Asianet Suvarna News Asianet Suvarna News

ಕೊಪ್ಪಳ: ಹಿರೇಹಳ್ಳಕ್ಕೆ ಮತ್ತೆ 4 ಬ್ಯಾರೇಜ್‌, ಶ್ರೀಗಳ ಕಾರ್ಯಕ್ಕೆ ಸರ್ಕಾರ ಸಾಥ್‌

ಹಿರೇಹಳ್ಳಕ್ಕೆ ಮತ್ತೆ ನಾಲ್ಕು ಬ್ಯಾರೇಜ್‌| ಹತ್ತಾರು ಸಾವಿರ ಎಕರೆ ಪ್ರದೇಶ ನೀರಾವರಿ ವ್ಯಾಪ್ತಿಗೆ|ಬ್ಯಾರೇಜ್‌ನಲ್ಲಿ ಸಂಗ್ರಹಿಸುವುದರಿಂದ ಅಂತರ್ಜಲಮಟ್ಟ ವೃದ್ಧಿಯಾಗುತ್ತದೆ ಹಾಗೂ ಬೇಸಿಗೆಯಲ್ಲಿಯೂ ನೀರಿನ ದಾಹ ತಪ್ಪಿಸುವ ಉದ್ದೇಶ ಹೊಂದಲಾಗಿದೆ|

Government Decided for Four Barrage Construct to Hirahalla Dam
Author
Bengaluru, First Published Dec 18, 2019, 8:04 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ಡಿ.18): ಗವಿಸಿದ್ಧೇಶ್ವರ ಶ್ರೀಗಳು 24 ಕಿಲೋ ಮೀಟರ್‌ ಹಿರೇಹಳ್ಳವನ್ನು ಪುನಶ್ಚೇತನ ಮಾಡಲು ಕೈ ಹಾಕಿ ವರ್ಷದೊಳಗೆ ಪೂರ್ಣಗೊಳಿಸಿದ್ದರಿಂದ ಪ್ರೇರಣೆಗೊಂಡ ಸರ್ಕಾರ ಈ ಹಳ್ಳಕ್ಕೆ ಮತ್ತೆ ನಾಲ್ಕು ಬ್ಯಾರೇಜ್‌ ನಿರ್ಮಿಸಲು ಟೆಂಡರ್‌ ಕರೆದಿದೆ.

ಈ ಹಳ್ಳವನ್ನು ಪುನಶ್ಚೇತನ ಮಾಡುವ ಪ್ರಾರಂಭದಲ್ಲಿಯೇ ಶ್ರೀಗಳು, ಇಲ್ಲಿ ಬ್ಯಾರೇಜ್‌ ನಿರ್ಮಿಸಬೇಕು ಎಂಬ ಆಶಯ ಹೊಂದಿದ್ದರು. ಅಲ್ಲದೆ ಈಗಾಗಲೇ ನಿರ್ಮಾಣಗೊಂಡಿರುವ ಬ್ಯಾರೇಜ್‌ಗಳ ಉಪಯೋಗವನ್ನು ಮನವರಿಕೆ ಮಾಡಿಕೊಡುವ ಮೂಲಕ ಹಳ್ಳದಲ್ಲಿ 10ರಿಂದ 15 ಬ್ಯಾರೇಜ್‌ ನಿರ್ಮಿಸುವ ಅಗತ್ಯವಿದೆ ಎಂಬುದನ್ನು ಒತ್ತಿ ಹೇಳಿದ್ದರು. ಇದರಿಂದ ಸರ್ಕಾರ ಹಿರೇಹಳ್ಳದ ಪುನಶ್ಚೇತನ ಕಾರ್ಯ ಪೂರ್ಣಗೊಳ್ಳುವ ಮೊದಲೇ ನಾಲ್ಕು ಬ್ಯಾರೇಜ್‌ ನಿರ್ಮಾಣಕ್ಕೆ ಅಸ್ತು ಎಂದಿದೆ.

