Asianet Suvarna News Asianet Suvarna News

ಸೊಳ್ಳೆಗಳ ನಿಯಂತ್ರಣಕ್ಕೆ ಗಪ್ಪಿ ಮೀನು ಪ್ರಯೋಗ: ಇದು ಲಾರ್ವಾ ತಿಂದು ಬದುಕುವ ಜಲಚರ

ಜಿಲ್ಲೆಯಲ್ಲಿ ಸದ್ಯ ಡೆಂಘೀ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಜಿಲ್ಲೆಯ ಬಹುತೇಕ ಎಲ್ಲ ಆಸ್ಪತ್ರೆಗಳಲ್ಲಿ ಡೆಂಘೀ ನಿಂದ ಬಳಲುತ್ತಿರುವವರು ಭಾರೀ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ.
 

guppy fish trial for mosquito control at shivamogga gvd
Author
First Published Jun 24, 2024, 6:10 PM IST

ಗಣೇಶ್‌ ತಮ್ಮಡಿಹಳ್ಳಿ

ಶಿವಮೊಗ್ಗ (ಜೂ.24): ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈಗಾಗಲೇ ಸೋಂಕಿತರ ಸಂಖ್ಯೆ 200ರ ಗಡಿ ದಾಟಿರುವುದನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಡೆಂಘೀ ರೋಗಕ್ಕೆ ಕಾರಣವಾಗುವ ಸೊಳ್ಳೆಯ ಉತ್ಪತ್ತಿ ನಿಯಂತ್ರಣಕ್ಕೆ ಇದೀ ಆರೋಗ್ಯ ಇಲಾಖೆ ಅಧಿಕಾರಿಗಳು ಗಪ್ಪಿ ಮೀನಿನ ಬಳಕೆಗೆ ಮುಂದಾಗಿದ್ದಾರೆ.

ಜಿಲ್ಲೆಯಲ್ಲಿ ಸದ್ಯ ಡೆಂಘೀ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಜಿಲ್ಲೆಯ ಬಹುತೇಕ ಎಲ್ಲ ಆಸ್ಪತ್ರೆಗಳಲ್ಲಿ ಡೆಂಘೀ ನಿಂದ ಬಳಲುತ್ತಿರುವವರು ಭಾರೀ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡುವ ಜೊತೆಗೆ ಡೆಂಘೀ ಹರಡುವ ಸೊಳ್ಳೆ ಉತ್ಪತ್ತಿ ನಿಯಂತ್ರಣಕ್ಕೆ ಆಡಳಿತ ಗಮನ ಹರಿಸಿದೆ. ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿಕೊಂಡರೆ ಈ ಬಾರಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಬಾರಿ ಜೂನ್‌ 20ವರೆಗೆ ಕೇವಲ 83 ಪ್ರಕರಣಗಳು ದಾಖಲಾಗಿದ್ದವು. ಈ ಬಾರಿ ಡೆಂಘೀ ಪ್ರಕರಣಗಳ ಸಂಖ್ಯೆ 236ಕ್ಕೆ ಏರಿಕೆಯಾಗಿದೆ.

