ಯಾದಗಿರಿ: ಸೂರತ್ ಚೆನ್ನೈ ಎಕ್ಸಪ್ರೆಸ್ ವೇ, ನೊಂದ ರೈತನ ಪತ್ರಕ್ಕೆ ಸಿಎಂ ಸ್ಪಂದನೆ
ಸಿಎಂ ಕಚೇರಿಯಿಂದ ಜಿಲ್ಲಾಡಳಿತಕ್ಕೆ ಸೂಚನೆ, ನೀರಾವರಿ ಜಮೀನುಗಳ ಖುಷ್ಕಿ ಎಂದು ಪರಿಗಣನೆ-ಪರಿಹಾರಕ್ಕೆ ರೈತರ ಆಕ್ಷೇಪ
ಯಾದಗಿರಿ(ಅ.02): ಕೇಂದ್ರ ಸರ್ಕಾರದ ಭಾರತಮಾಲಾ ಯೋಜನೆಯ, ಸೂರತ್-ಚೆನ್ನೈ ಎಕ್ಸಪ್ರೆಸ್ ವೇ, ಆರು ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ರೈತರ ಜಮೀನುಗಳ ಸ್ವಾಧೀನ ವೇಳೆ ನೀರಾವರಿ ಜಮೀನುಗಳನ್ನು ಖುಷ್ಕಿ ಎಂದು ಪರಿಗಣಿಸಿ, ಅಲ್ಪಮೊತ್ತದ ಪರಿಹಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ರೈತರೊಬ್ಬರಿಗೆ ಸಿಎಂ ಕಚೇರಿಯಿಂದ ಪ್ರತ್ಯುತ್ತರ ಬಂದಿದೆ. ಜಿಲ್ಲೆಯ ಶಹಾಪುರ ತಾಲೂಕಿನ ಶಿರವಾಳದ ಗುರುಲಿಂಗಪ್ಪಗೌಡ ಪೊಲೀಸ್ ಪಾಟೀಲ್ ಎನ್ನುವವರ ಜಮೀನಿನಲ್ಲಿನ (ಸರ್ವೆ ನಂ.154) ಒಟ್ಟು ಮೂರು ಎಕರೆಯಲ್ಲಿ 2 ಎಕರೆ 19 ಗುಂಟೆ ಜಮೀನನ್ನು ಎಕ್ಸಪ್ರೆಸ್ ವೇಗಾಗಿ ಸ್ವಾಧೀನಪಡಿಸಿಕೊಳ್ಳಲು ಆದೇಶಿಸಿದೆ. ಆದರೆ, ಫಲವತ್ತಾದ ಇವರ ನೀರಾವರಿ ಜಮೀನನ್ನು ‘ಖುಷ್ಕಿ’ ಎಂದು ಪರಿಗಣಿಸಿ, ಅಲ್ಪ ಮೊತ್ತದ ಪರಿಹಾರ ನಿರ್ಧರಿತವಾಗಿರುವ ಬಗ್ಗೆ ಗುರುಲಿಂಗಪ್ಪಗೌಡ ಆಕ್ಷೇಪ ವ್ಯಕ್ತಪಡಿಸಿದ್ದರು.
ಎಕ್ಸಪ್ರೆಸ್ ವೇ ನಿರ್ಮಾಣಕ್ಕಾಗಿನ ಸರ್ವೆ ಸಂದರ್ಭದಲ್ಲಿ ದಾಖಲೆಗಳ ಪರಿಶೀಲಿಸಿದೆ ಹಾಗೂ ಸ್ಥಳ ಪರಿಶೀಲನೆಯನ್ನೂ ಮಾಡದೆ ನೀರಾವರಿ ಜಮೀನುಗಳನ್ನು ಖುಷ್ಕಿ ಎಂದು ನಮೂದಿಸಲಾಗಿದೆ. ಅಲ್ಲದೆ, ದರ ನಿಗದಿಯಲ್ಲೂ ಅನ್ಯಾಯವಾಗಿದೆ ಎಂದು ತಮಗಾದ ನೋವು ತೋಡಿಕೊಂಡಿದ್ದ ಗುರುಲಿಂಗಪ್ಪ, ಇದನ್ನು ಸರಿಪಡಿಸುವಂತೆ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಧಿಕಾರಿಗಳ ಕಚೇರಿ ಅಲೆದಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದರು.
ಯಾದಗಿರಿಯಲ್ಲಿ ಪ್ರವಾಸೋದ್ಯಮ ದಿನ ಆಚರಣೆ: ಸೈಕಲ್ ತುಳಿದು ಹುರುಪು ತುಂಬಿದ ಡಿಸಿ ಸ್ನೇಹಲ್..!
ರೈತ ಗುರುಲಿಂಗಪ್ಪ ಅವರ ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಯವರ ಅಧೀನ ಕಾರ್ಯದರ್ಶಿ ಸಿ. ವಿ. ಹರಿದಾಸನ್, ಮನವಿಯನ್ನು ನಿಯಮಾನುಸಾರ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಯಾದಗಿರಿ ಜಿಲ್ಲಾಧಿಕಾರಿಗಳಿಗೆ (ಈ-ಆಫೀಸ್/ಸಿಎಂ/4692260/2022 ದಿನಾಂಕ 09-09-2022) ಕಳುಹಿಸಲಾಗಿದ್ದು, ಈ ಕುರಿತು ಅವರಿಂದ ಮಾಹಿತಿ ಪಡೆಯುವಂತೆ ತಿಳಿಸಿದೆ.
