ಉಡುಪಿಯ ಉದ್ಯಾವರದಲ್ಲಿ 108 ಆಂಬುಲೆನ್ಸ್ ಸಕಾಲಕ್ಕೆ ಬಾರದೆ ವೃದ್ಧ ರೋಗಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅವರು ತಮ್ಮ ಗೂಡ್ಸ್ ಟೆಂಪೋದಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದು ಪ್ರಾಣ ಉಳಿಸಿದ್ದಾರೆ.
ಉಡುಪಿ (ಡಿ.8): ತುರ್ತು ಆರೋಗ್ಯ ಸೇವೆಗಾಗಿ ಕರೆ ಮಾಡಿದರೂ ಸಕಾಲಕ್ಕೆ 108 ಆಂಬುಲೆನ್ಸ್ ಲಭ್ಯವಾಗದೆ ವೃದ್ಧ ರೋಗಿಯೊಬ್ಬರು ತೀವ್ರ ಸಂಕಷ್ಟಕ್ಕೆ ಸಿಲುಕಿದ ಘಟನೆ ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಮಾನವೀಯತೆ ಮೆರೆದ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು, ತಮ್ಮ ಗೂಡ್ಸ್ ಟೆಂಪೋದಲ್ಲಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
2 ಗಂಟೆ ಕಾದರೂ ಬರಲಿಲ್ಲ 108 ಆಂಬುಲೆನ್ಸ್!
ಉದ್ಯಾವರದಲ್ಲಿ ವೃದ್ಧ ರೋಗಿಯೊಬ್ಬರು ಅಸ್ವಸ್ಥಗೊಂಡಿದ್ದರು. ಕೂಡಲೇ ಕುಟುಂಬಸ್ಥರು ರಾತ್ರಿ 7:00 ಗಂಟೆಗೆ ತುರ್ತು ಸೇವೆಗಾಗಿ 108 ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ, ರಾತ್ರಿ 9:30 ಕಳೆದರೂ ಆಂಬುಲೆನ್ಸ್ ಸ್ಥಳಕ್ಕೆ ಬಂದಿಲ್ಲ. ದೂರದಿಂದ ಆಂಬುಲೆನ್ಸ್ ಬರಬೇಕಿದ್ದು, ತಡವಾಗುತ್ತದೆ ಎಂದು ಸಿಬ್ಬಂದಿಯಿಂದ ಮಾಹಿತಿ ದೊರೆತಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ಆಂಬುಲೆನ್ಸ್‌ಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಗೂಡ್ಸ್ ಟೆಂಪೋದಲ್ಲಿ ಮಂಚ ಹಾಕಿ ರಕ್ಷಣೆ:
ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗದೆ ರೋಗಿಯ ಸ್ಥಿತಿ ವಿಷಮವಾಗುತ್ತಿದ್ದಾಗ, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅವರಿಗೆ ಮಾಹಿತಿ ಮುಟ್ಟಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ವಿಶು ಶೆಟ್ಟಿ ಅವರು, ತಮ್ಮ ಗೂಡ್ಸ್ ಟೆಂಪೋದ ಹಿಂಭಾಗದಲ್ಲಿ ಮಂಚವನ್ನು ಇರಿಸಿ, ಅಸ್ವಸ್ಥ ರೋಗಿಯನ್ನು ಸುರಕ್ಷಿತವಾಗಿ ಅದರಲ್ಲಿ ಮಲಗಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಕ್ಕಿದ್ದರಿಂದ ರೋಗಿಯು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾಮಾಜಿಕ ಕಾರ್ಯಕರ್ತನ ಆಕ್ರೋಶ:
ಈ ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಶು ಶೆಟ್ಟಿ, 'ತುರ್ತು ಪರಿಸ್ಥಿತಿಯಲ್ಲಿ ಸಕಾಲಕ್ಕೆ 108 ಆಂಬುಲೆನ್ಸ್ ಸೇವೆ ದೊರಕದಿರುವುದು ಅತ್ಯಂತ ಗಂಭೀರ ವಿಷಯ. ಕಳೆದ ಒಂದು ವರ್ಷದಿಂದಲೂ ಈ ಪ್ರದೇಶದಲ್ಲಿ ಆಂಬುಲೆನ್ಸ್ ಸಮಸ್ಯೆ ಇದೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಸಂಬಂಧಪಟ್ಟವರು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡ ಬೇಡಿ' ಎಂದು ಆಗ್ರಹಿಸಿದ್ದಾರೆ.


