Chitradurga: ಅಧಿಕ ಮಳೆ ಬಿದ್ದರೂ ನಾಯಕನಹಟ್ಟಿಯಲ್ಲಿ ಕುಸಿದ ಶೇಂಗಾ ಬಿತ್ತನೆ!
ಅಧಿಕ ಮಳೆಯಾಗಿದ್ದರೂ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಾಯಕನಹಟ್ಟಿಹೋಬಳಿ ವ್ಯಾಪ್ತಿಯಲ್ಲಿ ಈ ಸಲ ಶೇಂಗಾ ಬಿತ್ತನೆ ಪ್ರದೇಶ ತೀರಾ ಕುಸಿದಿದೆ. ಶೇಂಗಾ ಬೆಳೆಗಾರರು ಕೃಷಿ ಈ ಗತಿಯಲ್ಲಿ ವಿಮುಖರಾಗಿರುವುದು ಅಚ್ಚರಿ ಮತ್ತು ಆತಂಕಕ್ಕೆ ಕಾರಣವಾಗಿದೆ.
ನಾಯಕನಹಟ್ಟಿ (ಆ.20): ಅಧಿಕ ಮಳೆಯಾಗಿದ್ದರೂ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಾಯಕನಹಟ್ಟಿಹೋಬಳಿ ವ್ಯಾಪ್ತಿಯಲ್ಲಿ ಈ ಸಲ ಶೇಂಗಾ ಬಿತ್ತನೆ ಪ್ರದೇಶ ತೀರಾ ಕುಸಿದಿದೆ. ಶೇಂಗಾ ಬೆಳೆಗಾರರು ಕೃಷಿ ಈ ಗತಿಯಲ್ಲಿ ವಿಮುಖರಾಗಿರುವುದು ಅಚ್ಚರಿ ಮತ್ತು ಆತಂಕಕ್ಕೆ ಕಾರಣವಾಗಿದೆ. ನಾಯಕನಹಟ್ಟಿಒಟ್ಟು ಭೂಪ್ರದೇಶದಲ್ಲಿ 36 ಸಾವಿರ ಎಕರೆಯಲ್ಲಿ ಇಲ್ಲಿನ ಶೇಂಗಾ ಬೆಳೆಗಾರರು ಶೇಂಗಾ ಕೃಷಿ ಮಾಡುತ್ತಾ ಬಂದಿದ್ದಾರೆ. 2019, 20ನೇ ಸಾಲಿನಲ್ಲಿ ಕರೋನಾ ಭೀತಿ ಆವರಿಸಿದಾಗ ಇಡೀ ಹೋಬಳಿಯಲ್ಲಿ 17 ಸಾವಿರ ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಸುರಿದ ಮಳೆರಾಯ ಕ್ರಮೇಣ ಕೈಕೊಟ್ಟಿದ್ದರಿಂದ ಶೇಂಗಾ ಇಳುವರಿ ನೆಲಕಚ್ಚಿತ್ತು ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಹೇಮಂತ್ ನಾಯ್ಕ ಅಭಿಪ್ರಾಯ ಪಡುತ್ತಾರೆ.
ದೊಡ್ಡ ರೈತರು ಶೇಂಗಾ ಉಬ್ಬಲು (ಶೇಂಗಾ ಒಣಗಿದ ಬಳ್ಳಿ) ಮಾರಿ ಬಿತ್ತನೆಯ ಅರ್ಧ ವೆಚ್ಚ ಬಂತು ಎಂದೂ ನೋವು ತೋಡಿಕೊಂಡಿದ್ದರು. ಆದರೆ, ಇದೇ ಸಾಲಿನ ಬಹುತೇಕ ರೈತರಿಗೆ ಸರ್ಕಾರದ ಪರಿಹಾರ, ಬೆಳೆವಿಮೆ ಮಾತ್ರ ದಕ್ಕಿಲ್ಲ! 2020ನೇ ಸಾಲಿನಲ್ಲಿ ರೈತರು 11,185 ಹೆಕ್ಟೇರ್‌ನಷ್ಟು ಬಿತ್ತಿದ್ದರು. ಆ ವರ್ಷದಲ್ಲಿ 415.9 ಮಿಮೀ ವಾಡಿಕೆ ಮಳೆ ಇದ್ದರೂ, 447 ಮಿಮೀ ಮಳೆಯಾಗಿತ್ತು. ಆದರೂ 7 ಸಾವಿರ ಹೆಕ್ಟೇರ್‌ನಷ್ಟುಶೇಂಗಾ ಬಿತ್ತನೆ ಭೂಮಿ ಪಾಳುಬಿದ್ದಿತ್ತು. 2021ರ ಬಿತ್ತನೆ ವರ್ಷದಲ್ಲಿ 774.6 ಮಿಲಿ ಮೀಟರ್‌ನಷ್ಟು ಮಳೆಯಾಗಿದ್ದರಿಂದ ಹೋಬಳಿಯಲ್ಲಿ 15,600 ಹೆಕ್ಟೇರ್‌ನಷ್ಟು ಶೇಂಗಾ ಬಿತ್ತನೆಯಾಗಿತ್ತು. ಕೊಂಚ ಬಿತ್ತನೆ ಪ್ರದೇಶ ವಿಸ್ತರಿಸಿಕೊಂಡಿದೆ ಎಂದು ನಿಟ್ಟುಸಿರು ಬಿಡಲಾಗಿತ್ತು.
