Asianet Suvarna News Asianet Suvarna News

ಪಾಠ ಮಾಡಬೇಕಿದ್ದ ಅತಿಥಿ ಉಪನ್ಯಾಸಕರು ಈಗ ತೋಟ ಕೆಲಸದಲ್ಲಿ!

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮಾಡಲಾಗಿದ್ದು, ಎಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡಬೇಕಾದ ಅತಿಥಿ ಉಪನ್ಯಾಸಕರು ಈಗ ತಮ್ಮ ಕುಟುಂಬ ನಿರ್ವಹಣೆಗಾಗಿ ತೋಟ ಕೆಲಸಕ್ಕೆ ತೆರಳುವ ಕಷ್ಟದ ಪರಿಸ್ಥಿತಿ ಬಂದೊದಗಿದೆ.

 

Guest lecturer works in agriculture field during lockdown
Author
Bangalore, First Published May 10, 2020, 9:31 AM IST

ಮಡಿಕೇರಿ(ಮೇ 10): ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಮಾಡಲಾಗಿದ್ದು, ಎಲ್ಲರೂ ಸಂಕಷ್ಟಕ್ಕೆ ಒಳಗಾಗಿದ್ದಾರೆ. ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡಬೇಕಾದ ಅತಿಥಿ ಉಪನ್ಯಾಸಕರು ಈಗ ತಮ್ಮ ಕುಟುಂಬ ನಿರ್ವಹಣೆಗಾಗಿ ತೋಟ ಕೆಲಸಕ್ಕೆ ತೆರಳುವ ಕಷ್ಟದ ಪರಿಸ್ಥಿತಿ ಬಂದೊದಗಿದೆ. ಈಗಾಗಲೇ ಜಿಲ್ಲೆಯ ಕೆಲವು ಅತಿಥಿ ಉಪನ್ಯಾಸಕರು ತಮ್ಮ ಕುಟುಂಬ ನಿರ್ವಹಣೆಗಾಗಿ ಈ ಹಾದಿ ಹಿಡಿದಿದ್ದಾರೆ. ಇನ್ನೂ ಕೆಲವರು ಯಾವುದೇ ಕೆಲಸ ಇಲ್ಲದೆ ಮನೆಯಲ್ಲೇ ಕಷ್ಟದ ದಿನ ದೂಡುತ್ತಿದ್ದಾರೆ.

ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಕುಶಾಲನಗರ, ಸೋಮವಾರಪೇಟೆ, ನಾಪೋಕ್ಲು, ಗೋಣಿಕೊಪ್ಪ ಸೇರಿದಂತೆ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 100ಕ್ಕೂ ಅ​ಧಿಕ ಮಂದಿ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಲಾಕ್‌ಡೌನ್‌ನಿಂದ ಕಳೆದ ಒಂದೂವರೆ ತಿಂಗಳಿನಿಂದ ಕೆಲಸ ಹಾಗೂ ವೇತನವಿಲ್ಲದೆ ಕಂಗಾಲಾಗಿದ್ದಾರೆ.

ಜೇವರ್ಗಿಯಲ್ಲಿ ಸಹೋದರರಿಬ್ಬರ ಬರ್ಬರ ಕೊಲೆ: ಕಾರಣ..?

ಕೊರೋನಾ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಕೋರ್ಸ್‌ಗಳನ್ನು ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರಿಂದ ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳುತ್ತಾರೋ ಇಲ್ಲವೋ ಎಂಬ ಚಿಂತೆಯೂ ಇವರಿಗೆ ಕಾಡುತ್ತಿದೆ. ಈಗಾಗಲೇ ಕೆಲವು ಅತಿಥಿ ಉಪನ್ಯಾಸಕರು ಕೂಡ ಆಲ್‌ಲೈನ್‌ ಮೂಲಕ ತರಬೇತಿಗಳನ್ನು ತೆಗೆದುಕೊಂಡಿದ್ದು, ಪಠ್ಯಗಳನ್ನು ಪೂರ್ಣಗೊಳಿಸಿದ್ದಾರೆ. ಆದರೆ ಕೆಲಸದ ವೇತನ ಸಿಗುತ್ತದೆಯೇ ಎಂಬ ಖಾತರಿ ಇಲ್ಲದಂತಾಗಿದೆ.

ಹಲವಾರು ವರ್ಷಗಳಿಂದ ಅತಿಥಿ ಉಪನ್ಯಾಕರಾಗಿ ಕೆಲವರು ದುಡಿಯುತ್ತಿದ್ದು, ಈಗ ಕೆಲಸವಿಲ್ಲದೆ ದಿಕ್ಕು ತೋಚದಂತಾಗಿದೆ. 10 ವರ್ಷ ಮೇಲ್ಪಟ್ಟು ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಬೇಕೆಂದು ಮನವಿ ಮಾಡಿಕೊಂಡರೂ ಯಾವುದೇ ಪರಿಹಾರವಾಗಿಲ್ಲ. ಈಗ ಸರ್ಕಾರದಲ್ಲಿ ಅನುದಾನ ಇಲ್ಲದಿರುವುದರಿಂದ ಕಾಯಂ ಮಾಡಿಕೊಳ್ಳಿ ಎನ್ನುವುದು ಕೂಡ ಕಷ್ಟಎನ್ನುತ್ತಾರೆ ಅತಿಥಿ ಉಪನ್ಯಾಸಕರು.

