Guest Lecturer Suicide : ಖಿನ್ನತೆಯಿಂದ ಅತಿಥಿ ಉಪನ್ಯಾಸಕನ ಆತ್ಮಹತ್ಯೆ

 

  •  ಕೆಲಸ ಕಾಯಂ ಆಗದ್ದಕ್ಕೆ ಖಿನ್ನತೆ :  ಅತಿಥಿ ಉಪನ್ಯಾಸಕನ ಆತ್ಮಹತ್ಯೆ
  •  ಅತಿಥಿ ಉಪನ್ಯಾಸಕರ ಪ್ರತಿಭಟನೆ ವೇಳೆಯೇ ಘಟನೆ
Guest Lecturer Suicide in Udupi  snr

 ಮಣಿಪಾಲ/ತೀರ್ಥಹಳ್ಳಿ (ಡಿ.24):  ಕೆಲಸ ಕಾಯಮಾತಿ, ಉದ್ಯೋಗ ಭದ್ರತೆ, ಗೌರವಧನ ಹೆಚ್ಚಳ ಇತ್ಯಾದಿ ಬೇಡಿಕೆಗಳನ್ನಿಟ್ಟುಕೊಂಡು ಅತಿಥಿ ಉಪನ್ಯಾಸಕರು (Guest Lectures ) ರಾಜ್ಯಾದ್ಯಂತ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲೇ ಅತಿಥಿ ಉಪನ್ಯಾಸಕರೊಬ್ಬರು ಆತ್ಮಹತ್ಯೆಗೆ (Suicide) ಶರಣಾಗಿರುವ ದಾರುಣ ಘಟನೆ ವರದಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಂಪ್ಯೂಟರ್‌ ವಿಭಾಗದ ಅತಿಥಿ ಉಪನ್ಯಾಸಕ ಶ್ರೀಹರ್ಷ ಶ್ಯಾನುಭೋಗ್‌(38) ಆತ್ಮಹತ್ಯೆಗೆ ಶರಣಾದವರು. ಅವರು ಉಡುಪಿಯ (Udupi) ಎಂಜಿಎಂ ಕಾಲೇಜಿನ ಸಿಬ್ಬಂದಿ ವಸತಿ ಗೃಹದಲ್ಲಿ ಗುರುವಾರ ಮುಂಜಾನೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತ್ನಿ ಶಿಲ್ಪಾ ಶ್ಯಾನುಭೋಗ್‌ ಅವರೂ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದು ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಕಳೆದ 13 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿದ್ದ ಶ್ರೀಹರ್ಷ ತಮ್ಮ ಸೇವೆ ಕಾಯಂ ಆಗದ ಹಿನ್ನೆಲೆಯಲ್ಲಿ ತೀವ್ರ ಖಿನ್ನತೆಗೊಳಗಾಗಿದ್ದರು. ಮಕ್ಕಳ (children ) ಭವಿಷ್ಯದ ದೃಷ್ಟಿಯಿಂದ ಆತಂಕಕ್ಕೆ ಒಳಗಾಗಿದ್ದ ಅವರು ಆತ್ಮೀಯರೊಂದಿಗೆ ತಮ್ಮ ನೋವನ್ನು ತೋಡಿಕೊಂಡಿದ್ದರು. ಅಲ್ಲದೇ ಕಳೆದ ಮೂರು ತಿಂಗಳಿನಿಂದ ಮಾನಸಿಕವಾಗಿ ಕುಗ್ಗಿದ್ದ ಅವರು ಇದಕ್ಕಾಗಿಯೇ ಉಡುಪಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಸಹ ಪಡೆಯುತ್ತಿದ್ದರು. ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶ್ರೀ ಹರ್ಷ ಶ್ಯಾನುಬೋಗ್‌ ಅವರ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ (Police Station) ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿಗಳ (Students) ಮೆಚ್ಚಿನ ಉಪನ್ಯಾಸಕರಾಗಿದ್ದ ಹರ್ಷ ಶ್ಯಾನುಬೋಗ್‌ ಸಹೋದ್ಯೋಗಿಗಳೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಅಂತ್ಯಕ್ರಿಯೆ ಗುರುವಾರ ಸಂಜೆ ಹೊಸನಗರ (Hosanagara) ತಾಲೂಕಿನ ಯಡೂರಿನಲ್ಲಿ ಜರುಗಿತು.

