ರಾಜ್ಯ ಸರ್ಕಾರಕ್ಕೆ 5039 ಶಿಫಾರಸುಗಳ 7 ವರದಿ ಸಲ್ಲಿಕೆ: ಶಾಸಕ ಆರ್.ವಿ.ದೇಶಪಾಂಡೆ
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷನಾಗಿ ನಾನು ಜನವರಿಯಲ್ಲಿ ಅಧಿಕಾರ ವಹಿಸಿಕೊಂಡಾಗ 99 ಶಿಫಾರಸುಗಳು ಮಾತ್ರ ಅನುಷ್ಠಾನಗೊಂಡಿವೆ ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ಹಳಿಯಾಳ (ಜೂ.24): ಆಡಳಿತದಲ್ಲಿ ಸರಳತೆ, ಪಾರದರ್ಶಕತೆ ಹಾಗೂ ಸಕಾಲದಲ್ಲಿ ನಾಗರಿಕ ಸೇವೆಗಳನ್ನು ಕಡಿಮೆ ಖರ್ಚಿನಲ್ಲಿ ಒದಗಿಸಲು ಹಾಗೂ ಇಲಾಖೆಗಳ ಕಾರ್ಯನಿರ್ವಹಣೆ ಸುಧಾರಣೆಗೆ ಪ್ರಸಕ್ತ ಸಾಲಿನ ಜನವರಿ ಅಂತ್ಯಕ್ಕೆ 39 ಇಲಾಖೆಗಳಿಗೆ ಸಂಬಂಧಿಸಿದ 5039 ಶಿಫಾರಸುಗಳುಳ್ಳ 7 ವರದಿಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ಹಳಿಯಾಳದಲ್ಲಿ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷನಾಗಿ ನಾನು ಜನವರಿಯಲ್ಲಿ ಅಧಿಕಾರ ವಹಿಸಿಕೊಂಡಾಗ 99 ಶಿಫಾರಸುಗಳು ಮಾತ್ರ ಅನುಷ್ಠಾನಗೊಂಡಿವೆ. ಆಯೋಗವು ಈಗಾಗಲೇ ಮಾಡಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಕುರಿತು ಹೆಚ್ಚಿನ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ, ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗೆ ಪತ್ರಗಳ ಮೂಲಕ ತಿಳಿಸಲಾಗಿತ್ತು.
ಕಳೆದ ತಿಂಗಳಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಲಾಗಿದೆ. ಅಲ್ಲದೇ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಅನುಷ್ಠಾನದ ಬಗ್ಗೆ ಮಾಸಿಕ ಸಭೆಗಳಲ್ಲಿಯೂ ಪರಿಶೀಲಿಸಲು ತಿಳಿಸಲಾಗಿತ್ತು. ಇದರ ಪರಿಣಾಮ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವಲ್ಲಿ ಗಣನೀಯ ಪ್ರಗತಿ ಕಂಡುಬಂದಿದೆ ಎಂದಿದ್ದಾರೆ.
ಗ್ಯಾರಂಟಿ ಎನ್ನುತ್ತಿರುವ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯೇ ಮುಗಿದಿದೆ: ಶಾಸಕ ಯತ್ನಾಳ್
ಪ್ರಗತಿ ವಿವರ: ಕಂದಾಯ ಇಲಾಖೆಗೆ ಸಂಬಂಧಿಸಿದ ಒಟ್ಟು 528 ಶಿಫಾರಸುಗಳಲ್ಲಿ 205 ಅನುಷ್ಠಾನಗೊಳಿಸಾಗಿದೆ. 76 ಅನುಷ್ಠಾನದ ಹಂತದಲಿದ್ದು, 51 ಪರಿಶೀಲನೆಯಲ್ಲಿವೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗ ಸಂಬಂಧಿಸಿದ 111 ಶಿಫಾರಸುಗಳಲ್ಲಿ 37 ಅನುಷ್ಠಾನಗೊಳಿಸಲಾಗಿದೆ. 18 ಅನುಷ್ಠಾನದ ಹಂತದಲ್ಲಿವೆ, 18 ಪರಿಶೀಲನೆಯಲ್ಲಿವೆ. ಸಾರಿಗೆ ಇಲಾಖೆಗೆ ಸಂಬಂಧಿಸಿದ 217 ಶಿಫಾರಸುಗಳಲ್ಲಿ 117 ಅನುಷ್ಠಾನಗೊಳಿಸಲಾಗಿದೆ ಹಾಗೂ 4 ಅನುಷ್ಠಾನದ ಹಂತದಲ್ಲಿವೆ ಹಾಗೂ 96 ಪರಿಶೀಲನೆಯಲ್ಲಿವೆ ಎಂದಿದ್ದಾರೆ.