ಯಾದಗಿರಿ: ಮೂರು ವರ್ಷದಿಂದ ಗ್ರಾಪಂಗಳಿಗಿಲ್ಲ ಗಾಂಧಿ ಗ್ರಾಮ ಪುರಸ್ಕಾರ
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಸೇವೆಗೆ ಸರಕಾರ ಗೌರವ ನೀಡುವಲ್ಲಿ ನಿರ್ಲಕ್ಷ್ಯ, ಪಿಡಿಓಗಳಿಗೆ ಬಲ ತುಂಬುವಲ್ಲಿ ಸರಕಾರ ವಿಫಲ, ಪ್ರಶಸ್ತಿ ಘೋಷಣೆಗೆ ಒತ್ತಾಯ
ನಾಗರಾಜ್ ನ್ಯಾಮತಿ
ಸುರಪುರ(ಅ.05): ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವ ಪಂಚಾಯತ್ ರಾಜ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ರಾಜ್ಯ ಸರಕಾರದಿಂದ ನೀಡುತ್ತಿದ್ದ ’ಗಾಂಧಿ ಗ್ರಾಮ ಪುರಸ್ಕಾರ’ ಪ್ರಶಸ್ತಿ ಪ್ರಸಕ್ತ ವರ್ಷ ಸೇರಿ ಮೂರು ವರ್ಷಗಳಿಂದ ಸ್ಥಗಿತಗೊಂಡಂತಾಗಿದೆ. ಸುರಪುರ ಮತಕ್ಷೇತ್ರದಲ್ಲಿ 42 ಗ್ರಾಮ ಪಂಚಾಯ್ತಿಗಳಿವೆ. ಗ್ರಾಮ ಪಂಚಾಯ್ತಿಗಳು ಒಂದು ವರ್ಷದಲ್ಲಿ ಮಾಡುತ್ತಿದ್ದ ಎಲ್ಲ ಸಾಧನೆಯನ್ನು ಪರಿಗಣಿಸಿ ಇಡೀ ತಾಲೂಕಿನಿಂದ ಒಂದು ಗ್ರಾಮ ಪಂಚಾಯ್ತಿಯನ್ನು ಆಯ್ಕೆ ಮಾಡಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಹಾಗೂ 5 ಲಕ್ಷ ರು.ಗಳು ಸಹಾಯಧನ ಕೂಡ ನೀಡಲಾಗುತ್ತಿತ್ತು.
ಕೊರೋನಾದಲ್ಲೂ ಕೆಲಸ ನಿರ್ವಹಣೆ:
2019-20, 2020-21ರಲ್ಲಿ ಕೊರೋನಾವಿದ್ದರೂ ಕುಟುಂಬ ಮತ್ತು ಜೀವದ ಹಂಗೂ ತೊರೆದು ಗ್ರಾಮಗಳಲ್ಲಿ ಸ್ವಚ್ಛತೆ, ವ್ಯಾಕ್ಸಿನ್, ಕೆಲಸ, ಆಹಾರ ವ್ಯವಸ್ಥೆ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದೇವೆ. 2021-22ರಲ್ಲಿ ನಿರಂತರವಾಗಿ ಕೆಲಸ ಕಾರ್ಯನಿರ್ವಹಿಸಿದ್ದೇವೆ. ಆದರೂ ಸರಕಾರ ನಮ್ಮನ್ನು ನಿರ್ಲಕ್ಷಿಸಿರುವುದು ನೋವು ತೊಂದಿದೆ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ತಿಳಿಸುತ್ತಾರೆ.
ಯಾದಗಿರಿ: ಸೂರತ್ ಚೆನ್ನೈ ಎಕ್ಸಪ್ರೆಸ್ ವೇ, ನೊಂದ ರೈತನ ಪತ್ರಕ್ಕೆ ಸಿಎಂ ಸ್ಪಂದನೆ
ಕೇವಲ ಆಯ್ಕೆ ಮಾತ್ರ:
2019-20, 2020-21ರ ಕೊರೋನಾ ಕಾಲಘಟ್ಟದಲ್ಲಿ ಕೇವಲ ಆಯ್ಕೆಯಾಗಿದೆ ಹೊರತು ಪ್ರಶಸ್ತಿ ಪತ್ರ ಮತ್ತು ಸಹಾಯಧನ ಯಾವುದು ಬಂದಿಲ್ಲ. 2022-23ನೇ ಸಾಲಿನ ಗಾಂಧೀಜಿ ಜಯಂತಿ ಆಚರಿಸುತ್ತಿದ್ದರೂ ಪ್ರಸಕ್ತ ಸಾಲಿನಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಿಲ್ಲ.