ಸಿದ್ದರಾಮಯ್ಯ ಸಿಎಂ ಆಗಿರುವವರೆಗೂ ಪಂಚ ಯೋಜನೆಗಳಿರುತ್ತವೆ: ಶಾಸಕ ಬಸವರಾಜ ರಾಯರೆಡ್ಡಿ

ಸೊಳ್ಳೆ ಉತ್ಪತ್ತಿ ನಿಯಂತ್ರಣ: ಹೀಗಾಗಿ ಡೆಂಘೀ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಜಿಲ್ಲೆಯ ಆರೋಗ್ಯ ಇಲಾಖೆ ಗಪ್ಪಿ ಮೀನುಗಳನ್ನು ಬೆಳೆಸುವ ಪ್ರಯೋಗಕ್ಕೆ ಮುಂದಾಗಿದೆ. ಗಪ್ಪಿ ಮೀನು ಬೆಳೆಸಿ ಸೊಳ್ಳೆಗಳ ಲಾರ್ವಾ ನಿಯಂತ್ರಿಸುವ ಪ್ರಯೋಗಕ್ಕೆ ಮುಂದಾಗಿದ್ದು, ಗಾತ್ರದಲ್ಲಿ ಚಿಕ್ಕದಾಗಿರುವ ಗಪ್ಪಿ ಫಿಶ್‌ಗಳು ಲಾರ್ವಾಗಳನ್ನು (ಸೊಳ್ಳೆಯ ಮೊಟ್ಟೆ) ತಿಂದು ಬದುಕುವ ಜಲಚರಗಳಾಗಿವೆ. ಗಪ್ಪಿ ಫಿಶ್‌ಗಳು ಹೇರಳವಾಗಿ ಬೆಳೆಯುವ ನೀರಿನಲ್ಲಿ ಸೊಳ್ಳೆಗಳ ಲಾರ್ವಾ ಇರಲು ಸಾಧ್ಯವಿಲ್ಲ. ಇದರಿಂದ ಸೊಳ್ಳೆಗಳ ಉತ್ಪತ್ತಿ ಗಣನೀಯವಾಗಿ ನಿಯಂತ್ರಣವಾಗುತ್ತದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ಎಲ್ಲಿ ಬಿಡಲಾಗುತ್ತೆ ಈ ಮೀನು?: ಸಾಮಾನ್ಯವಾಗಿ ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿ ಮಾಡುತ್ತವೆ. ತೆಂಗಿನಕಾಯಿ ಚಿಪ್ಪು, ಬಳಸಿ ಬಿಸಾ ಕಿದ ಟಯರ್‌ಗಳು ಮೊದಲಾದವುಗಳಲ್ಲಿ ಮಳೆಗಾಲದಲ್ಲಿ ಹೆಚ್ಚಾಗಿ ನೀರು ನಿಲ್ಲುತ್ತಿದ್ದು ಈ ನೀರನ್ನು ಖಾಲಿ ಮಾಡಲು ಸಾಧ್ಯವಿದೆ. ಆದರೆ, ಕೆಲವೆಡೆ ಪಾಳು ಬಾವಿ, ಹೊಂಡ ಮೊದಲಾದೆಡೆ ನಿಂತ ನೀರನ್ನು ಖಾಲಿ ಮಾಡಲು ಸಾಧ್ಯವಿಲ್ಲ. ಇಂಥ ಕಡೆ ಗಪ್ಪಿ ಫಿಶ್‌ಗಳನ್ನು ಬಿಟ್ಟು ಸೊಳ್ಳೆಗಳ ಲಾರ್ವಾ ನಿಯಂತ್ರಿ ಸಲು ಸಾಧ್ಯವಿದೆ. ಇಂಥ ನೀರು ಖಾಲಿ ಮಾಡಲಾಗದ ಸ್ಥಳಗಳನ್ನು ಗುರುತಿಸಿ ಆರೋಗ್ಯ ಸಹಾಯಕಿಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯ ಮೂಲಕ ಗಪ್ಪಿ ಫಿಶ್‌ಗಳನ್ನು ಬಿಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಲಾರ್ವಾ ಸಮೀಕ್ಷೆ: ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಗ್ರಾಪಂ ಸದಸ್ಯರ ಹಾಗೂ ಸಾರ್ವಜನಿಕರ ಸಭೆ ನಡೆಸಿ ಸಾಂಕ್ರಾಮಿಕ ರೋಗಗಳ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ವಾರಕ್ಕೊಮ್ಮೆ ಜ್ವರ ಹಾಗೂ ಲಾರ್ವಾ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ವಾರಕ್ಕೊಮ್ಮೆ ಡ್ರೈ ಡೇ: ಜಿಲ್ಲೆಯಲ್ಲಿ ಸೊಳ್ಳೆಯಲ್ಲಿ ನಿಯಂತ್ರಣದ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೂ ಕಾರ್ಯಾಗಾರದ ಮೂಲಕ ಡೆಂಘೀ ಪ್ರಕರಣ ಹಾಗೂ ಸೊಳ್ಳೆ ನಿಯಂತ್ರಣದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಡೆಂಘೀ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಜಿಲ್ಲೆಯ ಆರೋಗ್ಯ ಇಲಾಖೆ ಗಪ್ಪಿ ಮೀನುಗಳನ್ನು ಬೆಳೆಸುವ ಪ್ರಯೋಗ ಒಂದೆಡೆಯಾದರೆ ಇನ್ನೊಂಡೆ ವಾರಕ್ಕೊಮ್ಮೆ ಡ್ರೈ ಡೇ ಮೂಲಕವೂ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಲು ಚಿಂತಿಸಲಾಗಿದೆ.

