ಯಾದಗಿರಿಯಲ್ಲಿ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಗೆ ಬೃಹತ್ ಸಮಾವೇಶ ಆಯೋಜನೆ

ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ 30 ಸಾವಿರ ತಾಂಡಾ ನಿವಾಸಿಗಳಿಗೆ ಈ ತಿಂಗಳ ಮಾಸಾಂತ್ಯಕ್ಕೆ ಹಕ್ಕು ಪತ್ರ ವಿತರಿಸಲಾಗುವುದು ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ ಹೇಳಿದರು.

grand convention planned for the distribution of title deeds to Tanda residents in Kalaburagi  gow

ಕಲಬುರಗಿ (ನ.10) :  ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ 30 ಸಾವಿರ ತಾಂಡಾ ನಿವಾಸಿಗಳಿಗೆ ಈ ತಿಂಗಳ ಮಾಸಾಂತ್ಯಕ್ಕೆ ಹಕ್ಕು ಪತ್ರ ವಿತರಿಸಲಾಗುವುದು ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ ಹೇಳಿದರು. ಇಂದು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಯಾದಗಿರಿಯಲ್ಲಿ 2-3 ಜಿಲ್ಲೆಗಳ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಗೆ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಸಚಿವರು-ಗಣ್ಯರು ಭಾಗವಹಿಸಲಿದ್ದಾರೆ. ಹೀಗಾಗಿ ಸಮಾವೇಶಕ್ಕೆ ಜಿಲ್ಲೆಯ ಎಲ್ಲಾ ಫಲಾನುಭವಿಗಳನ್ನು ಕರೆತರಬೇಕು ಎಂದರು. ಕಳೆದ 70 ವರ್ಷದಿಂದ ಮೂಲಸೌಲಭ್ಯದಿಂದ ವಂಚಿತ ಸಮುದಾಯಕ್ಕೆ ಕಂದಾಯ ಗ್ರಾಮದ ಮೂಲಕ ಮೂಲಸೌಲಭ್ಯ ಒದಗಿಸಲು ಕಲಬುರಗಿ ಜಿಲ್ಲೆಯಲ್ಲಿ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಗೆ ಸಮರೋಪಾದಿಯಲ್ಲಿ ಸರ್ವೇ ಕಾರ್ಯ ಮುಗಿಸಿ ಹಕ್ಕು ಪತ್ರ ನೀಡಲು ಸಜ್ಜಾಗಿದ್ದು, ಇಡೀ ರಾಜ್ಯಕ್ಕೆ ಕಲಬುರಗಿ ಮಾದರಿಯಾಗಿ ಕಾರ್ಯನಿರ್ವಹಿಸಿದೆ. ಇದಕ್ಕಾಗಿ ವಿಶೇಷವಾಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಸಮುದಾಯದ ಪರವಾಗಿ ಅಭಿನಂದಿಸುವೆ ಎಂದರು.

ಜಿಲ್ಲೆಯ ಕೆಲ ತಾಂಡಾಗಳಲ್ಲಿ ಒಂದೇ ಮನೆಯಲ್ಲಿ 2-3 ಕುಟುಂಬಗಳು ವಾಸಿಸುತ್ತಿವೆ. ಇಂತಹ ಪ್ರಕರಣದಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಪ್ರತ್ಯೇಕ ಕುಟುಂಬ ಎಂದು ಪರಿಗಣಿಸಬೇಕು. 94-ಸಿ, 94-ಸಿಸಿ ನಿಯಮದಲ್ಲಿ ಜಮೀನು ಸೀಮಿತವಾಗಿ ನೀಡಲು ಅವಕಾಶವಿದೆ. ಆದರೆ 94ಡಿ ನಲ್ಲಿ ವಾಸಿಸುವ ಮನೆ ಜೊತೆಗೆ ದನದ ಕೊಟ್ಟಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಗ್ರಾಮ ಪಂಚಾಯತಿ ದಾಖಲೆ ಇಲ್ಲದ ನಿವಾಸಿಗಳಿಗೂ ಸಹ ಹಕ್ಕು ಪತ್ರ ನೀಡಬಹುದಾಗಿದೆ. ಹೀಗಾಗಿ ಅಧಿಕಾರಿಗಳು ಇದನ್ನೆಲ್ಲ ಗಮನಿಸಬೇಕು ಎಂದರು.