ಮತ್ತೆ ನಾಲ್ಕು ಬ್ಯಾರೇಜ್‌:

ಈಗ ಇರುವ ಬ್ರಿಡ್ಜ್‌ ಕಂ ಬ್ಯಾರೇಜ್‌ ಜತೆಗೆ ನಾಲ್ಕು ಬ್ಯಾರೇಜ್‌ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದಿದೆ. ಇದಕ್ಕಾಗಿ ಬರೋಬ್ಬರಿ 36.30 ಕೋಟಿ ಬಿಡುಗಡೆ ಮಾಡಿದ್ದು, ಟೆಂಡರ್‌ ಕರೆಯಲಾಗಿದೆ. ಮೂರು ಬ್ರಿಡ್ಜ್‌ ಕಂ ಬ್ಯಾರೇಜ್‌ ನಿರ್ಮಾಣಕ್ಕೆ ಸರ್ಕಾರ ತಲಾ 8 ರಿಂದ 10 ಕೋಟಿ ನೀಡಿದ್ದರೆ ಉಳಿದ ಒಂದನ್ನು ಕೇವಲ ಬ್ಯಾರೇಜ್‌ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ. ಕೊಪ್ಪಳ ತಾಲೂಕಿನ ಮಾದಿನೂರು, ದೇವಲಾಪುರ ನಡುವೆ, ಕಾಟ್ರಳ್ಳಿ ಮತ್ತು ಗುನ್ನಳ್ಳಿ ಮಧ್ಯೆ, ಯತ್ನಟ್ಟಿಹಾಗೂ ಓಜನಳ್ಳಿ ಮಧ್ಯೆ ಬ್ರಿಡ್ಜ್‌ ಕಂ ಬ್ಯಾರೇಜ್‌ ಹಾಗೂ ದದೆಗಲ್‌ ಗ್ರಾಮದ ಬಳಿ ಬ್ಯಾರೇಜ್‌ ನಿರ್ಮಾಣಕ್ಕೆ ಅಸ್ತು ಎನ್ನಲಾಗಿದೆ.

ಸುತ್ತಮುತ್ತಲ ಪ್ರದೇಶದ ನೀರಾವರಿ:

ಪದೇ ಪದೆ ಬರಕ್ಕೆ ತುತ್ತಾಗುವ ಕೊಪ್ಪಳ ತಾಲೂಕಿನ ಬಹುತೇಕ ಭಾಗ ಹಿರೇಹಳ್ಳ ಸುತ್ತಮುತ್ತಲ ಪ್ರದೇಶದಲ್ಲಿಯೇ ಇದೆ. ಹಿರೇಹಳ್ಳಕ್ಕೆ ಬ್ಯಾರೇಜ್‌ ನಿರ್ಮಿಸಿದರೆ ಅಂತರ್ಜಲ ಹೆಚ್ಚಳವಾಗಿ ನೀರಾವರಿ ಸೌಲಭ್ಯ ಹೆಚ್ಚಾಗುತ್ತದೆ. ಇದರಿಂದ ಬರೋಬ್ಬರಿ ಹತ್ತಾರು ಸಾವಿರ ಎಕರೆ ಪ್ರದೇಶ ನೀರಾವರಿ ವ್ಯಾಪ್ತಿಗೆ ಒಳಪಡಲಿದೆ. ಹಿರೇಹಳ್ಳ ಸುತ್ತಮುತ್ತ 20ಕ್ಕೂ ಹೆಚ್ಚು ಗ್ರಾಮಗಳು ಇದ್ದು ಸತತ ಬರದಿಂದ ಬಸವಳಿದಿದ್ದು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಬ್ಯಾರೇಜ್‌ ನಿರ್ಮಿಸಿದರೆ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ವೃದ್ಧಿ ಆಗುವುದರಿಂದ ನೀರಿನ ದಾಹ ತೀರಲಿದೆ. ಈಗಾಗಲೇ ಹಳ್ಳದ ಎರಡು ದಡದಲ್ಲಿರುವ ಗ್ರಾಮಗಳು ಹಿರೇಹಳ್ಳವನ್ನೇ ನೀರಿಗಾಗಿ ನೆಚ್ಚಿಕೊಂಡಿದ್ದು, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗುತ್ತಿದೆ.

