Asianet Suvarna News Asianet Suvarna News

ಗೋಪಾಲಸ್ವಾಮಿ ಆನೆ ನಿಧನ: ಕಾಡಾನೆ ಕಾರ್ಯಾಚರಣೆ ಮುಂದೂಡಿಕೆ

  • ಗೋಪಾಲಸ್ವಾಮಿ ಆನೆ ನಿಧನ: ಕಾಡಾನೆ ಕಾರ್ಯಾಚರಣೆ ಮುಂದೂಡಿಕೆ
  • ನಾಗರಹೊಳೆಯಲ್ಲಿರುವ ಗಂಡಾನೆ ಗೋಪಾಲಸ್ವಾಮಿ
  • ಇಂದು ಶುರುವಾಗಬೇಕಿದ್ದ ಕಾರ್ಯಾಚರಣೆ ಭಾನುವಾರಕ್ಕೆ ಮುಂದೂಡಿಕೆ
  • ಸದ್ಯ ನೈಟ್‌ ಪೆಟ್ರೋಲಿಂಗ್‌
Gopalaswamy elephant death  operation postponed rav
Author
First Published Nov 25, 2022, 9:32 AM IST

ಚಿಕ್ಕಮಗಳೂರು (ನ.25) : ನಾಗರಹೊಳೆಯಲ್ಲಿ ಗೋಪಾಲಸ್ವಾಮಿ ಹೆಸರಿನ ಗಂಡಾನೆ ಬುಧವಾರ ಅಕಾಲಿಕವಾಗಿ ಮೃತಪಟ್ಟಿದ್ದು, ಈ ಕಾರಣದಿಂದ ಮೂಡಿಗೆರೆ ತಾಲೂಕಿನ ಹುಲ್ಲೇಮನೆ, ಕುಂದೂರಿನಲ್ಲಿ ಶುಕ್ರವಾರ ಆರಂಭ ಆಗಬೇಕಾಗಿದ್ದ ಆನೆ ಸೆರೆಹಿಡಿಯುವ ಕಾರ್ಯಾಚರಣೆ ಎರಡು ದಿನಗಳ ಮಟ್ಟಿಗೆ ಮುಂದಕ್ಕೆ ಹೋಗಿದೆ.

ಆನೆ ಗೋಪಾಲಸ್ವಾಮಿ ನಿಧನದಿಂದಾಗಿ ನಾಗರಹೊಳೆಯಲ್ಲಿಯೇ ಮಾವುತರು ಇರಬೇಕಾಗಿದೆ. ಇದರಿಂದಾಗಿ ಶನಿವಾರ ಆನೆಸಹಿತ ಮಾವುತರು ಮೂಡಿಗೆರೆಗೆ ಆಗಮಿಸಲಿದ್ದು, ಶುಕ್ರವಾರದ ಬದಲು ಭಾನುವಾರ ಆನೆ ಕಾರ್ಯಾಚರಣೆ ಆರಂಭವಾಗಲಿದೆ.

ಕಾಡಾನೆ ಜೊತೆ ಕಾದಾಟದಲ್ಲಿ ಗಂಭೀರ ಗಾಯ: ದಸರಾ ಆನೆ ಗೋಪಾಲಸ್ವಾಮಿ ಸಾವು

ದಸರಾ ಹಬ್ಬ ಕಳೆಯುತ್ತಿದ್ದಂತೆ ನಾಗರಹೊಳೆಯ ಐದು ಆನೆಗಳನ್ನು ಕಾಡಾನೆಗಳ ಸೆರೆಹಿಡಿಯಲು ಕರೆಸಿಕೊಳ್ಳಲಾಗಿತ್ತು. ಆ ತಂಡದಲ್ಲಿ ಗೋಪಾಲಸ್ವಾಮಿ ಹೆಸರಿನ ಆನೆ ಕೂಡ ಇತ್ತು. ಕೆಲವು ದಿನಗಳ ನಂತರ ಗೋಪಾಲಸ್ವಾಮಿ ಸೇರಿದಂತೆ ಮೂರು ಆನೆಗಳು ಮಸ್‌್ತ (ಮದ)ಗೆ ಬಂದಿದ್ದರಿಂದ ಎಲ್ಲ ಆನೆಗಳು ವಾಪಸ್‌ ನಾಗರಹೊಳೆಗೆ ಕಳುಹಿಸಿ ಕಾರ್ಯಾಚರಣೆಯನ್ನು ಕೈಬಿಡಲಾಗಿತ್ತು.