ಮಾನದಂಡ:
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಚ್ಛತೆ, ನೈರ್ಮಲ್ಯ, ಉದ್ಯೋಗ ಖಾತರಿ, ಕರ ವಸೂಲಿ, ಪರಿಸರ ಸಂರಕ್ಷಣೆ, ಶುದ್ಧ, ಜಮಾಬಂ, ವಿದ್ಯುತ್ ಕುಡಿಯುವ ನೀರು, ನಿಗದಿತ ಅವಧಿಯೊಳಗೆ ಮಾಡಿದ ಗ್ರಾಮ ಸಭೆ, ಸರಕಾರದ ಅನುದಾನ ಸಮರ್ಪಕ ಬಳಕೆ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕಾರ ನೀಡಲಾಗುತ್ತಿತ್ತು. ಶೇ.90ಕ್ಕಿಂತಲೂ ಹೆಚ್ಚು ಸಾಧನೆ ಮಾಡಿದ ಗ್ರಾಪಂ ಆಯ್ಕೆಯಾಗುತ್ತಿತ್ತು. ಅದು ಇಡೀ ತಾಲೂಕಿಗೆ ಒಂದು ಗ್ರಾಮ ಪಂಚಾಯ್ತಿ ಮಾತ್ರ.
ಪ್ರಶ್ನಾವಳಿ:
ಆ.1ರಿಂದ 100 ಪ್ರಶ್ನೆಗಳುಳ್ಳ ಪ್ರಶ್ನಾವಳಿ ಪಂಚಾಯತ್ ರಾಜ್ ಇಲಾಖೆಯಿಂದ ಬಿಡುಗೊಳಿಸುತ್ತಿತ್ತು. ಇದಕ್ಕೆ ಪಿಡಿಓಗಳು ತಮ್ಮ ಪಂಚಾಯ್ತಿನಲ್ಲಿ ಮಾಡಿರುವ ಸಾಧನೆಯನ್ನು ಆನ್‌ಲೈನ್ ತುಂಬಿ ಕಳುಹಿಸಬೇಕಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಇಲಾಖೆಯಿಂದ ಯಾವುದೇ ಪ್ರಶ್ನಾವಳಿ ಬಂದಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾದಗಿರಿ: ರೈತರ ಮನ ಹಿಗ್ಗಿಸಿದ ಡ್ರೋನ್ ಚಮತ್ಕಾರ..!
ಪಿಡಿಓಗಳನ್ನು ಉತ್ತೇಜಿಸಲು, ಲವಲವಿಕೆಯಿಂದ ಕಾರ್ಯನಿರ್ವಹಿಸಲು, ಉತ್ತಮ ಆಡಳಿತ ನೀಡಲು ಗಾಂಧಿ ಗ್ರಾಮ ಪ್ರಶಸ್ತಿಯನ್ನು ರಾಜ್ಯ ಸರಕಾರ ನಿರಂತರಗೊಳಿಸಬೇಕು. ನೀಡುವ ಪ್ರಶಸ್ತಿ ಮೊತ್ತವನ್ನು ದುಪ್ಪಟ್ಟುಗೊಳಿಸಬೇಕು. ಸರಕಾರ ಪಿಡಿಓಗಳ ಸೇವೆ ಪರಿಗಣಿಸಬೇಕು ಅಂತ ಗ್ರಾಪಂ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ. ನಾಡಗೌಡ ಹೇಳಿದ್ದಾರೆ.
ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೀಡುವ ಒತ್ತಡದ ಮಧ್ಯದಲ್ಲಿ ಕಾರ್ಯನಿರ್ವಹಿಸುತ್ತೇವೆ. ರಾಜ್ಯ ಸರಕಾರ ಕೊಡಮಾಡುವ ಪ್ರಶಸ್ತಿಗೆ ಒಂದು ಗ್ರಾಪಂ ಆಯ್ಕೆಯಾದರೂ ಎಲ್ಲರಿಗೂ ಸಂತಸವಿದೆ. ಮುಖ್ಯಮಂತ್ರಿ ಮತ್ತು ಪಂಚಾಯತ್ ರಾಜ್ ಸಚಿವರ ಮುಂದೆ ಪ್ರಶಸ್ತಿ ಸ್ವೀಕರಿಸುವುದು ಗೌರವ ತರುತ್ತದೆ. ಪ್ರಶಸ್ತಿ ನೀಡುವ ಪರಿಪಾಠ ಮುಂದುವರಿಸಿ ಪಿಡಿಓಗಳ ಸೇವೆ ಗುರುತಿಸಬೇಕು ಅಂತ ಹೆಸರೇಳಲಿಚ್ಛಿಸದ ಪಿಡಿಒಗಳು ತಿಳಿಸಿದ್ದಾರೆ.