ಸಂದೇಶ ಕಳುಹಿಸಿ ವಂಚನೆ ಮಾಡುವ ಯತ್ನ, ಬೆಳಗಾವಿಯಲ್ಲಿ ಈಗಾಗಲೇ ಇಂತಹ ಸಂದೇಶ ಪಡೆದಿರುವ ಗ್ರಾಹಕರು. 

ಜಗದೀಶ ವಿರಕ್ತಮಠ

ಬೆಳಗಾವಿ(ಜು.14): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಯೋಜನೆ ಇನ್ನೇನು ಅನುಷ್ಠಾನವಾಗಿ ಜನರು ಖುಷಿ ಪಡುವ ಮೊದಲೇ ವಂಚಕರ ಜಾಲ ವ್ಯವಸ್ಥಿತವಾಗಿ ಗ್ರಾಹಕರಿಗೆ ಮಂಕು ಬೂದಿ ಎರಚುವ ಯತ್ನ ನಡೆಸುತ್ತಿದೆ. ಗ್ರಾಹಕರಿಗೆ ಸಂದೇಶಗಳನ್ನು ಕಳುಹಿಸಿ ವ್ಯವಸ್ಥಿತವಾಗಿ ಮೋಸಮಾಡಲು ಈ ಜಾಲಗಳು ಕ್ರಿಯಾಶೀಲವಾಗಿರುವುದು ಕಂಡುಬಂದಿದೆ. ಈ ರೀತಿ ಬಂದ ಸಂದೇಶಗಳಿಗೆ ಒಂದು ವೇಳೆ ಗ್ರಾಹಕರು ಹಣ ಹಾಕಿದರೆ ಪಂಗನಾನ ಶತಃಸಿದ್ಧ.

ಹಲವು ಅಡೆತಡೆಗಳ ನಡುವೆಯೂ ರಾಜ್ಯ ಸರ್ಕಾರ ಜು.1 ರಿಂದ ಅನ್ವಯವಾಗುವಂತೆ ಗೃಹಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದಾಗಿ ಈಗಾಗಲೇ ಪ್ರಕಟಿಸಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ನಯವಂಚಕರು ತಮ್ಮ ಮನೆಯ ಹಳೆಯ ವಿದ್ಯುತ್‌ ಬಾಕಿ ಪಾವತಿಸದಿದ್ದಲ್ಲಿ ನಿಮ್ಮ ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಸಂದೇಶ ಕಳುಹಿಸುತ್ತಿದ್ದಾರೆ. ಹಣ ತುಂಬದೆ ಹೋದಲ್ಲಿ ತಕ್ಷಣ ಸಂಪರ್ಕ ಮಾಡುವಂತೆ ವಿದ್ಯುತ ಸರಬರಾಜು ಕಂಪನಿಯ ಕಚೇರಿ ಹೆಸರನಲ್ಲಿ ಮೊಬೈಲ್‌ಗಳಿಗೆ ಮೆಸೆಜ್‌ ಮಾಡುತ್ತಿದ್ದಾರೆ. ಇಂತಹ ಮೆಸೆಜ್‌ಗಳನ್ನು ನಂಬುವುದಾಗಲಿ. ಬಾಕಿ ಪಾವತಿಸದಿದ್ದಲ್ಲಿ ಗೃಹಜ್ಯೋತಿ ಯೋಜನೆಯಿಂದ ವಂಚಿತರಾಗುತ್ತೇವೆ ಎಂಬ ಭಾವಿಸಿಕೊಂಡು ಹಣ ಹಾಕಿದಲ್ಲಿ ನೀವು ವಂಚನೆಗೆ ಒಳಗಾಗುವುದು ಖಚಿತ.

ಇನ್ಮುಂದೆ ಗ್ರಾಹಕರಿದ್ದಲ್ಲಿಗೆ ತೆರಳಿ ಗೃಹಜ್ಯೋತಿಗೆ ನೋಂದಣಿ ಮಾಡಲಿವೆ ಎಸ್ಕಾಂಗಳು

ಇಂತಹದ್ದೊಂದು ಪ್ರಕರಣ ಬೆಳಗಾವಿ ನಗರದಲ್ಲಿ ಈಗ ಬೆಳಕಿಗೆ ಬಂದಿದೆ. ಅಲ್ಲದೇ ಇಂತಹ ಮೆಸೇಜ್‌ಗಳು ಹಲವರಿಗೂ ಬಂದಿರುವ ಬಗ್ಗೆಯೂ ಚರ್ಚೆಯಾಗುತ್ತಿದೆ. ಬೆಳಗಾವಿ ಸದಾಶಿವ ನಗರದ ಸಂಜಯ ಎಂಬುವರಿಗೆ ಜು.1 ರಂದು ಬೆಳಗ್ಗೆ 11.06 ಗಂಟೆಗೆ ಮೆಸೇಜ್‌ ಬಂದಿದ್ದು, ಅದರಲ್ಲಿ ‘ಡಿಯರ್‌ ಕಸ್ಟಮರ್‌ ಯುವರ್‌ ಇಲೆಕ್ಟ್ರಿಕ್‌ಸಿಟಿ ವಿಲ್‌ ಬಿ ಡಿಸ್‌ಕನೆಕ್ಟೆಡ್‌ ಟುನೈಟ್‌ 9.30 ಪಿಎಂ ಪ್ರಿವಿಯಸ್‌ ಮಂತ್‌ ಬಿಲ್‌ ನಾಟ್‌ ಅಪಡೇಟ್‌ ಪ್ಲೀಸ್‌ ಕಾಲ್‌ ಇಲೆಕ್ಟ್ರಿಕ್‌ಸಿಟಿ ಆಫೀಸ್‌’ ಎಂದು ಬರೆದು ಮೆಸೆಜ್‌ ಕಳುಹಿಸಲಾಗಿದೆ.

