ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ‘ವಿಪ್ರ ಸ್ತ್ರೀರತ್ನ’ ಪ್ರಶಸ್ತಿ ಪ್ರದಾನ ಮಾಡಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಮಾತನಾಡಿದರು.
ಬೆಂಗಳೂರು (ಮಾ. 14): ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಶಿಕ್ಷಣದಲ್ಲಿ ಮೀಸಲಾತಿ ನೀಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಒತ್ತಾಯಿಸಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ಘಟಕದಿಂದ ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಮುದಾಯದ ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ‘ವಿಪ್ರ ಸ್ತ್ರೀರತ್ನ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
"ಬ್ರಾಹ್ಮಣರಲ್ಲೂ ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವ ಬಹಳಷ್ಟುಜನರಿದ್ದಾರೆ. ಎಷ್ಟೋ ಕುಟುಂಬದ ಮಕ್ಕಳು ಉನ್ನತ ಶಿಕ್ಷಣಕ್ಕೆ ಪಡೆಯಲಾರದೇ ಸಂಕಷ್ಟಕ್ಕೆ ಸಿಲುಕಿರುವುದು ಕಾಣುತ್ತವೆ. ಇಂತಹವರಿಗೆ ಮೀಸಲಾತಿ ನೀಡಿದರೆ ಉನ್ನತ ಶಿಕ್ಷಣದ ಕನಸು ಈಡೇರಲು ಸಾಧ್ಯವಾಗುತ್ತದೆ. ಈ ಸಂಬಂಧ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು" ಇದೇ ವೇಳೆ ಮಹಾಸಭಾ ನಿರ್ಮಿಸಲು ಉದ್ದೇಶಿರುವ ಸಮುದಾಯ ಭವನಕ್ಕೆ ರಾಜ್ಯ ಸರ್ಕಾರದಿಂದ ಐದು ಕೋಟಿ ರು. ನೆರವು ನೀಡುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ವಿಪ್ರ ಸಾಧಕಿಯರಾದ ಕವಿತಾಳ ಮಿಶ್ರ, ಅರ್ಚನಾ ಉಡುಪ, ಮಾಲತಿ ಹೊಳ್ಳ, ಗಂಗಮ್ಮ ಕೇಶವಮೂರ್ತಿ, ಕೆ.ಆರ್.ಜಯಶ್ರೀ, ಕೆ.ಎಸ್.ಶಾರದಾಮಣಿ, ವಿ.ಶುಭಾ, ಶೈಲಾ ವಿಠಲ್, ಪ್ರಿಯಾ ಪುರಾಣಿಕ್, ಅರ್ಚನಾ ಜೋಶಿ, ವಿದ್ಯಾ ರವಿಶಂಕರ್, ವೀಣಾ ಅಠಾವಳೆ ಅವರಿಗೆ ‘ವಿಪ್ರ ಸ್ತ್ರೀರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ಹಿಂದೂ ಧರ್ಮ ಉಳಿವಿಗೆ ಬ್ರಾಹ್ಮಣರ ಕೊಡುಗೆ ಅಪಾರ: ಸಚಿವ ಸುಧಾಕರ್
ಶಾಸಕ ರವಿ ಸುಬ್ರಹ್ಮಣ್ಯ, ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ಮೇದಿನಿ ಗರುಡಾಚಾರ್, ಮಹಿಳಾ ಘಟಕದ ಸಂಚಾಲಕಿ ರೂಪಾಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ಘಟಕದಿಂದ ನಡೆದ ಕಾರ್ಯಕ್ರಮದಲ್ಲಿ ವಿಪ್ರ ಸಾಧಕಿಯರಿಗೆ ‘ವಿಪ್ರ ಸ್ತ್ರೀರತ್ನ’ ಪ್ರಶಸ್ತಿ ನೀಡಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಗೌರವಿಸಿದರು.
ಮಹಿಳಾ ದಿನಾಚರಣೆ ನಿಮಿತ್ತ ಮಧ್ಯರಾತ್ರಿ ಬೈಕ್ ಜಾಥಾ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ರೇನ್‌ಬೋ ಮಕ್ಕಳ ಆಸ್ಪತ್ರೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳೆಯರ ಮಧ್ಯರಾತ್ರಿ ಬೈಕ್ ಜಾಥಾಕ್ಕೆ ನಟಿ ಮೇಘನಾ ರಾಜ್ ಚಾಲನೆ ನೀಡಿದರು.