ತಾಂಡಾ‌ ನಿಗಮ‌ದಿಂದ ಮೌಲ್ಯ ಭರಿಕೆ:
ಹಕ್ಕು ಪತ್ರ ಪಡೆಯುವ ತಾಂಡಾ ನಿವಾಸಿಗಳು ಸರ್ಕಾರಕ್ಕೆ ಜಮೀನಿನ ಮೌಲ್ಯ ಪಾವತಿಸಬೇಕಾಗುತ್ತದೆ. ಈ ಮೌಲ್ಯವನ್ನು ಸರ್ಕಾರ ಅಥವಾ ತಾಂಡಾ ಅಭಿವೃದ್ಧಿ ನಿಗಮದಿಂದ ಭರಿಸಲಾಗುವುದು. ಈ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಡಿ.ಸಿ. ಯಶವಂತ ವಿ. ಗುರುಕರ್ ಮಾತನಾಡಿ, ಜಿಲ್ಲೆಯ 216 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಅಧಿಸೂಚನೆ ಹೊರಡಿಸಲಾಗಿದೆ. ಬಾಕಿ ಇದ್ದ ಖಾಸಗಿ ಜಮೀನಿನಲ್ಲಿರುವ 35 ತಾಂಡಾಗಳನ್ನು ಸಹ ಕರ್ನಾಟಕ ಭೂಸುಧಾರಣಾ ಕಾಯ್ದೆ-1961ರ ಕಲಂ 38-ಎ ಪ್ರಕಾರ ಇತ್ತೀಚೆಗೆ ತಾವೇ ನಮೂನೆ 2-ಇ ರಲ್ಲಿ ಅಧಿಸೂಚನೆ ಹೊರಡಿಸಿರುವುದರಿಂದ ಹಕ್ಕು ಪತ್ರ ನೀಡುವಲ್ಲಿ ಯಾವುದೇ ಸಮಸ್ಯೆವಿಲ್ಲ. ಒಟ್ಟಾರೆ ಜಿಲ್ಲೆಯ 30 ಸಾವಿರ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸಭೆಗೆ ಮಾಹಿತಿ ನೀಡಿದ ಅವರು, ಹಕ್ಕು ಪತ್ರ ವಿತರಣಾ ಸಮಾವೇಶಕ್ಕೆ ಫಲಾನುಭವಿಗಳ ಕರೆತರುವ ಜವಾಬ್ದಾರಿ ಆಯಾ ತಹಶೀಲ್ದಾರರು ವಹಿಸಬೇಕು ಎಂದು ತಿಳಿಸಿದರು.

Gadag; 35 ವರ್ಷಗಳಿಂದ ಅಭಿವೃದ್ಧಿ ಕಾಣದ ಕೊಂಡಿಕೊಪ್ಪ ತಾಂಡಾ

ಸಭೆಯಲ್ಲಿ ಶಾಸಕರಾದ ಎಂ.ವೈ.ಪಾಟೀಲ, ಡಾ.ಅವಿನಾಶ ಜಾಧವ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಮನೋಹರ ಪವಾರ, ಹಣಮಂತ ಉದನೂರ, ವ್ಯವಸ್ಥಾಪಕ ನಿರ್ದೇಶಕ ಚಂದ್ರ್ಯಾ ನಾಯಕ್, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಸಹಾಯಕ ಆಯುಕ್ತರಾದ ಪಾರ್ವತಿ, ಕಾರ್ತಿಕ್, ನಿಗಮದ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸೂರ್ಯಕಾಂತ ರಾಠೋಡ, ಡಿ.ಡಿ.ಎಲ್.ಆರ್. ಶಂಕರ ಸೇರಿದಂತೆ ಜಿಲ್ಲೆಯ ತಾಲೂಕುಗಳ ತಹಶೀಲ್ದಾರರು, ಇನ್ನಿತರ ಅಧಿಕಾರಿಗಳು ಇದ್ದರು.

Latest Videos
Follow Us:
Download App:
  • android
  • ios