ನೀರು ಸಂಗ್ರಹ:

ಹಿರೇಹಳ್ಳ ಜಲಾಶಯ ಭರ್ತಿಯಾಗಿ ಮಳೆಗಾಲದಲ್ಲಿ ಬಿಡುಗಡೆ ಮಾಡುವ ನೀರು ಹರಿದು ಹೋಗುತ್ತದೆ. ಹೀಗೆ ಹೋಗುವ ನೀರನ್ನೇ ಶೇಖರಣೆ ಮಾಡಿ, ಬ್ಯಾರೇಜ್‌ನಲ್ಲಿ ಸಂಗ್ರಹಿಸುವುದರಿಂದ ಅಂತರ್ಜಲಮಟ್ಟ ವೃದ್ಧಿಯಾಗುತ್ತದೆ ಹಾಗೂ ಬೇಸಿಗೆಯಲ್ಲಿಯೂ ನೀರಿನ ದಾಹ ತಪ್ಪಿಸುವ ಉದ್ದೇಶ ಹೊಂದಲಾಗಿದೆ.

ವಿವರ ಸ್ಥಳ ಮೊತ್ತ

ಬ್ಯಾರೇಜ್‌ 1 ಮಾದಿನೂರು-ದೇವಲಾಪುರ ನಡುವೆ 9.90 ಕೋಟಿ
ಬ್ಯಾರೇಜ್‌ 2 ಕಾಟ್ರಳ್ಳಿ-ಗುನ್ನಳ್ಳಿ ನಡುವೆ 9.90 ಕೋಟಿ
ಬ್ಯಾರೇಜ್‌ 3 ಯತ್ನಟ್ಟಿ-ಓಜನಳ್ಳಿ ನಡುವೆ 8.50 ಕೋಟಿ
ಬ್ಯಾರೇಜ್‌ 4 ದದೆಗಲ್‌ ಬಳಿ 8.00 ಕೋಟಿ

ಈ ಬಗ್ಗೆ ಮಾತನಾಡಿದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಅವರು, ಹಿರೇಹಳ್ಳ ಜಲಾಶಯಕ್ಕೆ ಮತ್ತೆ ನಾಲ್ಕು ಬ್ಯಾರೇಜ್‌ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಪ್ರಾರಂಭವಾಗಿದೆ. ಇದರಿಂದ ಗವಿಸಿದ್ಧೇಶ್ವರ ಶ್ರೀಗಳು ಪುನಶ್ಚೇತನ ಮಾಡಿರುವ ಹಿರೇಹಳ್ಳ ಬ್ಯಾರೇಜ್‌ ನಿರ್ಮಾಣದಿಂದ ನದಿಯಂತಾಗಲಿದೆ. ಶ್ರೀಗಳ ಪರಿಶ್ರಮವೂ ಸಾರ್ಥಕವಾಗುತ್ತದೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಿರೇಹಳ್ಳ ಪುನಶ್ಚೇತನವಾದ ಮೇಲೆ ಈಗ ಬ್ಯಾರೇಜ್‌ ನಿರ್ಮಾಣವಾದರೆ ಸುತ್ತಮುತ್ತಲ ರೈತರಿಗೆ ಅನುಕೂಲವಾಗುತ್ತದೆ. ಸುಮಾರು 10-15 ಬ್ಯಾರೇಜ್‌ ನಿರ್ಮಾಣದ ಅಗತ್ಯವಿದೆ ಎಂದು ಗವಿಸಿದ್ಧೇಶ್ವರ ಶ್ರೀಗಳು ಅವರು ಹೇಳಿದ್ದಾರೆ. 
 

Follow Us:
Download App:
  • android
  • ios