ಸಮಸ್ಯೆಗೆ ತಿಂಗಳಲ್ಲಿ ಪರಿಹಾರ :   ಸೇವಾ ಭದ್ರತೆ, ವೇತನ ಹೆಚ್ಚಳ ಸೇರಿದಂತೆ ಪದವಿ ಕಾಲೇಜುಗಳ 14 ಸಾವಿರ ಅತಿಥಿ ಉಪನ್ಯಾಸಕರ (Guest Lecturers) ಬೇಡಿಕೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಚಿಸಿರುವ ಉನ್ನತ ಮಟ್ಟದ ಸಮಿತಿಗೆ ಒಂದು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ (C. N. Ashwath Narayan) ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೂಚನೆ ನೀಡಲಾಗಿದೆ.

ಸಮಿತಿ ನೀಡಿದ ವರದಿ ಆಧರಿಸಿ ಅತಿಥಿ ಉಪನ್ಯಾಸಕರ ಬೇಡಿಕೆ ಹಾಗೂ ಸಮಸ್ಯೆಗಳಿಗೆ ನ್ಯಾಯಯುತ ಪರಿಹಾರ ಕಲ್ಪಿಸಲು   ಕ್ರಮ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆ ಬಳಿಕ ಮಾಧ್ಯಮಗಳೊಂದಿಗೆ (Media) ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ, ಧಾರವಾಡ (Dharwad) ಸೇರಿದಂತೆ ವಿವಿಧೆಡೆ ಕರ್ತವ್ಯ ಬಹಿಷ್ಕರಿಸಿ ಮುಷ್ಕರ ನಿರತರಾಗಿರುವ ಅತಿಥಿ ಉಪನ್ಯಾಸಕರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದರು.

ಸಮಿತಿಯ ವರದಿ ಬಂದ ನಂತರ ಅತಿಥಿ ಉಪನ್ಯಾಸಕರ ಸಮಸ್ಯೆ ಮತ್ತು ಬೇಡಿಕೆಗಳಿಗೆ ಪಶ್ಚಿಮ ಬಂಗಾಳ (West Bengal) ಮತ್ತು ಇತರ ರಾಜ್ಯಗಳಲ್ಲಿ ಹೇಗೆ ಪರಿಹಾರ ಕಂಡುಕೊಳ್ಳಲಾಗಿದೆ ಎನ್ನುವುದನ್ನು ಪರಿಶೀಲಿಸಿ, ಮುಖ್ಯಮಂತ್ರಿಗಳ ಜತೆ ಚರ್ಚಿಸಿ ರಾಜ್ಯದಲ್ಲೂ ನ್ಯಾಯ ಒದಗಿಸಲಾಗುವುದು, ಅತಿಥಿ ಉಪನ್ಯಾಸಕರಿಗೆ ನೇಮಕಾತಿ (Recruitment) ಸಂದರ್ಭದಲ್ಲಿ ಆದ್ಯತೆ ಕೊಡಬೇಕೆ ಅಥವಾ ಇವರಿಗೆ ಒಂದು ಗೌರವಾರ್ಹ ವೇತನವನ್ನು ನಿಗದಿಪಡಿಸಿ ಸೇವೆಯಲ್ಲಿ ಮುಂದುವರೆಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು ಎಂದರು. ಸಭೆಯಲ್ಲಿ ಪರಿಷತ್‌ ಸದಸ್ಯರುಗಳಾದ ಅರುಣ ಶಹಾಪುರ, ವೈ.ಎ.ನಾರಾಯಣಸ್ವಾಮಿ, ಕೆ.ಟಿ.ಶ್ರೀಕಂಠೇಗೌಡ, ಭೋಜೇಗೌಡ, ಆಯನೂರು ಮಂಜುನಾಥ್‌ ಮತ್ತಿತರರು ಇದ್ದರು.

Latest Videos
Follow Us:
Download App:
  • android
  • ios