ಕೊಪ್ಪಳ(ಏ.22):  ಜಿಲ್ಲಾದ್ಯಂತ ಸರ್ಕಾರದ ಅಧೀನದಲ್ಲಿ (ಮುಜರಾಯಿ) ಇರುವ ದೇವಾಲಯಗಳ ಅರ್ಚಕರಿಗೆ ಆಹಾರ ಧಾನ್ಯದ ಕಿಟ್‌ ವಿತರಣೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದ್ದು, ಇನ್ನೇನು ಕಿಟ್‌ ರೆಡಿಯಾಗುತ್ತಿದ್ದಂತೆ ವಿತರಣೆ ಮಾಡಲಾಗುತ್ತದೆ.

ಸರ್ಕಾರ ಸುತ್ತೋಲೆಯಂತೆ ಈಗಾಗಲೇ ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಗುರುತಿಸಲಾಗಿದ್ದು, ಆ 700 ಜನರಿಗೂ ವಿಶೇಷ ದಿನಸಿ ಕಿಟ್‌ ವಿತರಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು ತಿಳಿಸಿದ್ದಾರೆ.

ಕೊರೋ​ನಾ ಭೀತಿ: ಕೊಪ್ಪಳದಲ್ಲಿ 223 ವರದಿಯೂ ನೆಗೆಟಿವ್

ಸೇವಾ ಸಂಸ್ಥೆಗಳ ಗಮನಕ್ಕೆ

ಕೋವಿಡ್‌-19 ಲಾಕ್‌ಡೌನ್‌ನಿಂದಾಗಿ ಕೊಪ್ಪಳ ಜಿಲ್ಲೆಯಲ್ಲಿ ತೊಂದರೆಗೆ ಒಳಗಾದವರ ನೆರವಿಗಾಗಿ ಆಹಾರ, ವಸತಿ ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳು ಮತ್ತು ನಾಗರಿಕ ಸೇವಾ ಸಂಸ್ಥೆಗಳು ತಮ್ಮ ವಿವರವನ್ನು www.karnatakafightscorona.org ನಲ್ಲಿ ಅಳವಡಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಾವಿದರಿಗೆ ಆರ್ಥಿಕ ಸಹಾಯ

ಜಿಲ್ಲೆಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರು, ಸಾಹಿತಿಗಳು ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮಾಹಿತಿ ನೀಡಿದಲ್ಲಿ ಅವರಿಗೆ ಇಲಾಖೆಯಿಂದ ನಿಗದಿತ ಆರ್ಥಿಕ ಸಹಾಯ ನೀಡಲಾಗುವುದು.

ಕೋವಿಡ್‌-19 ಕಾರಣದಿಂದ ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅನೇಕ ಕಲಾವಿದರು ಮತ್ತು ಸಾಹಿತಿಗಳು ಸಂಕಷ್ಟದಲ್ಲಿದ್ದು, ಇವರಿಗೆ ಇಲಾಖೆಯ ನಿರ್ದೇಶಕರ ನಿರ್ದೇಶನದಂತೆ ತಲಾ ರು. 2000 ಗಳನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುವುದು. ಆದ್ದರಿಂದ ಜಿಲ್ಲೆಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರು, ಸಾಹಿತಿಗಳು ಏಪ್ರಿಲ್‌ 29ರೊಳಗಾಗಿ ತಮ್ಮ ಪೂರ್ಣ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಆಧಾರ ಸಂಖ್ಯೆ, ಬ್ಯಾಂಕ್‌ ಖಾತೆ ಸಂಖ್ಯೆ ಮತ್ತು ಐಎಪ್‌ಎಸ್‌ಇ ಕೋಡ್‌ಗಳ ಸ್ಪಷ್ಟವಿವರಗಳುಳ್ಳ ಅರ್ಜಿಯನ್ನು ಇಲಾಖೆಯ ಇ-ಮೇಲ್‌ ವಿಳಾಸ: dkc.koppal@gmail.comಗೆ ಅಥವಾ ವಾಟ್ಸಪ್‌ ಸಂಖ್ಯೆ: 7899893317, 8497009897 ಗೆ ಸಲ್ಲಿಸಬೇಕು.

ಆರ್ಥಿಕ ಸಂಕಷ್ಟದಲ್ಲಿರುವ ಎಲ್ಲಾ ಪ್ರಕಾರದ ಕಲಾವಿದರು, ಸಾಹಿತಿಗಳು ಅರ್ಜಿ ಸಲ್ಲಿಸಬಹುದು. ಕನಿಷ್ಟಹತ್ತು ವರ್ಷ ಕಲಾಸೇವೆ ಮಾಡಿರಬೇಕು. ವೃತ್ತಿನಿರತ ಕಲಾವಿದರಾಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರುವವರು ಇದಕ್ಕೆ ಅರ್ಹರಲ್ಲ. ಸರ್ಕಾರಿ ನೌಕರರಾಗಿರಬಾರದು ತಪ್ಪು ಮಾಹಿತಿ ನೀಡಿದಲ್ಲಿ ಅಂತವರ ಮೇಲೆ ವಿಪತ್ತು ನಿರ್ವಹಣಾ ಅಧಿನಿಯಮದನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.