Asianet Suvarna News Asianet Suvarna News

ಯಾದಗಿರಿ: ರೈತರ ಮನ ಹಿಗ್ಗಿಸಿದ ಡ್ರೋನ್‌ ಚಮತ್ಕಾರ..!

ಹೆಕ್ಟೇರ್‌ ಭತ್ತದ ಬೆಳೆಗೆ 2.5 ನಿಮಿಷದಲ್ಲಿ ಕೀಟನಾಶಕ ಸಿಂಪಡಿಸಿದ ಡ್ರೋನ್‌, 16 ಲೀಟರ್‌ ಔಷಧ ಹೊತ್ತು ಹಾರಿದ ಮಹಿಂದ್ರ ಸುಮಿತ್‌ ಕಂಪನಿಯ ಡ್ರೋನ್‌

Drone Sprays Pesticide on Paddy Crop in 2.5 Minutes in Yadgir grg
Author
First Published Sep 23, 2022, 8:30 AM IST

ನಾಗರಾಜ್‌ ನ್ಯಾಮತಿ

ಸುರಪುರ(ಸೆ.23):  ಮಿಂಚಿನ ವೇಗದಲ್ಲಿ ಹಾರಿದ ಮಹಿಂದ್ರ ಸುಮಿತ್‌ ಅಗ್ರಿ ಸೈನ್ಸ್‌ ಕಂಪನಿಯ ಡ್ರೋನ್‌ ಕಣ್ಮುಚ್ಚಿ ತೆಗೆಯುವುದರಲ್ಲಿ ಎರಡೂವರೆ ಎಕರೆ ಭತ್ತದ ಬೆಳೆಗೆ ಔಷಧ ಸಿಂಪಡಿಸಿದ ಚಮತ್ಕಾರಕ್ಕೆ ಅನ್ನದಾತರು ಮನಸೋತರು. ಮಹೀಂದ್ರ ಸುಮಿತ್‌ ಅಗ್ರಿ ಸೈನ್ಸ್‌ ಕಂಪನಿಯ ಡ್ರೋನ್‌ ಸುಮಾರು 24 ಕೆಜಿ ತೂಕದ್ದಾಗಿದ್ದು, ಕ್ಯಾನ್‌ನಲ್ಲಿ 16 ಲೀಟರ್‌ ಔಷಧದೊಂದಿಗೆ ಒಟ್ಟು 41 ಕೆಜಿಯನ್ನು ಹೊತ್ತುಕೊಂಡು ಗಗನಕ್ಕೆ ಹಾರುತ್ತದೆ. ಹೊಲದ ನಕ್ಷೆಯನ್ನು ತಂತ್ರಜ್ಞಾನ ಗುರುತಿಸಿ ನಿಗದಿಪಡಿಸಿದಂತೆ ರಿಮೋಟ್‌ ಮೂಲಕ ಕಂಟ್ರೋಲ್‌ ಮಾಡಿ ಕ್ಷಣಾರ್ಧದಲ್ಲಿ ಕೀಟನಾಶಕ ಸಿಂಪಡಿಸಲಾಗುತ್ತದೆ.

ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಸಾಯಿನಗರದಲ್ಲಿ ಭತ್ತದ ಬೆಳೆ ಕ್ಷೇತ್ರದಲ್ಲಿ ಡ್ರೋನ್‌ ಮೂಲಕ ಕೀಟನಾಶಕ ಸಿಂಪಡಿಸುವ ಅವಿಷ್ಮರಣೀಯ ಪ್ರಾತ್ಯಕ್ಷಿಕೆ ನಡೆಯಿತು. ರೈತರು ತೆರೆದಗಣ್ಣಿನಲ್ಲಿ ಔಷಧ ಸಿಂಪಡಿಸುವುದನ್ನು ವೀಕ್ಷಿಸಿದರು. ಕೆಲವರು ಫಸಲನ್ನು ಮುಟ್ಟಿಕೀಟನಾಶಕ ಬಿದ್ದಿದೆಯೇ ಇಲ್ಲವೇ ಎಂಬುದನ್ನು ಖಾತರಿಪಡಿಸಿಕೊಂಡರು.

YADGIR: ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಯಾದಗಿರಿ ಜಿಲ್ಲೆಯ ಅಕ್ರಮ

1 ಹೆಕ್ಟೇರ್‌ಗೆ 2.5 ನಿಮಿಷ:

