ಭೋರ್ಗರೆಯುತ್ತಿದೆ ತುಂಗಭದ್ರಾ ಜಲಾಶಯ, ನೋಡ ನೋಡ ನೀರು ಎಷ್ಟು ಚಂದ ಅಲಾ...
ಮಲೆನಾಡಿನಲ್ಲಿ ಸುರಿಯುತ್ತಿರೋ ಮಳೆಯಿಂದಾಗಿ ನಾಲ್ಕು ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರೆ ಜಲಾಶಯ ತುಂಬಿದ್ದು, ನದಿ ಹಾಗೂ ಕಾಲುವೆಗೆ ನೀರು ಹರಿಬಿಡಲಾಗಿದೆ. ಗೇಟ್‌ನಿಂದ ದುಮ್ಮಿಕ್ಕಿ ಹರಿಯುತ್ತಿರೋ ನೀರಿನ ಕಲರ್ ಫುಟ್ ಲೈಟಿಂಗ್ ಎಫೆಕ್ಟ್ ನೀಡಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.
ವರದಿ ; ನರಸಿಂಹ ಮೂರ್ತಿ ಕುಲಕರ್ಣಿ
ವಿಜಯನಗರ, (ಜುಲೈ.13): ಕರ್ನಾಟಕದಲ್ಲಿ ಒಂದು ಕಡೆ ಮಳೆ ಜನರ ಜೀವನವನ್ನೇ ತತ್ತರಿಸಿ ಹೋಗುವಂತೆ ಮಾಡಿದೆ. ಮತ್ತೊಂದು ಕಡೆ ಇದೆ ಮಳೆ ನೀರು ಸಂಗ್ರಹಗೊಂಡ ಪರಿಣಾಮ ನದಿ, ಹಳ್ಳ-ಕೊಳ್ಳಗಳು ಉಕ್ಕಿಹರಿಯುತ್ತಿವೆ. ಇನ್ನು ರಾಜ್ಯದ ಎರಡನೇ ಅತಿದೊಡ್ಡ ಜಲಾಶಯ ಎನ್ನವ ಹೆಗ್ಗಳಿಕೆಗೆ ಪಾತ್ರವಾಗಿರೋ ತುಂಗಭ್ರಾ ಜಲಾಶಯ ತುಂಬಿರೋದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಇನ್ನು ಕೆಲವರಿಗೆ ಸಂಕಷ್ಟ ತಂದಿಟ್ಟಿದೆ.
ಹೌದು....ವಿಜಯನಗರ ಜಿಲ್ಲೆಯಲ್ಲಿರೋ ರಾಜ್ಯದ ಎರಡನೇ ಅತಿದೊಡ್ಡ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಲಕ್ಷಾಂತರ ಕ್ಯೂಸೆಕ್ ನೀರು ನದಿ ಮೂಲಕ ಹೊರಗೆ ಬಿಡಲಾಗುತ್ತಿದೆ. ಹಾಗೇ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೂ ಸಹ ನೀರು ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಗ್ರಾಮಗಳ ಜನರಿಗೆ ಸಂಕಷ್ಟ ಎದುರಾಗಿದೆ.
ತುಂಗಭದ್ರಾ ಡ್ಯಾಂಗೆ ಹೆಚ್ಚಿದ ಒಳ ಹರಿವು: ಬರೀ 11 ದಿನದಲ್ಲಿ 50 ಟಿಎಂಸಿ ನೀರು ಸಂಗ್ರಹ
ಕಣ್ಮನ ಸೆಳೆಯುತ್ತಿರೋ ಕಲರ್ ಫುಲ್ ನೀರು
ಹೌದು, ಅತ್ತ ಮಲೆನಾಡಿನಲ್ಲಿ ಮಳೆ ಒಂದಲ್ಲೊಂದು ಅವಾಂತರ ಸೃಷ್ಟಿ ಮಾಡುತ್ತಿರೋ ಮಳೆ, ಇತ್ತ ಕೆಳ ಭಾಗದ ಜನರಿಗೆ ಎರಡನೇ ಬೆಳೆಗೆ ನೀರನ್ನು ಒದಗಿಸುತ್ತಿದೆ. ಈ ಮಧ್ಯೆ ತುಂಗಭದ್ರಾ ಜಲಾಶಯದಿಂದ ನೀರು ಹೊರಗೆ ಬರುತ್ತಿರೋ ದೃಶ್ಯ ವೈಭವವನ್ನು ಒಮ್ಮೆ ಕಣ್ತುಂಬಿಕೊಳ್ಳಬೇಕು. ಯಾಕಂದ್ರೇ, ಹಾಲ್ನೋರೆಯಂತೆ ದುಮ್ಮಿಕ್ಕಿ ಹರಿಯುವ ನೀರನ್ನು ನೋಡೋದೇ ಒಂದು ಆನಂದವಾಗಿದೆ. ಅಲ್ಲದೇ ರಾತ್ರಿಯ ವೇಳೆ ಜಲಾಶಯದ 33 ಗೇಟ್‌ಳಿಗೆ ಲೈಟಿಂಗ್ ವ್ಯವಸ್ಥೆ ಮಾಡಿದ್ದು, ರಾತ್ರಿಯ ವೇಳೆ ನೀರು ಕಲರ್ ಫುಲ್ ಆಗಿ ಹರಿಯುವ ಸೊಬಗು ನೋಡಲು ಕಣ್ಮನ ಸೆಳೆಯುವಂತಿದೆ.
