ಯುನೆಸ್ಕೋ ಪಾರಂಪರಿಕ ತಾಣವಾದ ಹಂಪಿಯ ಸಂರಕ್ಷಿತ ವಲಯಗಳಲ್ಲಿ ನಡೆಯುತ್ತಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳು ಮತ್ತು 250ಕ್ಕೂ ಹೆಚ್ಚು ಅನಧಿಕೃತ ಹೋಮ್‌ಸ್ಟೇಗಳ ವಿರುದ್ಧ ಉಪಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ಹೊಸಪೇಟೆ (ಆ.7): ಯುನೆಸ್ಕೋ (UNESCO) ಜಾಗತಿಕ ಪಾರಂಪರಿಕ ತಾಣವಾದ ವಿಜಯನಗರ ಜಿಲ್ಲೆಯ ಹಂಪಿಯ ಸಂರಕ್ಷಿತ, ಬಫರ್ ಹಾಗೂ ಪರಿಧಿ ವಲಯಗಳಲ್ಲಿ (Core, Buffer and Peripheral Zones) ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳು ಹಾಗೂ 250ಕ್ಕೂ ಹೆಚ್ಚು ಅನಧಿಕೃತ ಹೋಮ್‌ಸ್ಟೇಗಳ ವಿರುದ್ಧ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಹಂಪಿ ವಿಶ್ವಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ (HWHAMA) ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ನಿಷೇಧಿತ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಡೆಸಲು ಅನುಮತಿ ನೀಡಿರುವುದನ್ನು ಉಪಲೋಕಾಯುಕ್ತರು ತಮ್ಮ ದೂರಿನಲ್ಲಿ ಗಂಭೀರವಾಗಿ ಪರಿಗಣಿಸಿದ್ದಾರೆ.
ನಿಯಮ ಉಲ್ಲಂಘನೆ ಹಾಗೂ ಅನಧಿಕೃತ ವಾಣಿಜ್ಯ ಚಟುವಟಿಕೆಗಳನ್ನು ತಡೆಯುವಲ್ಲಿ ವಿಫಲವಾಗಿರುವ ಕಾರಣಕ್ಕಾಗಿ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಸಂಬಂಧಪಟ್ಟ ಅಧಿಕಾರಿಗಳಿಗೆ ಉಪಲೋಕಾಯುಕ್ತರು ನೋಟಿಸ್ ಜಾರಿ ಮಾಡಿದ್ದು, ಲಿಖಿತ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ.
53ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ತನಿಖೆಯ ಬಿಸಿ
ಈ ಕುರಿತು ಮಾತನಾಡಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಗ್ರಾಮ ಪಂಚಾಯಿತಿ ಮಟ್ಟದ ಸಿಬ್ಬಂದಿಯಿಂದ ಹಿಡಿದು ಜೆಸ್ಕಾಂ (GESCOM), ಕಂದಾಯ, ಪ್ರವಾಸೋದ್ಯಮ ಮತ್ತು 'ಹವಾಮಾ' (HWHAMA) ಸೇರಿದಂತೆ ವಿವಿಧ ಇಲಾಖೆಗಳ 53ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳ ವಿರುದ್ಧ ಈ ದೂರು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
"ಹಂಪಿಯ ಅತ್ಯಂತ ಸಂರಕ್ಷಿತ (Core) ವಲಯದಲ್ಲಿ ಯಾವುದೇ ಅನಧಿಕೃತ ವಾಣಿಜ್ಯ ಚಟುವಟಿಕೆಗಳನ್ನು ನಡೆಸಬಾರದು ಎಂದು ಸುಪ್ರೀಂ ಕೋರ್ಟ್ ಅತ್ಯಂತ ಸ್ಪಷ್ಟ ನಿರ್ದೇಶನ ನೀಡಿದೆ. ಆದರೂ, ನನ್ನ ಭೇಟಿಯ ಸಂದರ್ಭದಲ್ಲಿ ಇಂತಹ ಹಲವು ಅಕ್ರಮ ಕಟ್ಟಡಗಳು ಕಾರ್ಯಾಚರಿಸುತ್ತಿರುವುದು ಕಂಡುಬಂದಿದೆ," ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ನೀಡಲಾದ ಅನುಮತಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹವಾಮಾ ವ್ಯಾಪ್ತಿಯಲ್ಲಿ ಬರೋಬ್ಬರಿ 500ಕ್ಕೂ ಹೆಚ್ಚು ಅಕ್ರಮ ಹೋಮ್‌ಸ್ಟೇಗಳು, ರೆಸಾರ್ಟ್‌ಗಳು, ಹೋಟೆಲ್‌ಗಳು, ಲಾಡ್ಜ್‌ಗಳು ಮತ್ತು ಅಂಗಡಿಗಳು ಕಾರ್ಯಾಚರಿಸುತ್ತಿರಬಹುದು ಎಂದು ಅವರು ಅಂದಾಜಿಸಿದ್ದಾರೆ.
