ಮೈಸೂರು(ಫೆ.04):  ಗ್ರಾಪಂ ಚುನಾವಣೆ ಮುಗಿದು, ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಯೂ ಪ್ರಕಟವಾಗಿ, ಆಯ್ಕೆ ಪ್ರಕ್ರಿಯೆಯೂ ನಡೆಯುತ್ತಿದೆ. ಇದೀಗ ಗಾದಿ ಹಿಡಿಯಲು ಹಣ, ನಿವೇಶನದ ಆಮಿಷ ನಡೆಯುತ್ತಿದೆ!.

ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಕ್ಕೂ ಮುನ್ನವೇ ಅಂದರೆ ಚುನಾವಣೆ ಮುಗಿದ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಆಕಾಂಕ್ಷಿಗಳು ಸದಸ್ಯರನ್ನು ‘ತೀರ್ಥಯಾತ್ರೆ’ಗೆ ಕರೆದುಕೊಂಡು ಹೋಗಿದ್ದರು. ದೇವಸ್ಥಾನಗಳಿಗೆ ಕರೆದುಕೊಂಡು ಹೋಗಿ ‘ಆಣೆ- ಪ್ರಮಾಣ’ ಮಾಡಿಸಿಕೊಂಡಿದ್ದರು. ಕೆಲವರು ಗೋವಾ ಮತ್ತಿತರ ‘ಮೋಜಿನ ತಾಣ’ಗಳಿಗೂ ಹೋಗಿ ಮೋಜು ಮಸ್ತಿ ಮಾಡಿ ಬಂದಿದ್ದಾರೆ. ಅಲ್ಲದೇ ಊರಿನಲ್ಲಿಯೇ ಉಳಿದುಕೊಂಡಿದ್ದ ಅವರ ಸಂಬಂಧಿಕರ ಮೂಲಕ ವ್ಯವಹಾರವನ್ನು ಕುದುರಿಸಿಕೊಂಡಿದ್ದರು!. ಇದೀಗ ಮೀಸಲಾತಿ ಪಕ್ಕ ಆದ ಮೇಲೆ ಶತಾಯಗತಾಯ ಅಧಿಕಾರ ಹಿಡಿಯಲು ಮತ್ತಷ್ಟುಹಣ, ನಿವೇಶನ ಮತ್ತಿತರ ಆಮಿಷವೊಡ್ಡುವ ಹಾಗೂ ಸಿಕ್ಕಿದಷ್ಟುಬಾಚಿಕೊಳ್ಳುವ ಪ್ರವೃತ್ತಿ ಕಂಡು ಬರುತ್ತಿದೆ!.

7 ಸ್ಥಾನಗಳಲ್ಲಿ 6 ಸ್ಥಾನ ಬಿಜೆಪಿಗೆ : ಭರ್ಜರಿ ವಿಜಯ

ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಆಶಯದಂತೆ ಅಧಿಕಾರ ವಿಕೇಂದ್ರೀಕರಣದ ಮೂಲಕ ರಾಮರಾಜ್ಯ ನಿರ್ಮಾಣ ಮಾಡಲು ಹೋಗಿ ಭ್ರಷ್ಟಾಚಾರವನ್ನು ವಿಕೇಂದ್ರೀಕರಣ ಮಾಡಲಾಗಿದೆ. ಮತದಾನದಿಂದ ಹಿಡಿದು ಕುರ್ಚಿ ಹಿಡಿಯುವವರೆಗೆ ಎಲ್ಲದಕ್ಕೂ ಹಣ ವೆಚ್ಚ ಮಾಡಬೇಕಾದ ಪರಿಸ್ಥಿತಿಗೆ ಪ್ರಜಾಪ್ರಭುತ್ವ ತಲುಪಿದೆ. ‘ಕೊಡಲಿ ಬಿಡು, ಅವರೇನು ಮನೆಯ ದುಡ್ಡು ಕೊಟ್ಟಾರ?. ಖರ್ಚು ಮಾಡಿದ ಮೇಲೆ ಹೊಡೆಯಲ್ಪಾ?’ ಎಂಬ ಹಂತಕ್ಕೆ ಜನ ತಲುಪಿದ್ದಾರೆ.