ನದಿಗೆ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು
105 ಟಿಎಂಸಿ ಸಾಮಾರ್ಥ್ಯವಿರೋ 1633 ಅಡಿ ಎತ್ತರದಲ್ಲಿರೋ ತುಂಗಭದ್ರಾ ಜಲಾಶಯದಲ್ಲಿಗ 103 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾಗಿದ್ದು, 1630 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಇದಷ್ಟೇ ಅಲ್ಲದೇ ಮಲೆನಾಡಿನಲ್ಲಿ ಸುರಿಯುತ್ತಿರೋ ಮಳೆಯಿಂದ ನಿರಂತರವಾಗಿ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಒಳಹರಿವು ಬರುತ್ತಿರೋ ಹಿನ್ನೆಲೆ ಮಂಗಳವಾರ ಮಧ್ಯಾಹ್ನದಿಂದಲೇ ಜಲಾಶಯದಿಂದ ನದಿಗೆ ನೀರನ್ನು ನಿರಂತರವಾಗಿ ಬಿಡಲಾಗುತ್ತಿದೆ. ಮಂಗಳವಾರ ಹತ್ತು ಸಾವಿರ ಕ್ಯುಸೆಕ್ ನೀರನಿಂದ ಆರಂಭವಾದ ಹೊರ ಹರಿವಿನ ಪ್ರಮಾಣ ಬುಧವಾರ ಒಂದು ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ವಿಶೇಷವೆಂದ್ರೆ, ವಾಡಿಕೆಯ ಪ್ರಕಾರ ಆಗಸ್ಟ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಜಲಾಶಯ ಭರ್ತಿಯಾಗಿ ನೀರನ್ನು ಹೊರಗೆ ಬಿಡಲಾಗುತ್ತದೆ. ಆದ್ರೇ, ಕಳೆದೊಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಜುಲೈ ತಿಂಗಳಲ್ಲಿಯೇ ಜಲಾಶಯ ಭರ್ತಿಯಾಗಿ ಜುಲೈ ಎರಡನೇ ವಾರದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡಲಾಗುತ್ತಿದೆ.
ಹಂಪಿಯ ಹಲವು ಸ್ಮಾರಕ ಮತ್ತು ಕಂಪ್ಲಿ ಸೇತುವೆ ಮುಳುಗಡೆ
ಇನ್ನೂ ಜಲಾಶಯದಿಂದ ಹಂತ ಹಂತವಾಗಿ ನೀರನ್ನು ಹೊರಗೆ ಬಿಡುತ್ತಿದ್ದಂತೆ ಇತ್ತ ಹಂಪಿಯ ನದಿ ತೀರದ ಹಲವು ಸ್ಮಾರಕಗಳ ಜಲಾವೃತವಾಗಿವೆ. ಪ್ರಮುಖವಾಗಿ ಪುರಂದರ ದಾಸರ ಮಂಟಪ, ಸಾಲು ಮಂಟಪ ಮತ್ತು ಧಾರ್ಮಿಕ ವಿಧಿವಿಧಾನ ಮಂಟಪ ಸೇರಿದಂತೆ ಐತಿಹಾಸಿ ರಾಮಲಕ್ಷ್ಮಣ ದೇಗುಲಕ್ಕೆ ಹೋಗೋ ಮಾರ್ಗವೂ ಕೂಡ ಸಂಪೂರ್ಣವಾಗಿ ಜಲಾವೃತವಾಗಿದೆ. ಇದಷ್ಟೇ ಅಲ್ಲದೇ ಕಂಪ್ಲಿ ಮತ್ತು ಗಂಗಾವತಿ ಹೋಗೋ ಮಾರ್ಗಮಧ್ಯೆದಲ್ಲಿರೋ ಸೇತುವೆ ಸಂಪೂರ್ಣ ಮುಳುಗುವ ಹಂತಕ್ಕೆ ಬಂದಿದ್ದು, ರಸ್ತೆ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇದರಿಂದ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆ ಸೇರಿದಂತೆ ಹೈದ್ರಬಾದ್ ಕರ್ನಾಕಟದಿಂದ ಬೆಂಗಳೂರಿಗೆ ಪ್ರಯಾಣ ಮಾಡೋ ಇರೋ ಒಂದು ಮಾರ್ಗ ಸಂಪೂರ್ಣವಾಗಿ ಮುಚ್ಚಿದಂತಾಗಿದೆ.