ಒಂದು ಹೆಕ್ಟೇರ್‌ ಭತ್ತದ ಬೆಳೆಗೆ 2.5 ನಿಮಿಷದಲ್ಲಿ ಕೀಟನಾಶಕವನ್ನು ಡ್ರೋನ್‌ ಮೂಲಕ ಸಿಂಪಡಿಸಬಹುದು. ಇದರಿಂದ ಸಮಯದ ಉಳಿತಾಯವಾಗುತ್ತದೆ. ರೈತರು ಮತ್ತೊಂದು ಕೆಲಸದೆಡೆಗೆ ಒತ್ತು ಕೊಡಬಹುದಾಗಿದೆ.
ಮಾನವ ಹಾಗೂ ಕೆಲ ಸಣ್ಣ ಯಂತ್ರಗಳ ಸಿಂಪಡಣೆಗೂ ಡ್ರೋನ್‌ ತಂತ್ರಜ್ಞಾನ ಮಾದರಿಯ ಸಿಂಪರಣೆಗೂ ಇರುವ ವ್ಯತ್ಯಾಸ ರೈತರಿಗೆ ಮನವರಿಗೆ ಮಾಡಿಕೊಡಲಾಯಿತು. ಸರವೇಗದಲ್ಲಿ ಕೀಟನಾಶಕ ಭತ್ತದ ಬೆಳೆಗೆ ಡ್ರೋನ್‌ ಸಿಂಪಡಿಸಿದರೆ ಮಾನವ ಮತ್ತು ಇತರ ಯಂತ್ರಗಳು ಸಾಕಷ್ಟುಸಮಯವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಮನಗಾಣಲಾಯಿತು.

ಕೂಲಿಕಾರರ ಸಮಸ್ಯೆಯಿಲ್ಲ:

ಡ್ರೋನ್‌ ಮಾದರಿಯ ಸಿಂಪರಣೆಯಲ್ಲಿ ಅತೀ ಕಡಿಮೆ ಕೂಲಿಕಾರರ ಬಳಕೆಯಾಗುತ್ತದೆ. ನೇರವಾಗಿ ಕ್ಯಾನ್‌ಗೆ ಔಷಧ ಹಾಕಿದರೆ ನಿಗದಿಪಡಿಸಿದ ಜಮೀನಿನಲ್ಲಿರುವ ಬೆಳೆಗೆ ಕೀಟನಾಶಕವನ್ನು ಸಂಪೂರ್ಣವಾಗಿ ಸಿಂಪಡಿಸುತ್ತದೆ. ಇದರಿಂದ ಕೂಲಿಕಾರ್ಮಿಕರ ಸಮಸ್ಯೆಯಿರುವುದಿಲ್ಲ.

ಎಲ್ಲೆಡೆ ಸಿಂಪಡಣೆ:

ಡ್ರೋನ್‌ ಮಾದರಿಯ ಸಿಂಪಡಣೆಯೂ ಬೆಳೆಯ ಎಲ್ಲಾ ಭಾಗಗಳಿಗೂ ತಲುಪಿಸುವ ಕಾರ್ಯ ಮಾಡುತ್ತದೆ. ಎಲ್ಲಾದರೂ ತಲುಪದಿದ್ದರೆ ಕೂಡಲೇ ಆ ಸ್ಥಳದಲ್ಲೇ ಡ್ರೋನ್‌ ನಿಲ್ಲಿಸಿ ಸಿಂಪಡಿಸಬಹುದು. ಆದ್ದರಿಂದ ಬೆಳೆಯ ಇಂಚು ಇಂಚಿಗೂ ಕೀಟನಾಶಕ ತಲುಪಿಸಬಹುದು. ಅಲ್ಲದೆ ಕಡಿಮೆ ಕೀಟನಾಶಕ ಬಳಕೆಯಾಗುತ್ತದೆ.

ಸ್ವಲ್ಪ ದುಬಾರಿ:

ಡ್ರೋನ್‌ ಮೂಲಕ ಒಂದು ಹೆಕ್ಟೇರ್‌ಗೆ ಕೀಟನಾಶಕ ಸಿಂಪಡಿಸಲು 12 ಸಾವಿರಕ್ಕಿಂತ ಹೆಚ್ಚು ತಗಲುತ್ತದೆ. ಕೂಲಿಕಾರ್ಮಿಕರಿಂದ ಔಷಧ ಸಿಂಪಡಿಸಿದಾಗ 6ರಿಂದ 7 ಸಾವಿರ ರು.ಗಳು ಮಾತ್ರ ಆಗುತ್ತದೆ. ಕಾರ್ಮಿಕರ ಕೊರತೆಯಿದ್ದಾಗ ಡ್ರೋನ್‌ ತುಂಬ ಅನುಕೂಲವಾಗುತ್ತದೆ. ಸರಕಾರವೇ ರಿಯಾಯ್ತಿ ದರದಲ್ಲಿ ಕೃಷಿ ಇಲಾಖೆ ಕೀಟ ನಾಶಕ ಸಿಂಪಡಿಸಲು ಅನುಕೂಲ ಮಾಡಿಕೊಟ್ಟರೆ ರೈತರಿಗೆ ಅನುಕೂಲವಾಗುತ್ತದೆ ಎಂದು ಕೆಂಭಾವಿ ರೈತ ರಾಮಕೃಷ್ಣ ಅಭಿಪ್ರಾಯವಾಗಿದೆ.

