ಹಾಸನ(ಜು.24): ಜಿಲ್ಲೆಯಲ್ಲಿ ಹೊಸದಾಗಿ 8 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಮಂಜೂರು ಮಾಡಲಾಗಿದ್ದು, ಈ ವರ್ಷವೇ ಪ್ರಾರಂಭಿಸಲಾಗುತ್ತಿದೆ ಎಂದು ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ವಿಶೇಷಾಧಿಕಾರಿ ಎಸ್‌ಆರ್‌ಎಸ್‌ ನಾಧನ್‌ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ 250 ಪಬ್ಲಿಕ್‌ ಶಾಲೆ:

ಪ್ರಸಕ್ತ ಸಾಲಿನ ಆಯವ್ಯಯ ಘೋಷಣೆಯಂತೆ ಮುಂದಿನ ನಾಲ್ಕು ವರ್ಷಗಳಲ್ಲಿ 1000 ಹೊಸ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಪ್ರಾರಂಭಿಸುವ ಯೋಜನೆಯಡಿ ಮೊದಲ ಹಂತವಾಗಿ 250 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಪ್ರಾರಂಭಿಸಲು ಸಚಿವ ಎಚ್‌.ಡಿ.ರೇವಣ್ಣ ಪರಿಶ್ರಮದಿಂದ ರಾಜ್ಯ ಸರ್ಕಾರ ಯೋಜಿಸಿದ್ದು, ಹಾಸನ ಜಿಲ್ಲೆಗೆ ಹೊಸದಾಗಿ 8 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಮಂಜೂರು ಮಾಡಲಾಗಿದೆ ಎಂದರು.

ಅಂಗೈಯಲ್ಲಿ ಆಕಾಶ: 28 ಶಾಲೆಗಳಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ!

ಎಲ್ಲೆಲ್ಲಿ ಪಬ್ಲಿಕ್ ಶಾಲೆ ಆರಂಭ:

ಜಿಲ್ಲೆಯ ಹಾಸನ ತಾಲೂಕಿನ ಸಂತೇಪೇಟೆಯ ಸರ್ಕಾರಿ ಜೂನಿಯರ್‌ ಕಾಲೇಜು, ಚಿಪ್ಪಿನಕಟ್ಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಗಂಧದ ಕೋಠಿಯ ಸರ್ಕಾರಿ ಜೂನಿಯರ್‌ ಕಾಲೇಜು, ಹೊಳೆನರಸೀಪುರ ತಾಲೂಕಿನ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು, ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು, ಸೋಮನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಶಾಂತಿಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಚನ್ನರಾಯಪಟ್ಟಣ ತಾಲೂಕಿನ ಉದಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಪಬ್ಲಿಕ್‌ ಶಾಲೆಗಳನ್ನು ಈ ವರ್ಷದಿಂದಲೇ ಪ್ರಾರಂಭಿಸಲಾಗುತ್ತಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಹೋಬಳಿ ಕೇಂದ್ರ ಸ್ಥಾನಗಳಲ್ಲಿ ಸ್ಥಾಪಿಸಿ ಸದರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಂದ 12ನೇ ತರಗತಿಗಳವರೆಗೆ ಶಿಕ್ಷಣವನ್ನು ಒಂದೇ ಸೂರಿನಡಿ ಒದಗಿಸಲಾಗುವುದು. ಷರತ್ತು ಹಾಗೂ ನಿಯಮಗಳನ್ನು ಹೊಸ ಕನಾಟಕ ಪಬ್ಲಿಕ್‌ ಶಾಲೆಗಳನ್ನು ಪ್ರಾರಂಭಿಸುವ ಸಮಯದಲ್ಲಿಯೂ ಚಾಚು ತಪ್ಪದೇ ಪಾಲಿಸತಕ್ಕದ್ದು ಎಂದು ತಿಳಿಸಿದ್ದಾರೆ.