Asianet Suvarna News Asianet Suvarna News

MLC ಗೋಪಿನಾಥ್ ಸರ್ಕಾರಿ ಜಾಗ ಕಬಳಿಸಿ ಲೇಔಟ್‌ ಮಾಡಿ, ಮಾರಿದ್ರು: ಕೃಷ್ಣ ಬೈರೇಗೌಡ

ನಗರ ಭೂ ಕಾಯ್ದೆಯಡಿ ಲಗ್ಗೆರೆಯಲ್ಲಿ ಗೋಪಿನಾಥ್‌ ಕುಟುಂಬದ 12 ಎಕರೆ ಸರ್ಕಾರದಿಂದ ವಶ

Government Land Consumed and Sold after Layout says Krishna Byre Gowda grg
Author
First Published Sep 22, 2022, 6:30 AM IST

ವಿಧಾನಸಭೆ(ಸೆ.22):  ಲಗ್ಗೆರೆ ನಿವಾಸಿ ಕೆ.ಗೋಪಿನಾಥ್‌ ಎಂಬ ವ್ಯಕ್ತಿ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದ 12 ಎಕರೆ ಭೂಮಿಯಲ್ಲಿ ಅಕ್ರಮವಾಗಿ 4 ಎಕರೆ ವಾಪಸ್‌ ಪಡೆದು, ಉಳಿದ ಭೂಮಿಯನ್ನೂ ಅಕ್ರಮವಾಗಿ ಲೇಔಟ್‌ ಮಾಡಿ ಮಾರಿದ್ದಾನೆ. ಅಷ್ಟೇ ಅಲ್ಲ, ಸರ್ಕಾರದಿಂದಲೇ 11 ಎಕರೆ ಬದಲೀ ಭೂಮಿಯನ್ನು ಮಂಜೂರು ಮಾಡಿಸಿಕೊಂಡಿದ್ದಾನೆ. ಈ ಅಕ್ರಮ ಬೆಂಗಳೂರು ಜಿಲ್ಲಾಧಿಕಾರಿ ತನಿಖಾ ವರದಿಯಲ್ಲಿ ಬಹಿರಂಗವಾಗಿದ್ದು, ಕೂಡಲೇ ವರದಿ ಶಿಫಾರಸುಗಳ ಅನುಸಾರ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್‌ ಸದಸ್ಯ ಕೃಷ್ಣ ಬೈರೇಗೌಡ ಆಗ್ರಹಿಸಿದ್ದಾರೆ.

ಸದನದಲ್ಲಿ ಬುಧವಾರ ನಿಯಮ 69ರಡಿ ಈ ವಿಷಯ ಪ್ರಸ್ತಾಪಿಸಿ ಮಾತನಾಡಿದ ಕೃಷ್ಣ ಬೈರೇಗೌಡ ಅವರು, ಸರ್ಕಾರ ಕೂಡಲೇ ಗೋಪಿನಾಥ್‌ಗೆ ಮಂಜೂರು ಮಾಡಿರುವ 11 ಎಕರೆ ಭೂಮಿಯನ್ನು ವಾಪಸ್‌ ಪಡೆದು, ತಪ್ಪು ಮಾಹಿತಿ ನೀಡಿ ಭಾರೀ ಲಾಭ ಮಾಡಿಕೊಂಡಿರುವ ಆ ವ್ಯಕ್ತಿಯನ್ನು ಶಿಕ್ಷೆಗೆ ಗುರಿಪಡಿಸಬೇಕು. ಈ ಅಕ್ರಮಕ್ಕೆ ಸಹಕರಿಸಿರುವ ಎಲ್ಲ ಅಧಿಕಾರಿಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ನಾವು ಬ್ರಿಟಿಷರ ಬಂದೂಕಿಗೆ ಹೆದರಿಲ್ಲ, ಇನ್ನು ಮೋದಿ ಬಂದೂಕಿಗೆ ಹೆದರ್ತೀವಾ?

ಇದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಬಹುತೇಕ ಸದಸ್ಯರು ಹಾಗೂ ಜೆಡಿಎಸ್‌ ಮತ್ತು ಆಡಳಿತ ಪಕ್ಷ ಬಿಜೆಪಿಯ ಕೆಲ ಸದಸ್ಯರು ಕೂಡ ದನಿಗೂಡಿಸಿ ಸಹಮತ ವ್ಯಕ್ತಪಡಿಸಿದರು. ಬಳಿಕ ಇದಕ್ಕೆ ಉತ್ತರ ನೀಡಿದ ಕಂದಾಯ ಸಚಿವ ಆರ್‌.ಅಶೋಕ್‌, ಕೆ.ಗೋಪಿನಾಥ್‌ ಎಂಬ ವ್ಯಕ್ತಿ ನಡೆಸಿರುವ ಭೂ ಅಕ್ರಮದ ಬಗ್ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ವರದಿ ನೀಡಿದ್ದು, ಆ ವರದಿಯನ್ನು ಪರಿಶೀಲಿಸಿ ಕಾನೂನಾತ್ಮಕವಾಗಿ ಕ್ರಮ ವಹಿಸುತ್ತೇವೆ. ಆ ವ್ಯಕ್ತಿಗೆ ಮಂಜೂರಾಗಿರುವ 11 ಎಕರೆ ಭೂಮಿಯನ್ನು ಸರ್ಕಾರಕ್ಕೆ ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇದಕ್ಕೆ ಸಮಾಧಾನಗೊಳ್ಳದ ಕೃಷ್ಣ ಬೈರೇಗೌಡ ಡಿಸಿ ವರದಿ ನೀಡಿ ಐದು ತಿಂಗಳಾಗಿದೆ. ಇದುವರೆಗೆ ಏನು ಕ್ರಮ ಕೈಗೊಂಡಿಲ್ಲವೇಕೆ? ಸರ್ಕಾರ ಲೂಟಿಕೋರರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಕೆ.ಗೋಪಿನಾಥ್‌ ಬಿಜೆಪಿ ಎಂಎಲ್‌ಸಿಯ ತಮ್ಮ?
ಈ ಮಧ್ಯೆ, ಕೃಷ್ಣ ಬೈರೇಗೌಡ ಅವರು ಮಾತನಾಡುವಾಗ ಬಿಜೆಪಿ ಸದಸ್ಯರೊಬ್ಬರು ಒಬ್ಬರಿಗೇ ಎರಡು ಗಂಟೆ ಮಾತನಾಡಲು ಅವಕಾಶ ಕೊಡುತ್ತೀರಿ ನಮಗೂ ಕೊಡಿ ಎಂದು ಸ್ಪೀಕರ್‌ ಅವರನ್ನು ಪ್ರಶ್ನಿಸಿದರು. ಇದಕ್ಕೆ ಗರಂ ಆದ ಕೃಷ್ಣ ಬೈರೇಗೌಡ ಇದು ಬಿಜೆಪಿಯವರು ಮಾಡಿರುವ ಅಕ್ರಮವೇ ಇದು. ಲೂಟಿ ಮಾಡೋಕೆ ಅವಕಾಶ ಕೊಡುತ್ತೀರಾ ಎಂದು ಪ್ರಶ್ನಿಸಿದರು. ಇದೇ ವೇಳೆ ಕಾಂಗ್ರೆಸ್‌ ಸದಸ್ಯರ ಗುಂಪಿನಿಂದ ಗೋಪಿನಾಥ್‌ ಬಿಜೆಪಿಯ ವಿಧಾನ ಪರಿಷತ್‌ ಸದಸ್ಯನ ತಮ್ಮ ಎಂಬ ಕೂಗು ಕೇಳಿಬಂತು.

