ಪೊನ್ನಂಪೇಟೆ ತಾಲೂಕಿನ ಪೊರಾಡು ಗ್ರಾಮದಲ್ಲಿ, ಪ್ರವಾಸೋದ್ಯಮವು ಗ್ರಾಮಕ್ಕೆ ಮಾರಕವಾಗಲಿದೆ ಎಂಬ ಆತಂಕದಿಂದ ರೆಸಾರ್ಟ್ ಮತ್ತು ಹೋಂ ಸ್ಟೇ ಸ್ಥಾಪನೆಗೆ ಅವಕಾಶ ನೀಡದಿರಲು ಗ್ರಾಮಸ್ಥರು ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದಾರೆ. 

ಕನ್ನಡಪ್ರಭ ವಾರ್ತೆ ಮಡಿಕೇರಿ (ಏ.13): ಪೊನ್ನಂಪೇಟೆ ತಾಲೂಕು ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊರಾಡು ಗ್ರಾಮದಲ್ಲಿ ರೆಸಾರ್ಟ್, ಹೋಂ ಸ್ಟೇ ಸ್ಥಾಪನೆಗೆ ಅವಕಾಶ ನೀಡದಿರಲು ಗ್ರಾಮಸ್ಥರು ನಿರ್ಣಯ ಕೈಗೊಂಡಿದ್ದಾರೆ. ಊರೋರ್ಮೆಯಲ್ಲಿ ಈ ಹಿಂದೆಯೇ ಈ ಬಗ್ಗೆ ಕೈಗೊಂಡ ನಿರ್ಣಯವನ್ನು ಸರ್ವಾನುಮತದಿಂದ ವಿಶೇಷ ಮಹಾಸಭೆಯಲ್ಲಿ ಅಂಗೀಕರಿಸಲಾಯಿತು. ಪ್ರವಾಸೋದ್ಯಮ ಗ್ರಾಮಕ್ಕೆ ಮಾರಕವಾಗಲಿದೆ ಎಂಬ ಮುನ್ನೆಚ್ಚರಿಕೆಯಿಂದ ಈ ನಿರ್ಣಯವನ್ನು ಗ್ರಾಮದ ಅಧ್ಯಕ್ಷ ಬಲ್ಯ ಮೀದೇರಿರ ಪ್ರಕಾಶ್ ಅಧ್ಯಕ್ಷತೆಯಲ್ಲಿ ಕೈಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿರ್ಣಯದ ಪ್ರತಿಯನ್ನು ಬಿರುನಾಣೆ ಗ್ರಾಮ ಪಂಚಾಯಿತಿ ಅವಧಿ ಪೂರ್ವ ಅಧ್ಯಕ್ಷ ಅಮ್ಮತ್ತಿರ ರಾಜೇಶ್ ಹಾಗೂ ಪಿಡಿಒ ಪ್ರಕಾಶ್ ಮತ್ತು ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ರವೀಂದ್ರ ಅವರನ್ನು ಗ್ರಾಮಕ್ಕೆ ಕರೆದು ನಿರ್ಣಯದ ಪ್ರತಿಯನ್ನು ನೀಡಿದರು. ಈ ಸಂದರ್ಭ ಸುಮಾರು 15 ವರ್ಷಗಳ ಹಿಂದೆಯೇ ಗ್ರಾಮದಲ್ಲಿ ಯಾವುದೇ ಹೋಂ ಸ್ಟೇ ಹಾಗೂ ರೆಸಾರ್ಟ್ ನಿರ್ಮಾಣಕ್ಕೆ ನಿರಪೇಕ್ಷಣಾ ಪತ್ರ ನೀಡದಂತೆ ಗ್ರಾಮಸ್ಥರು ಮನವಿ ಮಾಡಿದ್ದು, ಅದರಂತೆ ಇದುವರೆಗೆ ಯಾವುದೇ ರೆಸಾರ್ಟ್ ಹಾಗೂ ಹೋಂ ಸ್ಟೇಗೆ ನಿರಪೇಕ್ಷಣಾ ಪತ್ರ ನೀಡಿಲ್ಲ ಎಂದು ಗ್ರಾಮಕ್ಕೆ ಆಗಮಿಸಿದ ಗ್ರಾಪಂ ಅವಧಿ ಪೂರ್ವ ಅಧ್ಯಕ್ಷರು ಹಾಗೂ ಪಿಡಿಒ ಸ್ಪಷ್ಟಪಡಿಸಿದರು. ಗ್ರಾಮ ಪಂಚಾಯಿತಿಯಿಂದಲೂ ನಿರ್ಣಯ ಕೈಗೊಳ್ಳಲಾಗಿದ್ದು, ಇದನ್ನು ಪೊರಾಡು ಗ್ರಾಮದಲ್ಲಿ ಹೋಂ ಸ್ಟೇ, ರೆಸಾರ್ಟ್ ನಿರ್ಮಿಸುತ್ತಿರುವ ಮಾಲೀಕರಿಗೆ ಸ್ಥಳದಲೇ ನೀಡಿ ತಿಳಿವಳಿಕೆ ನೀಡಿದರು.