ಏನಿದು ನೀರಾವರಿ ? ಖುಷ್ಕಿ ?
ಜಿಲ್ಲೆಯ ಶಹಾಪುರ ಹಾಗೂ ವಡಗೇರಾ ತಾಲೂಕುಗಳ 21 ಗ್ರಾಮಗಳ ಮೂಲಕ ಸೂರತ್-ಚೆನ್ನೈ ಎಕ್ಸಪ್ರೆಸ್ ವೇ ಹಾದು ಹೋಗಲಿದೆ. ಇದಕ್ಕಾಗಿ ಈ ಎರಡು ತಾಲೂಕುಗಳ 1500 ಎಕರೆ ಜಮೀನುಗಳ ಸ್ವಾಧೀನ ಪ್ರಕ್ರಿಯೆ ನಡೆದಿದೆ. ಆದರೆ, ಸ್ವಾಧೀನಕ್ಕೆಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ನೂರಾರು ರೈತರ ನೀರಾವರಿ ಜಮೀನುಗಳನ್ನು ‘ಖುಷ್ಕಿ’ ಎಂದು ಪರಿಗಣಿಸಿ, ಪರಿಹಾರ ನೀಡಲು ಮುಂದಾಗಿರುವುದು ರೈತರ ಆಕ್ಷೇಪಕ್ಕೆ ಕಾರಣವಾಗಿದೆ.
ಕೃಷ್ಣಾ ಭಾಗ್ಯ ಜಲ ನಿಗಮ (ಕೆಬಿಜೆಎನ್ನೆಲ್)ದ ವ್ಯಾಪ್ತಿಗೊಳಪಡುವ ಹಾಗೂ ಬೋರವೆಲ್, ಬಾವಿ ಸೇರಿದಂತೆ ನೀರಾವರಿ ವ್ಯವಸ್ಥೆಗಳನ್ನು ಭೂಮಿಗಳನ್ನು ಖುಷ್ಕಿ ಎಂದು ಅಧಿಸೂಚನೆಯಲ್ಲಿ ಪ್ರಕಟಿಸಿದ್ದಲ್ಲದೆ, ಕಡಿಮೆ ಮೊತ್ತದ ಪರಿಹಾರಕ್ಕೆ ಸರ್ಕಾರ ಮುಂದಾಗಿದೆ. ಅಲ್ಲದೆ, ಅನೇಕ ರೈತರ ದಾಖಲೆಗಳ ಪರಿಶೀಲನೆ ನಡೆಸದೆ, ಪರಿಹಾರವೂ ಅಂತಿಮವಾಗದೆ ರೈತರ ಪಹಣಿಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೆಸರು ತೂರಿರುವುದು ರೈತರ ಆಕ್ರೋಶಕ್ಕೂ ಕಾರಣವಾಗಿದೆ. ಆರೇಳು ತಿಂಗಳುಗಳಿಂದ ರೈತರು ಅಲೆದಾಡುತ್ತಿದ್ದರೂ ಈ ಸಮಸ್ಯೆ ಬಗೆಹರಿಸಿಲ್ಲ ಅನ್ನೋದು ರೈತರ ಆರೋಪ.
ದಿಲ್ಲಿ ಏಮ್ಸ್‌ಗೆ ಕನ್ನಡಿಗ, ಯಾದಗಿರಿಯ ಡಾ. ಶ್ರೀನಿವಾಸ್ ಮುಖ್ಯಸ್ಥ
ಆರ್ಬಿಟೇಟರ್‌ಗೆ ಮೇಲ್ಮನವಿ :
ನೀರಾವರಿ ಜಮೀನುಗಳ ಖುಷ್ಕಿ ಎಂದು ಪರಿಗಣಿಸುವ ಅಥವಾ ದರ ಪರಿಷ್ಕರಣೆಯ ಬಗ್ಗೆ ತಮಗೆ ಅಧಿಕಾರವಿಲ್ಲದಿರುವುದರಿಂದ ಅಪರ ಜಿಲ್ಲಾಧಿಕಾರಿ (ಆರ್ಬಿಟೇಟರ್)ಗೆ ಮೇಲ್ಮನವಿ ಸಲ್ಲಿಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ರೈತರಿಗೆ ಹಿಂಬರಹ ನೀಡಿದ್ದರಿಂದ ಅನೇಕರು ಮೇಲ್ಮನವಿ ಸಲ್ಲಿಸಿದ್ದಾರೆ. ಹೆದ್ದಾರಿ ಪ್ರಾಧಿಕಾರವು ಕಾನೂನು ಸಲಹೆಗಾರರ ನಿಯೋಜಿಸಲು ಮುಂದಾಗಿದೆ.
ಇವುಗಳಿನ್ನೂ ವಿಚಾರಣೆ ಹಂತದಲ್ಲಿರುವಾಗ, ರೈತರ ಜಮೀನುಗಳಲ್ಲಿ ಹೆದ್ದಾರಿ ಪ್ರಾಧಿಕಾರ ಹೆಸರು ಆಘಾತ ಮೂಡಿಸಿದೆ. ಮೊನ್ನೆ ನಡೆದ ಅಧಿವೇಶನದಲ್ಲಿ ಪರಿಷತ್ ಸದಸ್ಯ ಅರವಿಂದ ಅರಳಿ ಅವರು ಈ ಬಗ್ಗೆ ಕೇಳಿದಾಗ, ಸರ್ಕಾರ ಏನೂ ಆಗಿಲ್ಲವೆಂದು ಹಾರಿಕೆಯ ಉತ್ತರ ನೀಡಿದಂತಿತ್ತು.