ಬೋಪಯ್ಯಗೆ ಮಾನ ಮರ್ಯಾದೆ ಇದ್ರೆ ಮೊದಲು ಕ್ಷಮೆ ಕೇಳಲಿ: ಮಾಜಿ ಸಚಿವ ಆಂಜನೇಯ ಆಗ್ರಹ
ಆದರೆ, 22ನೇ ಸಾಲಿನಲ್ಲಿ ಆ.17ರವರೆಗೆ ಹೋಬಳಿ ವ್ಯಾಪ್ತಿಯಲ್ಲಿ 292.6 ಮಿಲಿ ಮೀಟರ್ ಮಳೆಯಾಗಿದೆ. ಈಗ ಮಘಿ ಮಳೆ ಆಗುತ್ತಿದೆ. ಆಗಸ್ಟ್ 30ರಿಂದ ಹುಬ್ಬಿ, ಸೆಪ್ಟೆಂಬರ್ 13ರಿಂದ ಉತ್ತರೆ, ಸೆ.29ರಿಂದ ಹಸ್ತ, ಅ.10ರಿಂದ ಚಿತ್ತ, ಅ.24ರಿಂದ ಸ್ವಾತಿ, ನ.8ರಿಂದ ವಿಶಾಖ ಮಳೆಗಳು ಇವೆ. ಇವುಗಳಲ್ಲಿ ಉತ್ತರೆ, ಹಸ್ತ ಇವು ದೊಡ್ಡ ಮಳೆಗಳೆಂಬ ಖ್ಯಾತಿ ಇವೆ. ಹಾಗಾಗಿ, ಈ ಬಾರಿ ಭಾರೀ ಮಳೆಗಾಲ ಮೈದುಂಬಿಕೊಂಡಿದೆ. ಆದರೂ, ಇದುವರೆಗೂ ಹೋಬಳಿ ವ್ಯಾಪ್ತಿಯಲ್ಲಿ 12,750 ಹೆಕ್ಟೇರ್ ಭೂಪ್ರದೇಶದಲ್ಲಿ ಬಿತ್ತನೆ ಮಾತ್ರ ಆಗಿದೆ. ನಿಗದಿತ ಗುರಿ ಈ ಬಾರಿಯೂ ಮುಟ್ಟಿಲ್ಲ. ಮುಂಗಾರು ಶೇಂಗಾ ಬಿತ್ತನೆ ಅವಧಿ ಇದೇ ಆಗಸ್ಟ್ 15 ಕೊನೆಯಾಗಿದೆ.
ಅಧಿಕ ವೆಚ್ಚ ಕಾರಣ: ಒಂದು ಹೆಕ್ಟೇರ್ ಪ್ರದೇಶದ ಬಿತ್ತನೆಗಾಗಿ 2.50 ಕ್ವಿಂಟಲ್ ಶೇಂಗಾ ಬೇಕಾಗುತ್ತದೆ. ಒಂದು ಕ್ವಿಂಟಲ್ ಶೇಂಗಾ ಬಿತ್ತನೆ ಬೀಜ ಮಾರುಕಟ್ಟೆಯಲ್ಲಿ 11 ಸಾವಿರ ರು. ಇದೆ. ಬೀಜಕ್ಕಾಗಿಯೇ ರೈತರು 27,500 ತೆಗೆದಿಡಬೇಕು. ಬೇಸಾಯ, ಬಿತ್ತನೆ, ಕುಂಟೆ-ರಂಟೆ, ಕೂರಿಗೆ, ಕಳೆ ಅಂದರೂ 20 ಸಾವಿರ ಬೇಕಾಗುತ್ತದೆ. ಕನಿಷ್ಠ ಅಂದರೂ ರು 50 ಸಾವಿರ ಬೇಕಾಗುತ್ತದೆ. ಆದರೆ, ಫಸಲು ಕೈಸೇರುತ್ತದೆ ಎಂಬುದು ಖಾತ್ರಿ ಇಲ್ಲ. ಈ ಕಾರಣದಿಂದಾಗಿ ರೈತರು ಶೇಂಗಾ ಬೆಳೆ ಬಿತ್ತನೆ ಎಂದರೇನೆ ಬಿಚ್ಚಿಬೀಳುವಂತಾಗಿದೆ.