ರಾಜಕೀಯ ತೆವಲು ಹಾಗೂ ಅಧಿಕಾರದ ಅಮಲು ಹಳ್ಳಿಗಳಲ್ಲಿ ಏನೆಲ್ಲಾ ಅನಾಹುತಗಳನ್ನು ಮಾಡುತ್ತಿದೆ ಎಂದರೇ ಒಂದು ಲಕ್ಷ ರು. ಕೊಟ್ಟವನನ್ನು ಬಿಟ್ಟು ಎರಡು- ಮೂರು ಲಕ್ಷ ರು. ಕೊಟ್ಟವರಿಗೆ ವೋಟು ಹಾಕುವ ಚಿತ್ರಣಗಳು ಕೂಡ ಅಲ್ಲಲ್ಲಿ ಕಂಡು ಬಂದಿವೆ. ಗಾದಿ ಸಿಗದವರು ಖರ್ಚು ಮಾಡಿದ ದುಡ್ಡು ಕೊಡಿ ಎಂದು ಕೇಳುವ ಪ್ರಸಂಗಗಳು ನಡೆಯುತ್ತಿವೆ!.

ಹುಣಸೂರು ತಾಲೂಕಿನಲ್ಲಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಒಂದು ಗ್ರಾಪಂನಲ್ಲಿ ಅಧ್ಯಕ್ಷ ಗಾದಿ ಹಿಡಿಯಲು ವೋಟು ಹಾಕುವ ಸದಸ್ಯರಿಗೆ ನಿವೇಶನ ಕೂಡ ನೀಡಲಾಗುತ್ತಿದೆ!.

ಐದು, ಹತ್ತು ತಿಂಗಳು!

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು 30 ತಿಂಗಳಿಗೆ ನಿಗದಿ ಮಾಡಲಾಗಿದೆ. ಆದರೆ ಇದೀಗ ಈ ಸ್ಥಾನಗಳನ್ನು ಐದು, ಹತ್ತು ತಿಂಗಳಿಗೆಲ್ಲಾ ಮೂವರು ಹಂಚಿಕೊಂಡಿದ್ದಾರೆ. ಹೀಗಾದರೆ ಆಡಳಿತ ಹೇಗೆ ನಡೆಯುತ್ತದೆ. ಏಕೆಂದರೆ ಗ್ರಾಪಂ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಜಾರಿಯಾಗುತ್ತವೆ. ಹೀಗಾಗಿ ಅಧ್ಯಕ್ಷ ಹಾಗೂ ಪಿಡಿಒ ಸಹಿ ಬೇಕಾಗುತ್ತದೆ. ಪ್ರತಿ ಐದು ತಿಂಗಳಿಗೆ ಅಧ್ಯಕ್ಷ ಅಥವಾ ಪಿಡಿಒ ವರ್ಗವಾದರೆ ಮತ್ತೆ ಚುನಾವಣೆ ನಡೆದು, ಹೊಸಬರು ಆಯ್ಕೆಯಾಗಲು, ಹೊಸ ಪಿಡಿಒ ಬರಲು ಎರಡು ತಿಂಗಳು ಹಿಡಿಯುತ್ತದೆ. ಇದರಿಂದ ಸುಗಮ ಆಡಳಿತಕ್ಕೂ ಅಡ್ಡಿಯಾಗುತ್ತದೆ. ಯಾರಿಗೂ ಈ ರೀತಿಯ ತಾಂತ್ರಿಕ ಅಡಚಣೆಗಳು ಬೇಕಿಲ್ಲ. ಹೇಗಾದರೂ ಮಾಡಿ, ಅಧಿಕಾರ ಹಿಡಿಯಬೇಕು, ಅಧ್ಯಕ್ಷ- ಉಪಾಧ್ಯಕ್ಷರಾಗಬೇಕು ಅಷ್ಟೇ.