Karnataka Politics : ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಕೃಷ್ಣ ಬೈರೇಗೌಡ ಅಧ್ಯಕ್ಷ

ಸರ್ಕಾರದ ಷರತ್ತನ್ನೂ ಮೀರಿ ಪರಿಹಾರ ಪಡೆದ!
ಈ ಪ್ರಕರಣದ ಆಳ ಅಗಲ ವಿವರಿಸಿದ ಕೃಷ್ಣ ಬೈರೇಗೌಡ ಅವರು, ನಗರ ಪ್ರದೇಶದಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಭೂಮಿ ಹೊಂದಿದ್ದ ಕಾರಣಕ್ಕೆ ಕೇಂದ್ರ ಸರ್ಕಾರದ ನಗರ ಭೂ ಮಿತಿ ಕಾಯ್ದೆಯಡಿ ಸರ್ಕಾರ ಕೆ.ಗೋಪಿನಾಥ್‌ ಕುಟುಂಬ 16.10 ಎಕರೆ ಭೂಮಿಯನ್ನು (4 ಎಕರೆಗೂ ಹೆಚ್ಚು ಕರಾಬ್‌ ಭೂಮಿ ಸೇರಿ) ಮುಟ್ಟುಗೋಲು ಹಾಕಿಕೊಂಡು ಕೊಳಚೆ ನಿರ್ಮೂಲನಾ ಮಂಡಳಿಗೆ ನೀಡಿತ್ತು. ಮುಟ್ಟುಗೋಲು ಪ್ರಶ್ನಿಸಿದ್ದ ಗೋಪಿನಾಥ್‌ಗೆ ಕೆಎಟಿ, ನಂತರ ಹೈಕೋರ್ಚ್‌ನಲ್ಲೂ ಹಿನ್ನಡೆಯಾಗಿತ್ತು. ಈ ವೇಳೆ ಆ ಭೂಮಿಗೆ ಪರಿಹಾರ ನೀಡಿರುವುದನ್ನೂ ಉಲ್ಲೇಖಿಸಲಾಗಿತ್ತು. ನಂತರ 1999ರಲ್ಲಿ ನಗರ ಭೂ ಮಿತಿ ರದ್ದತಿ ಕಾಯ್ದೆ ತಂದ ಸರ್ಕಾರ, ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿರುವ ಭೂಮಿಗೆ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹೇಳಿತ್ತು.

ಆದರೆ, ಗೋಪಿನಾಥ್‌ ತಮ್ಮಿಂದ ಮುಟ್ಟುಗೋಲು ಹಾಕಿಕೊಂಡ ಭೂಮಿಗೆ ಸರ್ಕಾರದಿಂದ ಪರಿಹಾರ ಕೋರಿದ್ದರು. ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದ ಭೂಮಿಯಲ್ಲಿ 4.20 ಎಕರೆಯನ್ನು ಆತನಿಗೆ ವಾಪಸ್‌ ನೀಡಿ ಮತ್ತೆ ಯಾವುದೇ ಪರಿಹಾರ ಕೋರದಂತೆ ಷರತ್ತು ವಿಧಿಸಿತ್ತು. ಆ ನಂತರವೂ ಗೋಪಿನಾಥ್‌ ಉಳಿದ 7 ಎಕರೆಗೂ ಹೆಚ್ಚು ಭೂಮಿಯನ್ನು ಅಕ್ರಮವಾಗಿ ಲೇಔಟ್‌ ಮಾಡಿ ತಾವೇ ಅನೇಕ ಜನರಿಗೆ ಜಿಪಿಎ ಮಾಡಿಕೊಟ್ಟಿದ್ದಾರೆ. ನಂತರ 2009ರಲ್ಲಿ ಸರ್ಕಾರಕ್ಕೆ ಸುಳ್ಳು ಮಾಹಿತಿಯೊಂದಿಗೆ ಮನವಿ ಸಲ್ಲಿಸಿ ಜಾಲಹಳ್ಳಿ ಗ್ರಾಮದ ಹೊಸಹಳ್ಳಿ ವ್ಯಾಪ್ತಿಯಲ್ಲಿ 11 ಎಕರೆ ಭೂಮಿಯ ಮಂಜೂರು ಮಾಡಿಸಿಕೊಂಡಿದ್ದಾರೆ. ಇದು ಡೀಸಿ ವರದಿಯಲ್ಲಿ ಬಹಿರಂಗವಾಗಿದೆ ಎಂದು ಕೃಷ್ಣ ಬೈರೇಗೌಡ ಸದನಕ್ಕೆ ಮಾಹಿತಿ ನೀಡಿದರು.
 

Follow Us:
Download App:
  • android
  • ios