ತುಮಕೂರು (ಅ.06):  ರೈತರಿಗೆ ಆರ್ಥಿಕವಾಗಿ ಸಧೃಡವಾಗಲು ಸಹಕಾರಿಯಾಗಿರುವ ಶ್ರೀಗಂಧ ಮತ್ತು ಬಿದಿರು ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಸಾಲ ಸೌಲಭ್ಯ ಹಾಗೂ ವಿಮಾ ಸೌಲಭ್ಯ ಕಲ್ಪಿಸುವಂತೆ ಶ್ರೀಗಂಧ ಬೆಳೆಗಾರರ ಮತ್ತು ಬಳಕೆದಾರರ ಅಭಿವೃದ್ಧಿ ಸಂಶೋಧನಾ ಸಂಘದ ರಾಜ್ಯಾಧ್ಯಕ್ಷ ಬಿ.ಆರ್‌. ರಘುರಾಮ್‌ ಮನವಿ ಮಾಡಿದರು.

ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀಗಂಧ ಮತ್ತು ಬಿದಿರು ಬೆಳೆಗೆ ಮುಕ್ತ ಮಾರುಕಟ್ಟೆವ್ಯವಸ್ಥೆಯನ್ನು ಕಲ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಭಾಗದಲ್ಲಿ ರೈತ ಕುಟುಂಬದ 27 ಖಾತೆದಾರರಿಗೆ ರಾಷ್ಟ್ರೀಯ ಭೂಸ್ವಾಧೀನ ಅಡಿಯಲ್ಲಿ ತುಮಕೂರು ಮತ್ತು ಶಿವಮೊಗ್ಗ ಚತುಸ್ಪಥ ರಸ್ತೆ ನಿರ್ಮಾಣಕ್ಕೆ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿ ಶ್ರೀಗಂಧದ ಮರಗಳಿಗೆ 62 ಕೋಟಿ ರು. ಮಾಡಬೇಕಾಗಿದ್ದು, ಒಂದು ಮರಕ್ಕೆ 2,44,620 ರು.ಗಳನ್ನು ನಿಗದಿಪಡಿಸಿ, ಸಂಬಂಧಿಸಿದ ಆದೇಶವನ್ನು ಅರಣ್ಯ ಇಲಾಖೆಯವರು ಖಾತೆದಾರರಿಗೆ ನೀಡಿದ್ದಾರೆ ಎಂದರು.

'ಕಾಂಗ್ರೆಸ್‌ ಗೆದ್ದರೆ ಕೃಷಿ ಕಾಯ್ದೆ ರದ್ದು, ಕಸದ ಬುಟ್ಟಿ​ಗೆ ಎಸೆ​ಯು​ವೆ'

ಈ ವಿಷಯ ರಾಜ್ಯದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಇದನ್ನು ಗಮನಿಸಿದ ಕೆಲವು ಕುತಂತ್ರಿಗಳು ಕೇವಲ 35 ದಿನಗಳಲ್ಲಿ ಶ್ರೀಗಂಧದ ಮರಗಳಿಗೆ ಮರು ಮೌಲ್ಯಮಾಪನ ಎಂಬ ಅರಣ್ಯ ಇಲಾಖೆ ಬರಹದಡಿ ಒಂದು ಗಿಡಕ್ಕೆ ಕೇವಲ 283 ರು.ಗಳನ್ನು ನಿಗಧಿಪಡಿಸಿ, ಈ ಆದೇಶವನ್ನು ಅರಣ್ಯ ಇಲಾಖೆಯವರು ಖಾತೆದಾರರಿಗೆ ತಲುಪಿಸಿರುತ್ತಾರೆ ಎಂದರು.

ಈ ವಿಚಾರ ನಮ್ಮ ಸಂಘದ ಗಮನಕ್ಕೆ ಬಂದಾಗ ನಾವು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ಪತ್ರವನ್ನು ಖಾತೆದಾರರಿಗೆ, ಅರಣ್ಯ ಇಲಾಖೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ರವಾನಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಸಂರಕ್ಷಣಾಧಿಕಾರಿಯವರು ನಮ್ಮ ಸಂಘಟನೆ, ಖಾತೆದಾರರು, ಶ್ರೀಗಂಧ ಮತ್ತು ಬಿದಿರು ಬೆಳೆದಿರುವ ರೈತರ ಸಭೆಯನ್ನು ಸೆಪ್ಟೆಂಬರ್‌ 30ರಂದು ನಿಗದಿಪಡಿಸಿದ್ದು, ಈ ಸಭೆಯನ್ನು ಮುಂದೂಡಿ, ಅ.1ರಂದು ಬೆಂಗಳೂರಿನ ಅರಣ್ಯ ಭವನದಲ್ಲಿ ಸಭೆ ನಡೆಸಿ, 15 -20 ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು ಎಂದರು.

ಕೊಟ್ಟಮಾತಿನಂತೆ ನಿಗದಿಪಡಿಸಿರುವ 2,44,620 ರು.ಗಳನ್ನು ಪ್ರತಿ ಮರಕ್ಕೆ ನೀಡಬೇಕು. ಇಲ್ಲವಾದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ಈ ವಿಷಯವನ್ನು ತಂದು ನ್ಯಾಯ ದೊರಕಿಸಿಕೊಡಲು ನಾವು ಬದ್ಧರಾಗಿದ್ದೇವೆ ಎಂದರು.

ಮರುಮೌಲ್ಯಮಾಪನದಿಂದ ಶ್ರೀಗಂಧ ಮರಗಳಿಗೆ ಹೆಚ್ಚಿನ ಬೆಲೆ ಕೊಡಬೇಕು. ಅದನ್ನು ಬಿಟ್ಟು ನಿಗದಿಪಡಿಸಿದ ದರಕ್ಕಿಂತ ಕೇವಲ 283 ರು. ಕೊಡುವುದು ಸರಿಯಲ್ಲ ಎಂದರು. ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಶ್ರೀಗಂಧಕ್ಕೆ 65 ಸಾವಿರದಿಂದ 1.5 ಲಕ್ಷ ಬೆಲೆ ಸಿಗುತ್ತಿತ್ತು. ಇದಕ್ಕೆ ಅವಕಾಶ ಮಾಡಿಕೊಡಲಿ ಎಂದು ಆಗ್ರಹಿಸಿದರು. ಹನುಮಂತರಾಯಪ್ಪ, ವಕೀಲ ಸದಾಶಿವಯ್ಯ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.