ತುಮಕೂರು(ಅ.01): ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡುವುದಾ. ನೋ ಚಾನ್ಸ್‌. ಅವರು ರಾಜ್ಯದ ಬಿಜೆಪಿಯ ಅಧಿನಾಯಕ. ಅವರ ನಾಯಕತ್ವದಲ್ಲೇ ಬಿಜೆಪಿ ಸರ್ಕಾರ ಮುನ್ನೆಡೆದಿರುವುದು. ಅವರನ್ನು ಕೇಂದ್ರದ ನಾಯಕರಾದಿಯಾಗಿ ಎಲ್ಲರೂ ಒಪ್ಪಿದ್ದಾರೆ. ಅದರಲ್ಲಿ ಗೊಂದಲವೇ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಸ್ಪಷ್ಟಪಡಿಸಿದರು.

ತುರುವೇಕೆರೆ ಪಟ್ಟಣದಲ್ಲಿ ಪಕ್ಷದ ವತಿಯಿಂದ ನಡೆದ ಒಂದು ದೇಶ, ಒಂದು ಸಂವಿಧಾನ ಕುರಿತ ಉಪನ್ಯಾಸ ಸಮಾರಂಭದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರನ್ನು ಉದಾಸೀನ ಮಾಡುವ ಮಾತೇ ಇಲ್ಲ. ರಾಜ್ಯದಲ್ಲಿ ಅವರನ್ನೇ ತಾನೇ ಬಿಜೆಪಿ ಹೈಕಮಾಂಡ್‌. ಮುಖ್ಯಮಂತ್ರಿಯನ್ನಾಗಿ ಮಾಡಿರುವುದು. ವಿನಾಕಾರಣ ಕೆಲವರು ಇಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ. ಇಡೀ ಮಂತ್ರಿಮಂಡಲ ಯಡಿಯೂರಪ್ಪನವರೊಂದಿಗೆ ಇದೆ. ಅದರಲ್ಲಿ ಅನುಮಾನವೇ ಇಲ್ಲ ಎಂದರು.

ದೇವರು ಮೆಚ್ತಾನಾ?:

ಅನರ್ಹ ಶಾಸಕರಿಂದಲೇ ನಾವು ಅಧಿಕಾರಕ್ಕೆ ಬಂದಿರುವುದು. ಅಂತಹವರಿಗೆ ಟಿಕೆಟ್‌ ನೀಡದಿದ್ದರೆ ದೇವರು ಮೆಚ್ತಾನಾ?. ಅವರಿಗೆ ಟಿಕೇಟ್‌ ನೀಡಲೇಬೇಕು. ಅವರನ್ನು ಗೆಲ್ಲಿಸಿಯೇ ತೀರಬೇಕು. ಸರ್ಕಾರ ಉಳಿದ ಅವಧಿಯವರೆಗೂ ಜನರ ಸೇವೆ ಮಾಡಲೇಬೇಕು ಎಂದು ರವಿಕುಮಾರ್‌ ಹೇಳಿದರು.

ಸಮತೋಲನ ಆಡಳಿತ:

ಯಡಿಯೂರಪ್ಪನವರು ಆಡಿರುವ ತಂತಿಯ ಮೇಲಿನ ನಡಿಗೆ ಎಂಬ ಮಾತನ್ನು ಹೇಗೇಗೋ ಅಥೈಲಾಗುತ್ತಿದೆ. ಯಡಿಯೂರಪ್ಪನವರು ಹೇಳಿರುವುದು ತಾವು ರಾಜ್ಯದ ಮುಖ್ಯಮಂತ್ರಿಯಾಗಿರುವುದರಿಂದ ತಾವು ಎಲ್ಲರ ಮಾತಿಗೂ ಗಮನ ನೀಡಬೇಕು. ಎಲ್ಲರ ಅಹವಾಲುಗಳನ್ನು ಕೇಳಬೇಕು. ಒಬ್ಬರು ಪ್ರತ್ಯೇಕ ಜಿಲ್ಲೆ ಮಾಡಬೇಕು ಅಂತಾರೆ, ಮತ್ತೊಬ್ಬರು ಬೇಡ ಅಂತಾರೆ. ಇಂತಹ ವ್ಯತಿರಿಕ್ತ ಹೇಳಿಕೆಗಳು ದಿನಂಪ್ರತಿ ಇರುತ್ತದೆ. ಆ ದೃಷ್ಟಯಿಂದ ಯಡಿಯೂರಪ್ಪನವರು ಹೇಳಿದ್ದಾರೆ ವಿನಃ ಅದರಲ್ಲಿ ಯಾವುದೇ ವಿಶೇಷಾರ್ಥ ಬೇಡ ಎಂದು ರವಿಕುಮಾರ್‌ ಸ್ಪಷ್ಟಪಡಿಸಿದರು.