ಲಿಂಗ ಸಮಾನತೆ ಮತ್ತು ಮಹಿಳಾ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶ ನಡೆದ ಜಾಥಾದಲ್ಲಿ 100ಕ್ಕೂ ಹೆಚ್ಚು ಮಹಿಳಾ ಬೈಕರ್‌ಗಳು ಭಾಗವಹಿಸಿದ್ದರು. ಮಾರತಹಳ್ಳಿಯ ರೈನ್‌ಬೋ ಮಕ್ಕಳ ಆಸ್ಪತ್ರೆಯಿಂದ ಆರಂಭವಾದ ಜಾಥಾ ಬನ್ನೇರುಘಟ್ಟರಸ್ತೆಯ ಮೂಲಕ ಹೆಬ್ಬಾಳದಲ್ಲಿರುವ ರೇನ್‌ಬೋ ಮಕ್ಕಳ ಆಸ್ಪತ್ರೆ ಘಟಕವನ್ನು ತಲುಪಿತು.
ಜಾಥಾಕ್ಕೆ ಚಾಲನೆ ಕೊಟ್ಟು ಮಾತನಾಡಿದ ಮೇಘನಾ, ಸಮಾಜದಲ್ಲಿ ಮಹಿಳೆಗೆ ಸಮಾನತೆ ಅತ್ಯಂತ ಮುಖ್ಯವಾಗಿದೆ. ಎಲ್ಲಾ ಕ್ಷೇತ್ರದಲ್ಲಿಯೂ ನಾವು ಸಮಾನತೆ ಬಯಸುತ್ತೇವೆ. ಈ ಮಧ್ಯರಾತ್ರಿ ಬೈಕ್ ಸವಾರಿಯು ಸಮಾನತೆಯ ಸಾಂಕೇತಿಕ ಅಭಿಯಾನವಾಗಿದೆ ಎಂದರು.
ಇದನ್ನೂ ಓದಿ:Nari shakti Puraskar ಕರ್ನಾಟಕದ ಇಬ್ಬರು ಮಹಿಳಾ ಸಾಧಕರಿಗೆ ನಾರಿ ಶಕ್ತಿ ಪ್ರಶಸ್ತಿ!
ಸಮಾರೋಪದಲ್ಲಿ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ ರೂಪಾ ಮೌದ್ಗಿಲ್, ನಮ್ಮ ದೇಶದಲ್ಲಿ ಮಹಿಳೆಯರು ಸಂಜೆ, ರಾತ್ರಿ ಪುರುಷ ಸದಸ್ಯರಿಲ್ಲದೆ ಮನೆಯಿಂದ ಹೊರಬರಲು ಅನುಮತಿಸದ ಅನೇಕ ಮನೆಗಳಿವೆ. ಪುರುಷರಿಗೆ ಎಲ್ಲಾ ಸ್ವಾತಂತ್ರ್ಯವಿರುವಾಗ, ಮಹಿಳೆಯರಿಗೆ ಏಕೆ ನಿರ್ಬಂಧಗಳು ಇರಬೇಕು ಎಂದು ಪ್ರಶ್ನಿಸಿದರು. ಆಸ್ಪತ್ರೆ ಅಧ್ಯಕ್ಷ ಡಾ.ರಮೇಶ್ ಕಂಚಾರ್ಲ ಮಾತನಾಡಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಡಾ. ವಿಷ್ಣು ಸೇನಾ ಸಮಿತಿಯಿಂದ ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಾಮಾಜಿಕ ಹಕ್ಕುಗಳ ಹೋರಾಟಗಾರ್ತಿ ಡಾ. ಅಕ್ಕಯ್ ಪದ್ಮಶಾಲಿ, ಕಾಂಗ್ರೆಸ್ ನಾಯಕಿ ಎಚ್.ಕುಸುಮಾ, ವಿಷ್ಣು ಸೇನಾ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ರಾಧಾ ಗಂಗಾಧರ್ ಪಾಲ್ಗೊಂಡಿದ್ದರು.