ರಾತ್ರಿ ವೇಳೆಯಲ್ಲಿ ನಾಗರಹೊಳೆ ಕಾಡಿನಲ್ಲಿ ಬಿಡಲಾಗಿದ್ದ ಆನೆಗಳ ಪೈಕಿ ಗೋಪಾಲಸ್ವಾಮಿ ಹಾಗೂ ಇನ್ನೊಂದು ಕಾಡಾನೆ ನಡುವೆ ಘರ್ಷಣೆ ನಡೆದಿದೆ. ಇದರಿಂದಾಗಿ ಗೋಪಾಲಸ್ವಾಮಿ ಆನೆಯ ಕಾಲಿಗೆ ತೀವ್ರವಾಗಿ ಪೆಟ್ಟಾಗಿತ್ತು. ಆನೆಯು ಗುಣಮುಖವಾಗದ ರೀತಿಯಲ್ಲಿ ಗಾಯವಾಗಿದ್ದರಿಂದ ಬುಧವಾರ ಮೃತಪಟ್ಟಿದೆ.

ಕಳೆದ ಭಾನುವಾರ ಮೂಡಿಗೆರೆ ತಾಲೂಕಿನ ಕುಂದೂರು ಹುಲ್ಲೆಮನೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಶೋಭಾ ಎಂಬವರು ಮೃತಪಟ್ಟಿದ್ದರಿಂದ ಸ್ಥಳೀಯರು ಶಾಸಕ ಎಂ.ಪಿ. ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆಯಿಂದಾಗಿ ತಕ್ಷಣಕ್ಕೆ ಎಚ್ಚೆತ್ತ ರಾಜ್ಯ ಸರ್ಕಾರ ಸೋಮವಾರವೇ ಆನೆ ಸೆರೆಹಿಡಿಯಲು ಆದೇಶ ಹೊರಡಿಸಿತು. ಕೂಡಲೇ ಚಿಕ್ಕಮಗಳೂರು ವಿಭಾಗದ ಅರಣ್ಯಾಧಿಕಾರಿಗಳು ಆನೆಯನ್ನು ಹಿಡಿಯಲು ಪ್ಲಾನ್‌ ಸಿದ್ಧಪಡಿಸಿದರು. ಜತೆಗೆ ನಾಗಾರಹೊಳೆಯಿಂದ ಐದು ಆನೆಗಳು ತರಿಸಿಕೊಳ್ಳಲು ಇಚ್ಚಿಸಿದ್ದರು. ಆದರೆ, ಆನೆ ಗೋಪಾಲಸ್ವಾಮಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ನಾಗರಹೊಳೆಯಿಂದ ಆನೆಗಳು ತರಿಸಿಕೊಳ್ಳಲು ತಡವಾಗಿದೆ.

ದುಬಾರೆಯಿಂದ 2, ನಾಗರಹೊಳೆಯಿಂದ 3 ಆನೆ

ಅರಣ್ಯ ಇಲಾಖೆ ಸದ್ಯಕ್ಕೆ ಮಾಡಿರುವ ಪ್ಲಾನ್‌ ಪ್ರಕಾರ ದುಬಾರೆಯಿಂದ 2 ಹಾಗೂ ನಾಗರಹೊಳೆಯಿಂದ 3, ಒಟ್ಟು 5 ಗಂಡಾನೆಗಳನ್ನು ತರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜತೆಗೆ ಕಾರ್ಯಾಚರಣೆ ಎಲ್ಲಿಂದ ಆರಂಭಿಸಬೇಕೆಂಬುದನ್ನು ಸಹ ಅರಣ್ಯ ಇಲಾಖೆ ಗುರುತು ಮಾಡಿದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಚಿಕ್ಕಮಗಳೂರಲ್ಲಿ ಕಾಡಾನೆ ದಾಳಿಗೆ ಜನರ ಬಲಿ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಕಾರ್ಯಾಚರಣೆಯಲ್ಲಿ 5 ಆನೆ, 100 ಮಂದಿ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಮಹಿಳೆಯನ್ನು ಬಲಿ ತೆಗೆದುಕೊಂಡಿರುವ ಆನೆಗಳು ಕುಂದೂರು ಹುಲ್ಲೆಮನೆ ಗ್ರಾಮದ ಬಳಿ ಓಡಾಡುತ್ತಿವೆ. ಇವುಗಳಿಂದ ಜನರಿಗೆ ತೊಂದರೆ ಅಗಬಾರದೆಂಬ ನಿಟ್ಟಿನಲ್ಲಿ ಸದ್ಯಕ್ಕೆ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರ ಜತೆಗೆ 10 ಮಂದಿ ಅರಣ್ಯ ಸಿಬ್ಬಂದಿಯ ಎರಡು ತಂಡಗಳು ನೈಟ್‌ ಪೆಟ್ರೋಲಿಂಗ್‌ನಲ್ಲಿ ತೊಡಗಿವೆ. ಒಟ್ಟಾರೆ ಗೋಪಾಲಸ್ವಾಮಿ ಆನೆಯ ನಿಧನದಿಂದ ಕಾಡಾನೆಗಳ ಸೆರೆಹಿಡಿಯುವ ಕಾರ್ಯಾಚರಣೆ ಎರಡು ದಿನ ತಡವಾಗಿ ಆರಂಭವಾಗಲಿದೆ.

Follow Us:
Download App:
  • android
  • ios