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ ಮಾಡಿ ಕೊರೋನಾ ಮೇಲಾಕಲು ಮುಂದಾದ ಕಿರಾತಕಿ!

5 ತಿಂಗಳಿನಿಂದ ವೇತನವಿಲ್ಲ: ಅತಿಥಿ ಉಪನ್ಯಾಸಕರಿಗೆ ಕಳೆದ 5 ತಿಂಗಳಿನಿಂದ ವೇತನ ದೊರಕದೆ ಪರದಾಡುತ್ತಿದ್ದಾರೆ. ತಮ್ಮ ಕುಟುಂಬ ನಿರ್ವಹಣೆಗಾಗಿ ಸಮಸ್ಯೆಯಾಗುತ್ತಿದೆ. ಸಾಮಾನ್ಯವಾಗಿ ಜೂನ್‌ ತಿಂಗಳಲ್ಲಿ ಪದವಿ ಕಾಲೇಜುಗಳಿಗೆ ತರಗತಿಗಳು ಆರಂಭವಾಗುತ್ತಿತ್ತು. ಆದರೆ ಈಗ ಕೊರೋನಾ ಹಿನ್ನೆಲೆಯಲ್ಲಿ ಸೆಪ್ಟಂಬರ್‌ ನಂತರ ಕಾಲೇಜು ಆರಂಭವಾಗುತ್ತದೆ ಎನ್ನಲಾಗುತ್ತಿದೆ. ಇದರಿಂದ ಮುಂದಿನ ಐದು ತಿಂಗಳ ಕಾಲ ವೇತನ ದೊರಕುತ್ತದೆಯೇ ಎಂಬ ಆತಂಕ ಉಂಟಾಗಿದೆ.

ಕೆಲವರು ಸ್ವಂತ ಕೃಷಿ ಮಾಡುತ್ತಿದ್ದಾರೆ: ಕೊಡಗು ಜಿಲ್ಲೆಯ ಕೆಲವು ಅತಿಥಿ ಉಪನ್ಯಾಸಕರು ತಮ್ಮ ಸ್ವಂತ ಕಾಫಿ ತೋಟ ಹಾಗೂ ಗದ್ದೆಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಆದರೆ ಕಡು ಬಡತನದಿಂದ ಓದಿ ವಿದ್ಯಾಭ್ಯಾಸ ಮಾಡಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವರು ಈಗ ಜೀವನೋಪಾಯಕ್ಕಾಗಿ ತೋಟ ಕೆಲಸ ಹಾಗೂ ವಿವಿಧ ಕೆಲಸ ಮಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಪರಿಹಾರಕ್ಕೆ ಒತ್ತಾಯ

ಕೊರೋನಾ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರಿಗೆ ಕೆಲಸವಿಲ್ಲದೆ ಮುಂದಿನ ಭವಿಷ್ಯ ನಿರೂಪಿಸುವಲ್ಲಿ ದಾರಿ ಕಾಣದಾಗಿದ್ದಾರೆ. ತನ್ನ ಹಾಗೂ ಸಾಂಸಾರಿಕ ಜೀವನ ಸಾಗಿಸಲು ಅಸಾಧ್ಯವಾಗುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಸರ್ಕಾರವೂ ಕೆಲಸವಿಲ್ಲದ ಅತಿಥಿ ಉಪನ್ಯಾಸಕರಿಗೆ ಬಿಪಿಎಲ್‌ ಕಾರ್ಡ್‌, ಆರೋಗ್ಯ ತಪಾಸಣೆ, ಇಎಎಸ್‌ಐ, ಪಿಎಫ್‌, ದಿನ ಬಳಕೆಯ ಆಹಾರ ಸಾಮಗ್ರಿಗಳನ್ನು ಪೂರೈಸಬೇಕು ಎಂದು ಜಿಲ್ಲಾ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಆಗ್ರಹಿಸಿದೆ.

ಪತ್ನಿ ಮಕ್ಕಳ ನೋಡಲು ಟ್ರಕ್‌ನಲ್ಲಿ ಬಂದ ಬಾಗಲಕೋಟೆ ಕಾರ್ಮಿಕ!

