ತಮ್ಮ ಮುಂದಿನ ರಾಜಕೀಯ ನಡೆಯ ಸುಳಿವು ಕೊಟ್ಟ ಜಿ ಟಿ ದೇವೇಗೌಡ
- ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಹೊಸ ಸುಳಿವು
- ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ಸುಳಿವು ನೀಡಿದ ಜಿ ಟಿ ದೇವೇಗೌಡ
ಮೈಸೂರು (ಜು.12): ಮುಂದಿನ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸುವ ಬಗ್ಗೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಒಲವು ಹೊಂದಿದ್ದು, ಈ ಸಂಬಂಧ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಎರಡು ವರ್ಷಗಳಿಂದ ಜೆಡಿಎಸ್ ಪಕ್ಷದ ಸಭೆಗಳಲ್ಲಿ ಪಾಲ್ಗೊಂಡಿಲ್ಲ. ಮುಂದೆ ಬಿಜೆಪಿ ಅಥವಾ ಕಾಂಗ್ರೆಸ್ ಸೇರಬೇಕೋ, ಜೆಡಿಎಸ್‌ನಲ್ಲೇ ಇರಬೇಕೋ ಎಂಬುದರ ಬಗ್ಗೆ ತೀರ್ಮಾನ ಮಾಡಿಲ್ಲ. ಪಕ್ಷೇತರವಾಗಿ ನಿಂತರೂ ಅಚ್ಚರಿ ಪಡಬೇಕಿಲ್ಲ ಎಂದಿದ್ದಾರೆ.
'ಜನರ ಅಭಿಪ್ರಾಯ ಕೇಳಿ ಯಾವ ಪಕ್ಷ ಸೇರಬೇಕೆಂದು ನಿರ್ಧಾರ: ಬಿಜೆಪಿ ಸೇರಿ ಸೋತಿದ್ದು ಸಾಕು' ..
ನಗರದಲ್ಲಿ ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ನನ್ನ ಮಗ ಜಿ.ಡಿ. ಹರೀಶ್‌ಗೌಡ ಇಂಡಿಪೆಂಡೆಂಟ್ ಆಗಿ ನಿಂತರೂ ಗೆಲ್ಲುತ್ತೇವೆ. ಚಾಮುಂಡೇಶ್ವರಿ, ಹುಣಸೂರು, ಕೆ.ಆರ್.ನಗರ ಎಲ್ಲಿ ನಿಂತರೂ ಗೆಲ್ಲುತ್ತೇವೆ. ಜನರ ಪ್ರೀತಿ, ವಿಶ್ವಾಸದಿಂದ ಧೈರ್ಯ ಬಂದಿದೆ. ಸ್ವತಂತ್ರವಾಗಿ ನಿಲ್ಲುವ ಮಾರ್ಗ ಇದ್ದೇ ಇದೆ. ಇಷ್ಟುವರ್ಷ ರಾಜಕಾರಣ ಮಾಡಿದ್ದರಿಂದ ಈ ಧೈರ್ಯ ಬಂದಿದೆ. ಜನ ಕೂಡ ನಮಗೆ ಪಕ್ಷ ಬೇಡ, ಜಿ.ಟಿ.ದೇವೇಗೌಡರು ಬೇಕು ಅಂತಿದ್ದಾರೆ. ಇನ್ನೂ ಎರಡು ವರ್ಷ ಸಮಯಾವಕಾಶ ಇದೆ. ಸನ್ನಿವೇಶ ನೋಡಿಕೊಂಡು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಅವರು ಹೇಳಿದರು.
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಹೇಳಿದ್ದು ಹೀಗೆ...!
ಇದೇವೇಳೆ ಮುಂದಿನ ಜಿಪಂ, ತಾಪಂ ಚುನಾವಣೆಯಲ್ಲಿ ನಮ್ಮ ಬೆಂಬಲಿಗರನ್ನು ಪಕ್ಷೇತರವಾಗಿ ಕಣಕ್ಕಿಳಿಸುವ ಚಿಂತನೆ ಇದೆ. ಈ ಬಗ್ಗೆ ಅಭಿಪ್ರಾಯಸಂಗ್ರಹಿಸಲು ಮುಂದಿನ ವಾರದಿಂದ ಕ್ಷೇತ್ರ ಪರ್ಯಟನ ಮಾಡುತ್ತೇನೆ ಎಂದರು.
ಎಚ್.ಡಿ.ದೇವೇಗೌಡರ ಮಾತುಕತೆ: ಮಾಜಿ ಪ್ರಧಾನಿ ದೇವೇಗೌಡರು ಹಲವು ದಿನಗಳ ಬಳಿಕ ನನ್ನ ಜೊತೆ ಪೋನ್‌ನಲ್ಲಿ ಮಾತನಾಡಿದರು. ಬರುವ 2023ಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. 33 ಎಂಎಲ್ಎಗಳು ನಮ್ಮಲ್ಲಿ ಇದ್ದೀರಿ, ಯಾವುದೇ ಕಾರಣಕ್ಕೂ ಪಕ್ಷ ಬಿಡಬೇಡಿ ಎಂದು ಹೇಳಿರುವುದಾಗಿ ಜಿ.ಟಿ.ದೇವೇಗೌಡರು ತಿಳಿಸಿದರು.
ಸುಮಲತಾಗೆ ಬಿರುಕು, ದುರಸ್ತಿ ವ್ಯತ್ಯಾಸ ಗೊತ್ತಿಲ್ಲ
ಕೆಆರ್‌ಎಸ್ ಡ್ಯಾಂ ಗೇಟ್ ಬದಲಾವಣೆ ಮಾಡಲಾಗುತ್ತಿದೆ. ಸುಮಲತಾ ಅವರಿಗೆ ಬಿರುಕು ಮತ್ತು ದುರಸ್ತಿಯ ನಡುವಿನ ವ್ಯತ್ಯಾಸ ಗೊತ್ತಿಲ್ಲ. ಹೀಗಾಗಿ ದುರಸ್ತಿ ಕಾಮಗಾರಿಯನ್ನೇ ಬಿರುಕು ಅಂತ ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ಗೊಂದಲ ಸೃಷ್ಟಿಮಾಡುವುದು ಸರಿಯಲ್ಲ.
-ಜಿ.ಟಿ.ದೇವೇಗೌಡ, ಶಾಸಕ