Gadag; 35 ವರ್ಷಗಳಿಂದ ಅಭಿವೃದ್ಧಿ ಕಾಣದ ಕೊಂಡಿಕೊಪ್ಪ ತಾಂಡಾ
35 ವರ್ಷಗಳಿಂದ ಅಭಿವೃದ್ಧಿ ಕಾಣದ ಕೊಂಡಿಕೊಪ್ಪ ತಾಂಡಾ ಅಡರಕಟ್ಟಿಗ್ರಾಪಂ ಸಂಪೂರ್ಣ ವಿಫಲ, ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ.
ಲಕ್ಷ್ಮೇಶ್ವರ(ಅ.15): ತಾಲೂಕಿನ ಸಮೀಪದ ಅಡರಕಟ್ಟಿಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡಿಕೊಪ್ಪ ಗ್ರಾಮದಲ್ಲಿ ಅಭಿವೃದ್ಧಿ ಮರೀಚಿಕೆ. ಪಂಚಾಯಿತಿ ಆಡಳಿತ ವ್ಯವಸ್ಥೆಗೆ ಇದೊಂದು ಉದಾಹರಣೆ ಅಷ್ಟೇ. ಆಟ ಕುಂಟು ಲೆಕ್ಕಲಿಲ್ಲದ ಅಭಿವೃದ್ಧಿ ಅಧಿಕಾರಿ, ಅಸಮರ್ಥ ಆಡಳಿತದಿಂದ ಜನತೆ ಕಂಗಾಲಾಗಿದ್ದಾರೆ. ಗ್ರಾಮದ ಸಮಗ್ರ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ. ಜನರು ನಿತ್ಯ ಅನೇಕ ಸಮಸ್ಯೆಗಳನ್ನು ಹೊತ್ತು ಪಂಚಾಯಿತಿಗೆ ತಿರುಗಾಡಿ ಸುಸ್ತಾಗಿದ್ದಾರೆ. ಸರ್ಕಾರದಿಂದ ಬರುವ ಅನುದಾನವನ್ನು ಬಳಸಿ ಗ್ರಾಮವನ್ನು ಅಭಿವೃದ್ಧಿ ಪಡಿಸುವಲ್ಲಿ ಗ್ರಾಪಂ ಸಂಪೂರ್ಣ ವಿಫಲವಾಗಿದೆ ಎಂದು ಅಡರಕಟ್ಟಿಗ್ರಾಮ ಪಂಚಾಯಿತಿ ವಿರುದ್ಧ ಕೊಂಡಿಕೊಪ್ಪ ತಾಂಡಾದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ವರ್ಷಗಳಿಂದ ಗ್ರಾಮದ ಅಭಿವೃದ್ಧಿಗಾಗಿ ಗ್ರಾಮಸ್ಥರು ಗ್ರಾಪಂಗೆ ನೀಡಿದ ಮನವಿಗಳು ಮೂಲೆ ಸೇರಿವೆ. ಹಳ್ಳಿಗಳ ಅಭಿವೃದ್ಧಿಯಾಗದೆ ನಮ್ಮ ದೇಶವನ್ನು ಅಭಿವೃದ್ಧಿ ಸಾಲಿನಲ್ಲಿ ನೋಡಲು ಸಾಧ್ಯವೇ ಇಲ್ಲ. ಇಲ್ಲಿನ ಗ್ರಾಮಸ್ಥರು ಇಂದಿಗೂ ಸಮಸ್ಯೆಗಳ ಸರಮಾಲೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಮೂಲಭೂತ ಸೌಕರ್ಯ ನೀಡುವಲ್ಲಿ ಇಲ್ಲಿನ ಅಧಿಕಾರಿಗಳು ಸೋತಿದ್ದಾರೆ. ಜೋರಾಗಿ ಮಳೆ ಬಂತೆಂದರೆ ರಸ್ತೆಯಲ್ಲೇ ಕೆಂಪು ಮಣ್ಣು ಮಿಶ್ರಿತ ಮಳೆ ನೀರು ಹರಿದು ಬರುತ್ತಿದ್ದು, ಇಲ್ಲಿನ ರಸ್ತೆಗಳು ಕೆಸರುಗದ್ದೆಯಂತಾಗಿವೆ. ಸಂಪೂರ್ಣವಾಗಿ ಅಭಿವೃದ್ಧಿಯಲ್ಲಿ ವಿಫಲತೆ ಕಂಡಿರುವ ಈ ಗ್ರಾಮದಲ್ಲಿ ಸಾರ್ವಜನಿಕ ರಸ್ತೆ, ಚರಂಡಿ ವ್ಯವಸ್ಥೆಯೂ ಇಲ್ಲ. ಒಂದು ವೇಳೆ ಸಮಸ್ಯೆ ಬಗ್ಗೆ ಕೂಡಲೇ ಸ್ಪಂದನೆ ದೊರಕದಿದ್ದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡುವುದಾಗಿ ಗ್ರಾಮದ ಜನರು ಎಚ್ಚರಿಕೆ ನೀಡಿದ್ದಾರೆ.