ಏನಿದು ಡ್ರೈ ಡೇ?: ವಾರದಲ್ಲಿ ಒಂದು ಮನೆಯಲ್ಲಿರುವ ತೊಟ್ಟೆ, ಡ್ರಮ್‌ಗಳು ಸೇರಿದಂತೆ ಇತರೆ ನೀರು ಸಂಗ್ರಹಿಸುವ ಸ್ಥಳಗಳನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸಿ ಒಂದು ದಿನ ಒಣಗಲು ಬಿಟ್ಟು ಮರು ದಿನ ನೀರನ್ನು ತುಂಬಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದಲೂ ಸೊಳ್ಳೆ ಉತ್ಪತ್ತಿಯನ್ನು ತಡೆಯಬಹುದು ಎನ್ನುವುದು ಅಧಿಕಾರಿಗಳ ಮಾಹಿತಿ.

ರಾಜ್ಯ ಸರ್ಕಾರಕ್ಕೆ 5039 ಶಿಫಾರಸುಗಳ 7 ವರದಿ ಸಲ್ಲಿಕೆ: ಶಾಸಕ ಆರ್.ವಿ.ದೇಶಪಾಂಡೆ

ವಾರಗಟ್ಟೆ ನಿಲ್ಲುವ ನೀರಿನಿಂದ ಸೊಳ್ಳೆ ಉತ್ಪತ್ತಿ ಹೆಚ್ಚಾಗುವ ಕಾರಣದಿಂದಾಗಿ ಮಳೆಗಾಲದಲ್ಲಿ ಹೆಚ್ಚಾಗಿ ನೀರು ನಿಲ್ಲುತ್ತದೆ. ಇಂಥ ಕಡೆ ಗಪ್ಪಿ ಫಿಶ್‌ಗಳನ್ನು ಬಿಟ್ಟು ಸೊಳ್ಳೆಗಳನ್ನು ನಾಶ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಈ ಬಗ್ಗೆ ಬೆಗಳ್ಳೆ ಕಸ ಒಯ್ಯುವ ವಾಹನಗಳಲ್ಲಿ ಆಡಿಯೋ ಹಾಕುವ ಮೂಲಕ ಮಾಹಿತಿಯೂ ನೀಡಲಾಗುತ್ತಿದೆ. ಗ್ರಾಪಂ ಪಿಡಿಓಗಳ ಸಭೆ ಕರೆದು ಗ್ರಾಮೀಣ ಭಾಗದಲ್ಲಿ ಇದು ಹೆಚ್ಚು ಫಲಕಾರಿಯಾಗುವಂತೆ ನೋಡಿಕೊಳ್ಳಲು ತಿಳಿಸಲಾಗಿದೆ.
-ಡಾ.ನಟರಾಜ್‌, ಡಿಎಚ್‌ಒ, ಶಿವಮೊಗ್ಗ.

Latest Videos
Follow Us:
Download App:
  • android
  • ios