ಸ್ಥಳೀಯ ಸಂಸ್ಥೆಗಳ ಆಸ್ತಿಗಳಿಗೆ ತುರ್ತಾಗಿ ನಮೂನೆ-3 ವಿತರಿಸಲು ಸಿಎಂಗೆ ಜಿಟಿಡಿ ಮನವಿ
ಮೈಸೂರು ಮಹಾ ನಗರ ಪಾಲಿಕೆ, ನಗರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಆಸ್ತಿಗಳಿಗೆ ತುರ್ತಾಗಿ ನಮೂನೆ-3 ವಿತರಿಸಲು ಕ್ರಮ ಕೈಗೊಳ್ಳುವಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ
ಮೈಸೂರು: ಮೈಸೂರು ಮಹಾ ನಗರ ಪಾಲಿಕೆ, ನಗರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಆಸ್ತಿಗಳಿಗೆ ತುರ್ತಾಗಿ ನಮೂನೆ-3 ವಿತರಿಸಲು ಕ್ರಮ ಕೈಗೊಳ್ಳುವಂತೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.
ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಬೋಗಾದಿ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ, ಸಾರ್ವಜನಿಕ ದೂರುಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿ.ಟಿ. ದೇವೇಗೌಡ ಅವರು, ನಮೂನೆ-3 ನೀಡಲು ಆಗುತ್ತಿರುವ ತೊಂದರೆ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಶಾಸಕರಿಗೆ ವಿವರಿಸಿದ ಅಧಿಕಾರಿಗಳು ಹಿಂದಿನ ಸರ್ಕಾರದ ಹಂತದಲ್ಲಿ ಕಾನೂನು ಸಚಿವರು, ನಗರಾಭಿವೃದ್ಧಿ ಸಚಿವರು ಹಾಗೂ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದರಿಂದ ನಗರಾಭಿವೃದ್ಧಿ ಇಲಾಖೆಯ ಆದೇಶ ಹೊರಡಿಸಿದ್ದರೂ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಸಮಪರ್ಕವಾಗಿ ನಮೂನೆ-3 ವಿತರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು.
ಅಧಿಕಾರಿಗಳಿಂದ ಮಾಹಿತಿ ಪಡೆದ ಜಿ.ಟಿ. ದೇವೇಗೌಡ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯನ್ನು ಖುದ್ದು ಭೇಟಿ ಮಾಡಿ, ಸಾರ್ವಜನಿಕರು ಆಸ್ತಿಗಳನ್ನು ಮಾರಲು, ಕೊಳ್ಳಲು, ಸಾಲ ಸೌಲಭ್ಯ ದೊರಕದೆ ತೊಂದರೆಯಾಗುತ್ತಿದ್ದು, ಮೈಸೂರು ಮಹಾನಗರ ಪಾಲಿಕೆ, ನಗರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯ ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳನ್ನು ಕೈಗೊಳ್ಳಲು ಸರ್ಕಾರದಿಂದ ಯಾವುದೇ ಅನುದಾನ ಬರುವುದಿಲ್ಲ. ಹೀಗಾಗಿ, ಬಡಾವಣೆಯ ಆಸ್ತಿಗಳಿಗೆ ಖಾತಾ ಮಾಡಿಕೊಟ್ಟರೆ ಹಾಗೂ ಕಂದಾಯ ವಸೂಲಿ ಮಾಡಿದ ಅನುದಾನಗಳಿಂದ ಮಾತ್ರ ಸಂಬಂಧಪಟ್ಟಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಒಳಚರಂಡಿ ವ್ಯಸವ್ಥೆ ಮಾಡಬಹುದು. ಹೀಗಾಗಿ, ಬಿಬಿಎಂಪಿ ವಿತರಿಸುವ ಖಾತಾ-ಎ ಮತ್ತು ಬಿ ರೀತಿಯಲ್ಲೇ ವಿತರಿಸಲು ಕ್ರಮ ಕೈಗೊಳ್ಳುವಂತೆ ಅವರು ಕೋರಿದ್ದಾರೆ.
ಎ ಖಾತಾ ರದ್ದು ಮಾಡದಂತೆ ಮನವಿ
ಬೆಂಗಳೂರು(ಜು.25): ಬಿಬಿಎಂಪಿ ವ್ಯಾಪ್ತಿಯಲ್ಲಿ 45 ಸಾವಿರ ‘ಬಿ’ ಖಾತಾ ಆಸ್ತಿಗಳಿಗೆ ಅಕ್ರಮವಾಗಿ ‘ಎ’ ಖಾತೆ ನೀಡಿರುವುದು ಪತ್ತೆಯಾಗಿದ್ದು, ಇದೀಗ ಆ ‘ಎ’ ಖಾತಾಗಳನ್ನು ರದ್ದು ಮಾಡುವ ಕುರಿತಂತೆ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ. ಅಷ್ಟರೊಳಗೆ ಖಾತಾ ರದ್ದು ಪ್ರಕ್ರಿಯೆ ಕೈಬಿಡುವಂತೆ ಹಾಗೂ ಅಕ್ರಮದಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಬಿಬಿಎಂಪಿ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ.
ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದಂತೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತಾ ಆಸ್ತಿಗಳಿಗೆ ಅಕ್ರಮವಾಗಿ ಎ ಖಾತಾ ನೀಡಿರುವ 45,133 ಪ್ರಕರಣಗಳು ಪತ್ತೆಯಾಗಿವೆ. ಹೀಗೆ ಪತ್ತೆಯಾಗಿರುವ ಎ ಖಾತಾ ಆಸ್ತಿಗಳನ್ನು ಬಿ ಖಾತಾ ವಹಿಗೆ ಮರಳಿ ಸೇರ್ಪಡೆ ಮಾಡುವಂತೆ ಎಲ್ಲ ವಲಯ ಆಯುಕ್ತರಿಗೆ ಸೂಚಿಸಲಾಗಿದೆ. ಅದಾದ ನಂತರ ಅಕ್ರಮದಲ್ಲಿ ಪಾಲ್ಗೊಂಡಿರುವ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಷ್ಟರೊಳಗೆ ಎ ಖಾತಾ ರದ್ದು ಮಾಡದಂತೆ ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳಿಂದ ಬಿಬಿಎಂಪಿ ಮುಖ್ಯ ಆಯುಕ್ತರು ಸೇರಿದಂತೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ತಿಳಿಸಿದರು.