ಯುನೆಸ್ಕೋ ಮಾರ್ಗಸೂಚಿಗಳ ಉಲ್ಲಂಘನೆ
ಹಂಪಿಯ ಸಾಂಸ್ಕೃತಿಕ ಮತ್ತು ಪುರಾತತ್ತ್ವ ಪ್ರಾಮುಖ್ಯತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಅದರ ಸಂರಕ್ಷಿತ ಮತ್ತು ಬಫರ್ ವಲಯಗಳಲ್ಲಿ ಅನಧಿಕೃತ ವಾಣಿಜ್ಯ ನಿರ್ಮಾಣಗಳು, ರೆಸಾರ್ಟ್‌ಗಳು ಮತ್ತು ಹೋಮ್‌ಸ್ಟೇಗಳನ್ನು ಯುನೆಸ್ಕೋ ಮಾರ್ಗಸೂಚಿಗಳ ಅಡಿಯಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಈ ರೀತಿಯ ಅಕ್ರಮಗಳನ್ನು ತಡೆಯಲು ವಿಫಲರಾಗಿದ್ದಷ್ಟೇ ಅಲ್ಲದೆ, ಕೆಲ ಪ್ರಕರಣಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಅನುಮತಿಯನ್ನೂ ನೀಡಿದ್ದಾರೆ ಎಂದು ಉಪಲೋಕಾಯುಕ್ತರು ಚಾಟಿ ಬೀಸಿದ್ದಾರೆ.
ಹಂಪಿಯಲ್ಲಿ ನಡೆಯುತ್ತಿರುವ ಅಕ್ರಮ ವಾಣಿಜ್ಯ ಚಟುವಟಿಕೆಗಳು ಹಾಗೂ ಅನಧಿಕೃತ ಪ್ರವಾಸೋದ್ಯಮ ಸಂಸ್ಥೆಗಳ ಕುರಿತು ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಜುಲೈ 25 ರಂದು ಹಂಪಿಗೆ ಅಧಿಕೃತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ರಕ್ಷಿತ ಪ್ರದೇಶದಲ್ಲಿ ಅಣಬೆಯಂತೆ ಬೆಳೆದು ನಿಂತಿರುವ ಅನಧಿಕೃತ ಹೋಮ್‌ಸ್ಟೇಗಳ ಬಗ್ಗೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.
ಪರಿಶೀಲನೆಯ ವೇಳೆ, ಪಂಚಾಯತ್ ಅಥವಾ ಹವಾಮಾದಿಂದ ಕಡ್ಡಾಯ ಅನುಮೋದನೆ ಅಥವಾ ಪರವಾನಗಿ ಪಡೆಯದೆ ಕನಿಷ್ಠ 250 ಅಕ್ರಮ ಹೋಮ್‌ಸ್ಟೇಗಳು ಕಾರ್ಯಾಚರಿಸುತ್ತಿವೆ ಎಂದು ಅಧಿಕಾರಿಗಳು ಅವರ ಗಮನಕ್ಕೆ ತಂದಿದ್ದರು. ಇದರಿಂದ ಕೆರಳಿದ ಉಪಲೋಕಾಯುಕ್ತರು, ಶಾಸನಬದ್ಧ ಅನುಮತಿಗಳೇ ಇಲ್ಲದೆ ಇಷ್ಟೊಂದು ಬೃಹತ್ ಸಂಖ್ಯೆಯ ಉದ್ಯಮಗಳು ಕಾರ್ಯಾಚರಿಸಲು ಹೇಗೆ ಸಾಧ್ಯವಾಯಿತು ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಗ್ರಾಮ ಪಂಚಾಯಿತಿಗಳ ವಿರುದ್ಧ ಆಕ್ರೋಶ
ಈ ವಿಚಾರವಾಗಿ ಪ್ರತಿಕ್ರಿಯಿಸಿದ 'ಹವಾಮಾ'ದ ಮಾಜಿ ಹಿರಿಯ ಅಧಿಕಾರಿಯೊಬ್ಬರು, "ಹೋಮ್‌ಸ್ಟೇ ಅಥವಾ ಇತರ ವಾಣಿಜ್ಯ ಮಳಿಗೆಗಳಿಗೆ ಅನುಮೋದನೆ ನೀಡುವ ಯಾವುದೇ ಅಧಿಕಾರ ನಮಗಿಲ್ಲ. ವಿಜಯನಗರ ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳ ಆದೇಶದಂತೆ ಹೋಮ್‌ಸ್ಟೇಗಳನ್ನು ಸ್ಥಾಪಿಸಲು ಅನುಮತಿ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿತ್ತು. ಈ ಅಕ್ರಮ ಹೋಮ್‌ಸ್ಟೇಗಳ ಹಾವಳಿ ವ್ಯಾಪಕವಾಗಿದ್ದು, ನಾವು ಈ ಹಿಂದೆ ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸ್‌ಗಳನ್ನು ನೀಡಿದ್ದೆವು," ಎಂದು ಸ್ಪಷ್ಟನೆ ನೀಡಿದ್ದಾರೆ.


