ಸವಣೂರು [ಸೆ.01]:  ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿರುದ್ಧ ಮಾತನಾಡಿದ ಆರೋಪದ ಮೇಲೆ ಹುರಳೀಕುಪ್ಪಿ ಗ್ರಾಮದ ಎಪಿಎಂಸಿ ಸದಸ್ಯ ಪಾಂಡಪ್ಪ ತಿಪ್ಪಕ್ಕನವರ ಅವರನ್ನು ಬಿಜೆಪಿ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಸೋಮವಾರ ಸಾಯಂಕಾಲ ಎಪಿಎಂಸಿ ಕಚೇರಿ ಆವರಣದಲ್ಲಿ ನಡೆದಿದೆ.

ಎಪಿಎಂಸಿ ಸಭಾಭವನದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಸನ್ಮಾನ ಸ್ವೀಕರಿಸಿ ತೆರಳಿದ ನಂತರ ಆರಂಭವಾದ ಸದಸ್ಯರ ವಾಗ್ವಾದ ಮಾರಾಮಾರಿ ಹಂತ ತಲುಪಿತು. ಈ ಸದಸ್ಯನನ್ನು ಥಳಿಸಲಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸ್‌ ಸಿಬ್ಬಂದಿ ರಕ್ಷಣೆ ನೀಡಿ ತಿಪ್ಪಕ್ಕನವರ ಅವರನ್ನು ಹೊರಕ್ಕೆ ಕಳುಹಿಸಿದರು. ಆದರೆ ಥಳಿತಕ್ಕೆ ಒಳಗಾದ ಸದಸ್ಯ ಪಾಂಡಪ್ಪ ಅವರು, ನಾನು ಸಚಿವರ ವಿರುದ್ಧ ಮಾತನಾಡಿಲ್ಲ. ಎಪಿಎಂಸಿಯಲ್ಲಿ ವ್ಯಾಪಾರಸ್ತರು ಮಾಡುತ್ತಿರುವ ಮೋಸ, ವಂಚನೆ ಪ್ರಶ್ನಿಸಿದ್ದಕ್ಕೆ ಹೀಗೆ ಥಳಿಸಿ ದೌರ್ಜನ್ಯ ಎಸಗಿದ್ದಾರೆ. ಅವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಪ್ರತಿಕ್ರೀಯಿಸಿದ್ದಾರೆ.

ಹಲ್ಲೆ ನಡೆಸಿದವರೇ ಸದಸ್ಯ ಪಾಂಡಪ್ಪ ತಿಪ್ಪಕ್ಕನವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲು ತೆರಳಿದರು. ಇದನ್ನು ಅರಿತ ಸದಸ್ಯ ಪಾಂಡಪ್ಪ ತಿಪ್ಪಕ್ಕನವರ ಸಹ ಪ್ರಕರಣ ದಾಖಲಿಸಲು ಪೊಲೀಸ್‌ ಠಾಣೆಯಲ್ಲಿ ಕಾಯ್ದು ಕುಳಿತರು. ರಾತ್ರಿ ವರೆಗೂ ಪ್ರಕರಣ ದಾಖಲಾಗಿರಲಿಲ್ಲ.

ಎಪಿಎಂಸಿ ಸದಸ್ಯರಾದ ನಿಂಗಪ್ಪ ಮರಗಪ್ಪನವರ, ಉಜ್ಜಪ್ಪ ಓಲೇಕಾರ, ಹನುಮಂತಪ್ಪ ನೆಲ್ಲೂರ, ಮೀನಾಕ್ಷಿ ಪಾಟೀಲ, ನಿಂಗನಗೌಡ ಹೊಸಮನಿ, ಪಿ.ಜಿ. ಮಲ್ಲೂರ, ಬಸವಣ್ಣೆಪ್ಪ ಹೂಲಗೂರ, ನಿಂಗಪ್ಪ ಪಾಟೀಲ, ಆನಂದ ಇಮ್ರಾಪುರ, ಚನ್ನಬಸಯ್ಯ ಪ್ರಭಯ್ಯನವರಮಠ, ಧಾರವಾಡ ಕೆಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಸ್‌.ವೈ. ಪಾಟೀಲ, ಎಪಿಎಂಸಿ ವ್ಯಾಪಾರಸ್ಥರಾದ ಸುಭಾಸ ಗಡೆಪ್ಪನವರ, ಬಿ.ಎಂ. ಪಾಟೀಲ, ಗಿರೀಶ ಮಟಿಗಾರ, ಸಿ.ಸಿ. ಅಂಗಡಿ. ಬಿ.ಎಸ್‌. ಅಂಗಡಿ, ಮಲ್ಲಾರಪ್ಪ ತಳ್ಳಹಳ್ಳಿ, ಶಾಂತಪ್ಪ ಹತ್ತಿಮತ್ತೂರ, ವೀರಣ್ಣ ಸಾಲಿಮಠ ಇದ್ದರು.

ಸಚಿವರ ಸನ್ಮಾನ ಸಮಾರಂಭದಲ್ಲಿ ಪಾಂಡಪ್ಪ ಅವರ ಪಕ್ಕದಲ್ಲಿ ಕುಳಿತೇ ಇದ್ದರು. ಅವರು ಸಮಾರಂಭದಿಂದ ತೆರಳಿದ ನಂತರ ಮತ್ತೆ ಅವರ ವಿರುದ್ಧ ಮಾತನಾಡಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಇತರರು ಅವರಿಗೆ ಧರ್ಮದೇಟು ನೀಡಿದ್ದಾರೆ. ಇನ್ನಾದರೂ ಅವರಿಗೆ ಬುದ್ಧಿ ಬರಲಿ. ಈ ಕುರಿತು ಪ್ರಕರಣವನ್ನು ದಾಖಲಿಸಲಾಗುವುದು.

ಮಹೇಶ ಸಾಲಿಮಠ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ

ಎಪಿಎಂಸಿಯಲ್ಲಿ ಅವ್ಯಾಹತವಾಗಿ ವ್ಯಾಪಾರಸ್ಥರು ರೈತರಿಗೆ ದಿನನಿತ್ಯ ಮೋಸ ಮಾಡುತ್ತಿರುವುದನ್ನು ಸಹಿಸದೆ ಇಲ್ಲಿಯೆ ಕಾರ್ಯನಿರ್ವಹಿಸುವ ಹುಡುಗನನ್ನು ವೀಕ್ಷಣೆಗೆಂದು ಕಳುಹಿಸಿದ ಕಾರಣಕ್ಕಾಗಿ ಹಾಗೂ ಬಿಳಿ ಚೀಟಿ ವ್ಯಾಪಾರವನ್ನು ಬಂದ್‌ ಮಾಡಿಸಲು ಮಾತನಾಡಿದ್ದಕ್ಕೆ ಈ ರೀತಿ ಹೊಡೆದಿದ್ದಾರೆ. ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ಮಾತನಾಡಿಲ್ಲ. ಇದು ಸತ್ಯಕ್ಕೆ ದೂರವಾಗಿದೆ.

ಪಾಂಡಪ್ಪ ತಿಪ್ಪಕ್ಕನವರ, ಎಪಿಎಂಸಿ ಸದಸ್ಯ