ಡ್ರೋನ್‌ ತುಟ್ಟಿ:

ಮಹಿಂದ್ರ ಸುಮಿತ್‌ ಕಂಪನಿಯ ಡ್ರೋನ್‌ವೊಂದಕ್ಕೆ 17 ಲಕ್ಷ ರು.ಗಳು ನಿಗದಿ ಮಾಡಲಾಗಿದೆ. ಇದು ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಕೈಗೆಟುಕುವಂತದ್ದಲ್ಲ. ಇದು ಬಹುದೊಡ್ಡ ಜಮೀನ್ದಾರರು ಮತ್ತು ನೂರಾರು ಎಕರೆ ಒಡೆಯರಿಗೆ ಅನುಕೂಲವಾಗುತ್ತದೆ. ಈ ಡ್ರೋನ್‌ನಿಂದ 60 ನಿಮಿಷದಲ್ಲಿ 60 ಎಕರೆಗೆ ಕೀಟನಾಶಕ ಸಿಂಪಡಿಸಬಹುದು. 1.40 ಗಂಟೆಯಲ್ಲಿ 100 ಎಕರೆಗೆ ಔಷಧ ಸಿಂಪಡಿಸಲು ಸಾಧ್ಯವಾಗುತ್ತದೆ.

ಬ್ಯಾಟರಿ ಶಕ್ತಿ:

ಡ್ರೋನ್‌ ಬ್ಯಾಟರಿಯೂ 10 ನಿಮಿಷ ಚಾಜ್‌ರ್‍ ಮಾಡಿದರೆ ಒಂದು ಹೆಕ್ಟೇರ್‌ನಲ್ಲಿರುವ ಬೆಳೆಗೆ ಸಿಂಪಡಿಸಲು ಸಾಧ್ಯವಾಗುತ್ತದೆ. ಒಮ್ಮೆ ಚಾಜ್‌ರ್‍ ಮಾಡಿದ ಬ್ಯಾಟರಿಯೂ 2.5 ನಿಮಿಷ ಮಾತ್ರ ಬರುತ್ತದೆ. 100 ಎಕರೆಗಿಂತ ಹೆಚ್ಚು ಬೆಳೆಗೆ ಔಷಧ ಸಿಂಪಡಿಸಲು ಅಧಿಕ ಬ್ಯಾಟರಿಗಳು ಅಗತ್ಯವಿರುತ್ತದೆ ಎಂದು ಕಂಪನಿಯ ಅಧಿಕಾರಿ ಬಸವರಾಜ್‌ ರಾಂಪುರೆ ತಿಳಿಸಿದ್ದಾರೆ.

ಯಾದಗಿರಿಯಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಹೆಣಗಾಟ!

ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವಾಗ ಕೊಂಚ ದುಬಾರಿಯೇ ಇರುತ್ತದೆ. ಎಲ್ಲೆಡೆ ಡ್ರೋನ್‌ ಬಳಕೆಯಾದರೆ ಕ್ರಮೇಣವಾಗಿ ಬೆಲೆ ಇಳಿಯುತ್ತದೆ. ಡ್ರೋನ್‌ ಮೂಲಕ ಔಷಧ ಹೊಡಿಸಿದ್ದೇವೆ. ಉತ್ತಮ ಫಲಿತಾಂಶ ಬಂದರೆ ಡ್ರೋನ್‌ ಬಳಸುತ್ತೇವೆ. ಇಲ್ಲದಿದ್ದರೆ ಈಗಿರುವ ಕೃಷಿ ಪದ್ಧತಿಯನ್ನೇ ಅನುಸರಿಸುತ್ತೇವೆ ಅಂತ ಭತ್ತಕ್ಕೆ ಡ್ರೋನ್‌ ಮೂಲಕ ಔಷಧ ಸಿಂಪಡಿಸಿದ ರೈತ ನಾಗೇಶ್ವರರಾವ್‌ ತಿಳಿಸಿದ್ದಾರೆ.  

ಹ್ಯಾಂಡ್‌ ಸ್ಪ್ರೇ, ಬ್ಯಾಟರಿ ಸ್ಪ್ರೇ, ಪವರ್‌ ಸ್ಪ್ರೇ ಬಳಿಕ ನೂತನ ಅವಿಷ್ಕಾರ ಡ್ರೋನ್‌ ಮೂಲಕ ಔಷಧ ಸ್ಪ್ರೇ ಮಾಡಲಾಗುತ್ತಿದೆ. ಇದರಿಂದ 200 ಲೀಟರ್‌ ಔಷಧ ಬದಲು ಕಡಿಮೆಯಲ್ಲೇ ಮುಗಿಯುತ್ತದೆ. ಮನುಷ್ಯನ ಆರೋಗ್ಯ ಕಾಪಾಡುತ್ತದೆ. ಬೆಳೆಗೆ ಹೆಚ್ಚಿನ ಔಷಧ ತಗಲುವುದಿಲ್ಲ ಅಂತ ಯಾದಗಿರಿ ಜಂಟಿ ಕೃಷಿ ನಿರ್ದೇಶಕ ಅಭೀಬ್‌ ಎಸ್‌.ಎಸ್‌. ಹೇಳಿದ್ದಾರೆ. 
 

Follow Us:
Download App:
  • android
  • ios