ಕಳೆದ ಐದು ತಿಂಗಳಿನಿಂದ ನಮಗೆ ಗೌರವಧನ ಸಿಕ್ಕಿಲ್ಲ. ನಮ್ಮ ಪಾಡು ಕೇಳೋರಿಲ್ಲ. ಜಿಲ್ಲೆಯಲ್ಲಿ ಈಗಾಗಲೇ 100ಕ್ಕೂ ಅಧಿಕ ಮಂದಿ ಅತಿಥಿ ಉಪನ್ಯಾಸಕರಿದ್ದು, ಕೆಲವರು ತೋಟ ಕೆಲಸಕ್ಕೆ ಹೋಗುತ್ತಿದ್ದಾರೆ. ಇನ್ನು ಕೆಲವರು ಕೆಲಸವಿಲ್ಲದೆ ಮನೆಯಲ್ಲೇ ಇರುವಂತಾಗಿದೆ. ಸರ್ಕಾರ ಈಗಾಗಲೆ ಎಲ್ಲರಿಗೂ ಪರಿಹಾರ ನೀಡುತ್ತಿದೆ. ಆದ್ದರಿಂದ ವೇತನವಿಲ್ಲದೆ ಕಂಗಾಲಾಗಿರುವ ಅತಿಥಿ ಉಪನ್ಯಾಸಕರಿಗೂ ಪರಿಹಾರವನ್ನು ನೀಡಬೇಕು ಎಂದಯ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಜಿಲ್ಲಾ ಅಧ್ಯಕ್ಷ ಶ್ಯಾಮ್‌ ಪ್ರಸಾದ್‌ ತಿಳಿಸಿದ್ದಾರೆ.

ಕೊರೋನಾದಿಂದ ನಾವು ಕೂಡ ಸಂಕಷ್ಟಎದುರಿಸುತ್ತಿದ್ದೇವೆ. ಜೂನ್‌ನಲ್ಲಿ ತರಗತಿಗಳು ಆರಂಭವಾಗುತ್ತಿತ್ತು. ಈಗ ಸೆಪ್ಟೆಂಬರ್‌ ನಂತರ ಕಾಲೇಜು ಆರಂಭವಾಗುತ್ತದೆ ಎನ್ನಲಾಗಿದೆ. ಇದರಿಂದ ಮುಂದಿನ ಐದು ತಿಂಗಳ ಕಾಲ ನಮಗೆ ವೇತನ ದೊರಕುತ್ತದೆಯೇ ಎಂಬ ಆತಂಕ ಉಂಟಾಗಿದೆ. ಮುಂದೆ ಭವಿಷ್ಯದ ಚಿಂತೆ ಕೂಡ ನಮ್ಮನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಂಬಳಕ್ಕಾಗಿ ತೋಟ ಕೆಲಸ ಮಾಡುತ್ತಿದ್ದೇವೆ ಎಂದು ಅತಿಥಿ ಉಪನ್ಯಾಸಕರು ಗೋಣಿಕೊಪ್ಪ ಮಂದೆಯಂಡ ವನಿತ್‌  ತಿಳಿಸಿದ್ದಾರೆ.

ಪಾಸ್ ಇಲ್ಲ, ಮಾಸ್ಕ್ ಇಲ್ಲ, ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕ ಮೇಲೆ ಕೇಸ್!

ಕಳೆದ ಡಿಸೆಂಬರ್‌ನಿಂದ ನಮಗೆ ಕೆಲಸ ಮಾಡಿದ ಗೌರವ ದಿನ ಕೂಡ ಸಿಕ್ಕಿಲ್ಲ. ಇದನ್ನೇ ನಂಬಿಕೊಂಡು ಸಂಸಾರ ಹೇಗೆ ಸಾಗಿಸುವುದು ಎಂಬ ಚಿಂತೆ ಎದುರಾಗಿದೆ. ಮುಂದೆ ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಬೇರೆ ಯಾವುದೇ ಕೆಲಸ ಕೂಡ ಸಿಗುತ್ತಿಲ್ಲ ಎಂದು ಮಡಿಕೇರಿ ಅತಿಥಿ ಉಪನ್ಯಾಸಕಿ ಪೂರ್ಣಿಮಾ ತಿಳಿಸಿದ್ದಾರೆ.

ಕೈಯಲ್ಲಿ ಹಣವಿಲ್ಲದೆ ಕುಟುಂಬ ನಿರ್ವಹಣೆಗೆ ತೀರಾ ಕಷ್ಟವಾಗುತ್ತಿದೆ. ಕೆಲಸವಿಲ್ಲದೆ ಕಾರ್ಪೆಂಟರ್‌ ಕೆಲಸ ಮಾಡುವಂತಾಗಿದೆ. ಅತಿಥಿ ಉಪನ್ಯಾಸಕರ ಸಮಸ್ಯೆ ಪರಿಹಾರಕ್ಕೆ ಕಳೆದ 15 ವರ್ಷಗಳಿಂದ ಮನವಿ ಮಾಡುತ್ತಿದ್ದರೂ ನಮ್ಮ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಮ್ಮ ಪರಿಸ್ಥಿತಿಯನ್ನು ಹೇಳಿಕೊಳ್ಳಲೂ ನಾಚಿಕೆಯಾಗುತ್ತಿದೆ ಎಂದು ಮಡಿಕೇರಿ ಅತಿಥಿ ಉಪನ್ಯಾಸಕ ಸುರೇಶ್‌ ತಿಳಿಸಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು

Follow Us:
Download App:
  • android
  • ios