ಸಚಿವ ಬೊಮ್ಮಾಯಿ ವಿರುದ್ಧ ಮಾತನಾಡಿದ ವ್ಯಕ್ತಿಗೆ ಥಳಿತ

ಮಾದರಿ ಸರ್ಕಾರ:

ಯಡಿಯೂರಪ್ಪನವರಿಗೆ ದೇಶವೇ ಮೆಚ್ಚುವಂತಹ ಆಡಳಿತ ನೀಡಬೇಕೆಂದು ಮಹತ್ವಾಕಾಂಕ್ಷೆ ಇದೆ. ಒಂದು ಮಾದರಿ ಸರ್ಕಾರ ಮಾಡುವ ಮನಸ್ಸಿದೆ. ಮುಂದಿನ ಮೂರೂವರೆ ವರ್ಷಗಳ ಕಾಲ ಯಡಿಯೂರಪ್ಪನವರ ನೇತೃತ್ವದಲ್ಲೇ ಸರ್ಕಾರ ಉತ್ತಮವಾಗಿ ನಡೆಯಲಿದೆ ಎಂದು ರವಿಕುಮಾರ್‌ ಹೇಳಿದರು.

ಮಾತಿನ ಭರ:

ಸಚಿವ ಈಶ್ವರಪ್ಪನವರು ಸ್ಥಳೀಯ ಪಕ್ಷಗಳು ಚುನಾವಣೆಗೆ ಸ್ಪರ್ಧಿಸಿದರೆ ಏನೇನಾಗುತ್ತದೆ ಎಂದು ಹೇಳುವ ಭರದಲ್ಲಿ ಯಡಿಯೂರಪ್ಪನವರು ಕೆಜೆಪಿ ಕಟ್ಟಿದ್ದ ಬಳಿಕ ಆಗಿದ್ದ ಸನ್ನಿವೇಶವನ್ನು ಹೇಳಿದ್ದಾರೆ ಅಷ್ಠೆ. ಮಾತಿನ ಭರದಲ್ಲಿ ಯಡಿಯೂರಪ್ಪನವರ ಹೆಸರನ್ನು ಪ್ರಸ್ತಾಪಿಸಿದ್ದಾರೆ ವಿನಃ ಅದರಲ್ಲಿ ಯಾವುದೇ ದುರಾಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಮಸಾಲಾ ಜಯರಾಮ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ವಿಜಯಕುಮಾರ್‌, ತಾಲೂಕು ಬಿಜೆಪಿ ಅಧ್ಯಕ್ಷ ದುಂಡ ರೇಣುಕಯ್ಯ ಉಪಸ್ಥಿತರಿದ್ದರು.

ಕೇಂದ್ರದಿಂದ ಶೀಘ್ರ ನೆರೆ ಪರಿಹಾರ

ಇನ್ನೆರೆಡು ಮೂರು ದಿನ ತಾಳಿ. ಕೇಂದ್ರ ಸರ್ಕಾರದಿಂದ ನೆರೆ ಪೀಡಿತ ಪ್ರದೇಶದವರಿಗೆ ಪರಿಹಾರ ದೊರೆಯಲಿದೆ. ದೇಶದ ಹಲವೆಡೆ ಪ್ರಕೃತಿ ವಿಕೋಪ ಸಂಭವಿಸಿದೆ. ಕೇಂದ್ರ ಸರ್ಕಾರದಿಂದ ವೀಕ್ಷಣೆಯೂ ಆಗಿದೆ. ಯಾವ ರಾಜ್ಯಕ್ಕೂ ಇನ್ನೂ ಪರಿಹಾರ ಬಿಡುಗಡೆ ಮಾಡಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಸೂಕ್ತ ಪರಿಹಾರ ಕೇಂದ್ರದಿಂದ ದೊರೆಯಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಲಕ್ಷ್ಮೀಗೆ ಕೋಟಿ ಕೋಟಿ ಸಾಲ : ಕಾಂಗ್ರೆಸ್ ಮುಖಂಡ ರಾಜಣ್ಣಗೆ ಸಂಕಷ್ಟ

ಕೇಂದ್ರ ಸರ್ಕಾರ ರಾಜ್ಯದ ಮೇಲೆ ಮಲತಾಯಿ ಧೋರಣೆ ತಾಳಿದೆ ಎನ್ನುವುದು ತಪ್ಪು. ತಾಯಿ ಧೋರಣೆ ತಾಳಿದೆ. ಇನ್ನು ಕೆಲ ದಿನಗಳು ಕಾದು ನೋಡಿ ಕೇಂದ್ರದ ತಾಯಿ ಧೋರಣೆ ಏನೆಂಬುದು ತಿಳಿಯುತ್ತದೆ. ರಾಜ್ಯ ಸರ್ಕಾರವೇನೂ ಸುಮ್ಮನೆ ಕುಳಿತಿಲ್ಲ. ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದೆ. ಉತ್ತಮ ಕಾರ್ಯ ಮಾಡುತ್ತಿದೆ. ಕಳೆದ ವರ್ಷ ಕೊಡಗು ಮುಳುಗಿದ್ದ ವೇಳೆ ಸಮ್ಮಿಶ್ರ ಸರ್ಕಾರ ಏನು ಮಾಡಿದೆ ಎಂಬುದನ್ನು ಒಮ್ಮೆ ಅವಲೋಕನ ಮಾಡಿಕೊಳ್ಳಲಿ ಸಾಕು ಎಂದು ರವಿಕುಮಾರ್‌ ವಿರೋಧ ಪಕ್ಷಗಳಿಗೆ ಚುಚ್ಚಿದರು.