ಲಿ ಪ್ರವಾಸ ಹೆಚ್ಚಳವಾಗುತ್ತಿರುವುದರಿಂದ ಆನೆಗೊಂದಿ ಭಾಗದಲ್ಲಿರುವ ಐತಿಹಾಸಿಕ ಸ್ಮಾರಕಗಳು ಮುಳುಗಡೆಯಾಗಿವೆ. ಅದರಲ್ಲೂ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ ಸಮಾಧಿಯ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ನವವೃಂದಾವನಕ್ಕೆ ತೆರಳುವುದಕ್ಕೂ ನಿರ್ಬಂಧ ಹೇರಲಾಗಿದೆ.
ತುಂಗಭದ್ರಾ ಡ್ಯಾಂಗೆ ಹೆಚ್ಚಿದ ಒಳ ಹರಿವು: ಬರೀ 11 ದಿನದಲ್ಲಿ 50 ಟಿಎಂಸಿ ನೀರು ಸಂಗ್ರಹ
ಇಲ್ಲಿ ದೋಣಿಯ ಮೂಲಕ ಸಾಗುತ್ತಿರುವುದನ್ನು ನಿರ್ಬಂಧ ಹೇರಲಾಗಿದೆ. ಆನೆಗೊಂದಿ ಸಮೀಪದ ಚಿಂತಾಮಣಿ ಬಳಿಗೂ ನೀರು ಬಂದಿದೆ. ಸೂರ್ಯನಾರಾಯಣಗುಡಿ ಸೇರಿದಂತೆ ನದಿಯ ಬಳಿ ಇದ್ದ ಸ್ಮಾರಕಗಳು ಮುಳುಗಡೆಯಾಗಿವೆ. ವಿರುಪಾಪುರಗಡ್ಡೆ ಮಾರ್ಗವಾಗಿ ಹಂಪಿಗೆ ಬೋಟ್ ಮೂಲಕ ತೆರಳುವುದಕ್ಕೂ ನಿರ್ಬಂಧ ಹೇರಲಾಗಿದೆ. ತುಂಗಭದ್ರಾ ಜಲಾಶಯಿಂದ ಯಾವುದೇ ಸಂದರ್ಭದಲ್ಲಿ ಇನ್ನು ಲಕ್ಷಾಂತರ ಕ್ಯುಸೆಕ್ ನೀರು ಬಿಡುವ ಸಾಧ್ಯತೆ ಇರುವುದರಿಂದ ಪ್ರವಾಹ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.
ಸೆಲ್ಫಿಗೆ ಮುಗಿಬಿದ್ದ ಜನ
ತುಂಗಭದ್ರಾ ಜಲಾಶಯದ ಕೆಳಭಾಗದಲ್ಲಿ ಇರುವ ಸೇತುವೆ ಮೇಲೆ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಸೇತುವೆ ಬಳಿ ಕೆಳಗಿಳಿದು ನದಿಯ ಪಕ್ಕದಲ್ಲಿ ನಿಂತು ಸೆಲ್ಫಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಸ್ವಲ್ಪ ಆಯ ತಪ್ಪಿದರೆ ಅನಾಹುತ ಸಂಭವಿಸುತ್ತದೆ. ಇದಕ್ಕಾಗಿ ಪೊಲೀಸರು ಮುಳ್ಳುಬೇಲಿಯನ್ನು ಹಾಕಿದರೂ ಜನರು ಅದನ್ನು ತೆಗೆದು ಹಾಕಿ ಹೋಗುತ್ತಿರುವುದು ಕಂಡುಬರುತ್ತದೆ. ಇದನ್ನು ನಿಯಂತ್ರಣ ಮಾಡುವುದಕ್ಕಾಗಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.