ವಿಶೇಷ ಕೃಷಿ ರಿಯಾಯಿತಿಗೆ ಒತ್ತಾಯ: ಶೇಂಗಾ ಬೆಳೆಗಾರರು ಕೃಷಿಯಿಂದ ವಿಮುಖರಾಗಬಾರದು ಅಂದರೆ ಸರ್ಕಾರ ಬಿತ್ತನೆ ಬೀಜ ಮತ್ತು ಗೊಬ್ಬರವನ್ನು ವಿಶೇಷ ರಿಯಾಯಿತಿ ನೀಡಬೇಕು. ಇಲ್ಲದಿದ್ದರೆ ಕ್ರಮೇಣ ಶೇಂಗಾ ಬಿತ್ತನೆ ಪ್ರದೇಶ ಅಕ್ಕಡಿ ಬೆಳೆಯಂತೆ ಮಾಯವಾಗುವ ಕಾಲ ದೂರವಿಲ್ಲ ಎಂಬುದಾಗಿ ಮುಸ್ಟಲಗುಮ್ಮಿಯ ರೈತ ಸಣ್ಣೋಬಯ್ಯ ಆಂತಕ ವ್ಯಕ್ತಪಡಿಸುತ್ತಾರೆ.
ಶೇಂಗಾವನ್ನು ಆಂಧ್ರ ಗಡಿಭಾಗದ ಜಿಲ್ಲೆಗಳಲ್ಲಷ್ಟೇ ಪ್ರಮುಖ ವಾಣಿಜ್ಯ ಬೆಳೆಗಳಾಗಿ ಬೆಳೆಯಲಾಗುತ್ತದೆ. ಈಗ ಶೇಂಗಾ ಬೆಳೆಗಾರರ ಪರಿಸ್ಥಿತಿ ಸರಿ ಇಲ್ಲ. ಸರ್ಕಾರ ಅವರನ್ನು ರಕ್ಷಿಸಲು ಮುಂದಾಗಬೇಕು. ತೋಟಗಾರಿಕೆ ಬೆಳೆಗಳ ರಿಯಾಯಿತಿ ಮಾದರಿ ಸೌಲಭ್ಯ ನೀಡಬೇಕು.
-ಸಣ್ಣೋಬಯ್ಯ, ರೈತ ಮುಖಂಡ ಮುಸ್ಟಲಗುಮ್ಮಿ
ಮೂಢನಂಬಿಕೆ ಬಿಟ್ಟು ಮಕ್ಕಳಿಗೆ ಸಮ ಶಿಕ್ಷಣ ನೀಡಿ: ಸಚಿವ ಶ್ರೀರಾಮುಲು
ಕೃಷಿ ಅಧಿಕಾರಿಗಳೂ ಸಹ ಸರಿಯಾಗಿ ಸ್ಪಂದಿಸಲ್ಲ. ಸರ್ಕಾರದ ಯೋಜನೆಗಳನ್ನು ಸಾಂಕೇತಿಕವಾಗಿ ಪ್ರಚಾರ ಮಾಡುತ್ತಾರೆ. ಸೌಲಭ್ಯ ಪಡೆಯಲು ಹತ್ತಾರು ಕಿಲೋಮೀಟರ್ ದೂರದ ನಾಯಕನಹಟ್ಟಿಪಟ್ಟಣಕ್ಕೆ ಹೋದರೂ, ಅಧಿಕಾರಿಗಳು ಸಿಗುವುದಿಲ್ಲ. ಜಿಲ್ಲಾಡಳಿತ ನಿಷ್ಕ್ರಿಯವಾಗಿದೆ.
-ಮಹಾಂತೇಶ್, ರೈತ ಮುಸ್ಟಲಗುಮ್ಮಿ