ಜಾತಿಯೋ, ಸಾಮಾಜಿಕ ನ್ಯಾಯವೋ?

ಒಂದು ಗ್ರಾಪಂನಲ್ಲಿ ಒಂದೇ ಜಾತಿಯ ಏಳು ಮಂದಿ ಗೆದ್ದಿದ್ದಾರೆ. ಅವರೆಲ್ಲಾ ಕಾಂಗ್ರೆಸ್‌ ಬೆಂಬಲಿಗರು. ಅಧ್ಯಕ್ಷ ಸ್ಥಾನ ಅದೇ ಜಾತಿಯವರಿಗೆ ಸಿಗಬೇಕು. ಆದರೆ ಅಲ್ಲಿ ಮತ್ತೊಂದು ಸ್ಥಾನದಲ್ಲಿ ಸೂಕ್ಷಾತಿಸೂಕ್ಷ್ಮ ವರ್ಗದ ವ್ಯಕ್ತಿ ಗೆದ್ದಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನ ನನಗೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅವರು ಕೂಡ ಕಾಂಗ್ರೆಸ್‌ ಬೆಂಬಲಿಗರೇ. ಊರಿನಲ್ಲಿ ಈ ವಿಷಯ ಬಗೆಹರಿಯದಿದ್ದಾಗ ಪ್ರಮುಖ ನಾಯಕರೊಬ್ಬರ ಬಳಿ ಇಡೀ ತಂಡ ಬಂದಿತು. ನಮ್ಮ ಜಾತಿಯವರಿಗೆ ಅಧ್ಯಕ್ಷ ಸ್ಥಾನ ಬೇಕು ಎಂದು ಏಳು ಮಂದಿ ಬೇಡಿಕೆ ಮಂಡಿಸಿದರೇ ಉಳಿದ ಒಬ್ಬರು ವೋಟು ಹಾಕಲು ನಾವು ಬೇಕು. ಸಾಮಾಜಿಕ ನ್ಯಾಯಕ್ಕಾಗಿ ನನಗೆ ಅಧ್ಯಕ್ಷ ಸ್ಥಾನ ನೀಡಿ ಎಂದು ಆಗ್ರಹಿಸಿದರು. ಜಾತಿಯೋ ಸಾಮಾಜಿಕ ನ್ಯಾಯವೇ? ಎಂಬ ಉಭಯ ಸಂಕಟ!. ಕೊನೆಗೂ ಸೂಕ್ಷ್ಮಾತಿಸೂಕ್ಷ್ಮ ವರ್ಗದ ಪರ ನಾಯಕರು ವಾದಿಸಿದರು. ಇಲ್ಲದಿದ್ದರೆ ಹೊರಗೆ ಹೋಗಿ ಬಲಾಢ್ಯರು ಸೂಕ್ಷ್ಮಾತಿಸೂಕ್ಷ್ಮ ವರ್ಗದವರಿಗೆ ಅನ್ಯಾಯ ಮಾಡುತ್ತಾರೆ ಎಂಬ ಆರೋಪ ಮಾಡುತ್ತಾರೆ ಎಂದು ಸಮಾಧಾನಿಸಿದರು.

ದಂಗಾಗಿರುವ ಶಾಸಕರು, ಮುಖಂಡರು!

ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯುತ್ತಿರುವ ಹಣ, ನಿವೇಶನ, ಚಿನ್ನಾಭರಣ, ಯಾತ್ರೆ ಮತ್ತಿತರ ಆಮಿಷಗಳನ್ನು ಕಂಡು ಶಾಸಕರು, ಮಾಜಿ ಶಾಸಕರು, ಮುಂದೆ ಶಾಸಕರಾಗಬಯಸುವವರು ದಂಗು ಬಡಿದಿದ್ದಾರೆ. ಈ ರೀತಿಯ ಅನ್ಯಾಯ, ಅಕ್ರಮಗಳಿಗೆ ಕಡಿವಾಣ ಹಾಕುವವರು ಯಾರು?