ದಿವ್ಯ ನಿರ್ಲಕ್ಷ್ಯ?: ಗ್ರಾಮದಲ್ಲಿ ಹಲವಾರು ಮೂಲಭೂತ ಸೌಕರ್ಯಗಳ ಕೊರತೆಗಳಿದ್ದು, ಶುದ್ಧ ಕುಡಿಯುವ ನೀರು, ರಸ್ತೆ ಸಮಸ್ಯೆ, ಚರಂಡಿ, ವ್ಯವಸ್ಥೆ ಕಲ್ಪಿಸುವಲ್ಲಿ ಗ್ರಾಪಂ ವಿಫಲವಾಗಿದೆ. ಅಧಿಕಾರಿಗಳು ನಮ್ಮ ಗ್ರಾಮ ಅಭಿವೃದ್ಧಿ ಮಾಡದಿದ್ದರೆ ರಸ್ತೆಗಿಳಿದು ಪ್ರತಿಭಟನೆ ಮಾಡಿ ಬಿಸಿ ಮುಟ್ಟಿಸುವ ಮುನ್ನ ಇತ್ತ ಗಮನ ಹರಿಸಿ ಒಂದೆರಡು ದಿನದಲ್ಲಿ ಈ ರಸ್ತೆಯನ್ನು ಸರಿ ಪಡಿಸದಿದ್ದರೆ ನೇರವಾಗಿ ಮೇಲಧಿಕಾರಿಗಳಿಗೆ ಇಲ್ಲಿನ ಅವ್ಯವಸ್ಥಿತ ಬಗ್ಗೆ ತಿಳಿಸಿ ಕ್ರಮ ಕೈಗೊಳ್ಳುವರೆಗೂ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಮ್ಮ ತಾಂಡಾದಲ್ಲಿ ಮೂಲ ಸೌಕರ್ಯ ಕೊರತೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಇಲ್ಲಿ ಕಚ್ಚಾ ರಸ್ತೆಗಳಿದ್ದು ಮಳೆ ಬಂದರಂತೂ ನಡೆದಾಡುವುದು ಸಾಹಸದ ಕೆಲಸವಾಗಿದೆ. ಚರಂಡಿಗೆ ಹೋಗಬೇಕಾದ ನೀರು ಸಾರಾಗವಾಗಿ ಹೋಗದೆ ಮನೆಗಳ ಮುಂದೆ ನಿಂತಲ್ಲೆ ನಿಂತು ಗಬ್ಬು ವಾಸನೆ ಹರಡುತ್ತದೆ. ಇದರಿಂದ ಸಂಕ್ರಾಮಿಗಳ ರೋಗಗಳ ಭೀತಿ ಶುರುವಾಗಿದೆ. ಆದ್ದರಿಂದ ಪಿಡಿಓ ಇತ್ತ ಕಡೆ ಗಮನಹರಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು.
- ರಾಮಣ್ಣ ಕಾರ್ಬಾರಿ, ಗುರಪ್ಪ ನಾಯಕ, ತಾಂಡಾದ ನಿವಾಸಿಗಳು
ಸದ್ಯದಲ್ಲಿಯೇ ಗ್ರಾಮದಲ್ಲೊಂದು ಸಾರ್ವಜನಿಕ ಸಭೆ ಮಾಡಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿ ಬಳಿಕ ಹಂತ ಹಂತವಾಗಿ ರಸ್ತೆ, ಚರಂಡಿ ನಿರ್ಮಾಣ ಮತ್ತು ಮೂಲಭೂತ ಸೌಲಭ್ಯ ಕಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
- ಸವಿತಾ ಸೋಮಣ್ಣವರ, ಅಡರಕಟ್ಟಿಗ್ರಾಪಂ ಅಭಿವೃದ್ಧಿ ಅಧಿಕಾರಿ