ಆದರೆ ವಿದ್ಯುತ್‌ ಪ್ರಸರಣ ನಿಗಮವು ಈಗಾಗಲೇ ವಿಶೇಷ ಪ್ರಕಟಣೆಯನ್ನೂ ಹೊರಡಿಸಿ, ಗ್ರಾಹಕರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ಗ್ರಾಹಕರು ವಿದ್ಯುತ್‌ ಬಿಲ್‌ನ ಹಿಂಬಾಕಿ ಉಳಿಸಿಕೊಂಡಿದ್ದರೂ ಗೃಹಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆ. ಬಾಕಿ ಬಿಲ್‌ ಅನ್ನು ಸೆಪ್ಟೆಂಬರ್‌ 30 ರೊಳಗೆ ಪಾವತಿಸಬಹುದಾಗಿದೆ ಎಂಬುವುದು ಸೇರಿದಂತೆ ಗೃಹಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಹಲವು ಮಾಹಿತಿ ಜತೆಗೆ ಸ್ಪಷ್ಟನೆಯನ್ನೂ ನೀಡಿದೆ. ಆದರೆ ಗೃಹಜ್ಯೋತಿ ಯೋಜನೆಯ ಬಗ್ಗೆ ಮಾಹಿತಿ ಕೊರತೆ ಇರುವುದರಿಂದಾಗಿ ಮೊಬೈಲ್‌ಗಳಿಗೆ ಬರುವ ಮೆಸೆಜ್‌ಗಳನ್ನೇ ಜನರು ನಂಬುವಂತಾಗಿದೆ. ಬಾಕಿ ಉಳಿಸಿಕೊಳ್ಳದೇ, ಪ್ರತಿ ತಿಂಗಳು ಕಡ್ಡಾಯವಾಗಿ ವಿದ್ಯುತ್‌ ಬಿಲ್‌ ಪಾವತಿಸಿದವರಿಗೆ ಮಾತ್ರ ಇಂತಹ ಮೇಸೆಜ್‌ಗಳ ಮೇಲೆ ಅನುಮಾನ ಮೂಡುವಂತಾಗಿದೆ.

ಗೃಹಜ್ಯೋತಿ ಫಲಾನುಭವಿಗಳಿಗೆ ಶಾಕ್‌ ಮೇಲೆ ಶಾಕ್‌..!: ಆರಂಭದಲ್ಲಿ ಸಲ್ಲಿಸಿದ್ದ ಅರ್ಜಿಗಳಲ್ಲಿ ತಾಂತ್ರಿಕ ದೋಷ ?

ಒಬ್ಬ ಜನ ಸಾಮಾನ್ಯ ನಾನು. ಕರೆಂಟ್‌ ಬಿಲ… ನಿಯಮಿತವಾಗಿ ತುಂಬುತ್ತಿದ್ದೇನೆ ಮತ್ತು ಯಾವುದೇ ತಿಂಗಳು ತಪ್ಪಿಲ್ಲ. ಆದರೂ ನನಗೆ ಈ ತರಹ ಮೆಸೇಜ್‌ ಮತ್ತು ಕಾಲ… ಬಂದಿದೆ. ನಾವು ಕೂಡ ಆ ನಂಬರಗೆ ಕಾಲ್‌ ಮಾಡಿ ಪರೀಕ್ಷಿಸಿದರೆ ನಂಬರ್‌ ಸ್ವಿಚ್ಡ್‌ಆಫ್‌ ಎಂದು ಬರುತ್ತಿದೆ. ಆದ್ದರಿಂದ ಇದೊಂದು ವಂಚಕರ ಗ್ಯಾಂಗ್‌ ಇರುವುದರಿಂದ ಅಧಿಕಾರಿಗಳು ಕ್ರಮ ಜರುಗಿಸಬೇಕು ಅಂತ ಸದಾಶಿವ ನಗರ ನಿವಾಸಿ ಸಂಜಯ್‌ ಹೇಳಿದ್ದಾರೆ. 

ಹೆಸ್ಕಾಂನಿಂದ ಬಾಕಿ ಬಿಲ್‌ ಪಾವತಿ ಅಥವಾ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು ಎಂಬ ಮೇಸೆಜ್‌ಗಳನ್ನು ಕಳುಹಿಸಲಾಗುತ್ತಿಲ್ಲ. ಆದ್ದರಿಂದ ಇಂತಹ ಮಸೇಜ್‌ಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಈಗಾಗಲೇ ವಿದ್ಯುತ್‌ ಪ್ರಸಕರಣ ನಿಗಮಗಳಿಂದಲೇ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಅಂತ ಬೆಳಗಾವಿ ಹೆಸ್ಕಾಂ ಅಧೀಕ್ಷಕ ಅಭಿಯಂತರ (ಪ್ರಭಾರ) ಪ್ರವೀಣ ಚಿಕ್ಕಾಡಿ ತಿಳಿಸಿದ್ದಾರೆ.