Kolar: ಕಲ್ಲುಕುಟುಗರಿಗೆ ಕೆಲಸ ಮಾಡಲು ಪರವಾನಗಿ ನೀಡಿ: ಸಂಸದ ಮುನಿಸ್ವಾಮಿ ಆಗ್ರಹ

ಜಿಲ್ಲೆಯಲ್ಲಿ ಏಳು ಸಾವಿರ ಬಡ ಕಲ್ಲು ಕುಟುಕರಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಲ್ಲು ಹೊಡೆಯದಂತೆ ಅವರನ್ನು ತಡೆಯಲಾಗಿದೆ. ಸರ್ಕಾರಕ್ಕೆ ಗೌರವಧನ ಪಾವತಿಸಿಕೊಂಡು ವೃತ್ತಿ ಮಾಡಲು ಪರವಾನಗಿ ನೀಡಿ ಎಂದು ಸಂಸದ ಎಸ್‌.ಮುನಿಸ್ವಾಮಿ ಗಣಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

Give License to Stonemasons to Work Says MP S Muniswamy At Kolar gvd

ಕೋಲಾರ (ಜು.01): ಜಿಲ್ಲೆಯಲ್ಲಿ ಏಳು ಸಾವಿರ ಬಡ ಕಲ್ಲು ಕುಟುಕರಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಲ್ಲು ಹೊಡೆಯದಂತೆ ಅವರನ್ನು ತಡೆಯಲಾಗಿದೆ. ಸರ್ಕಾರಕ್ಕೆ ಗೌರವಧನ ಪಾವತಿಸಿಕೊಂಡು ವೃತ್ತಿ ಮಾಡಲು ಪರವಾನಗಿ ನೀಡಿ ಎಂದು ಸಂಸದ ಎಸ್‌.ಮುನಿಸ್ವಾಮಿ ಗಣಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಗರದ ಜಿ.ಪಂನಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾರೋ ರಾಜಕಾರಣಿ ಹೇಳಿದರೆಂದು ಬಡವರ ಹೊಟ್ಟೆಮೇಲೆ ಹೊಡೆದಿರುವುದು ಸರಿಯೇ? 

ಕಲ್ಲು ಒಡೆಯುವ ಸುತ್ತಿಗೆ, ಉಳಿ ಕಿತ್ತುಕೊಂಡು ಬಂದರೆ ಕೆಲಸ ಮಾಡುವುದು ಹೇಗೆ? ಸಾವಿರಾರು ರೂಪಾಯಿ ದಂಡ ವಿಧಿಸಿದರೆ ಪಾವತಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಜೆಸಿಬಿ, ಕ್ರಷರ್‌ ಇಟ್ಟುಕೊಂಡು ಅಕ್ರಮವಾಗಿ ಕಲ್ಲು ಒಡೆಯುವ ಶ್ರೀಮಂತರು, ರಾಜಕಾರಣಿಗಳು ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ? ಈ ರೀತಿ ದ್ವೇಷದ ರಾಜಕಾರಣವನ್ನು ಕಡು ಬಡವರ ಮೇಲೆ ತೋರುವುದು ಮಾನವೀಯತೆಯಲ್ಲ ಎಂದು ಕಿಡಿ ಕಾರಿದರು. ಗಣಿ ಅಧಿಕಾರಿ ಷಣ್ಮುಗಂ ಮಾತನಾಡಿ, 7 ಗ್ರಾಮಗಳಲ್ಲಿ 243 ಎಕರೆಯನ್ನು ಗುರುತಿಸಿ, 103 ಬ್ಲಾಕ್‌ಗಳಾಗಿ ವಿಂಗಡಿಸಿ ಹಂಚಿಕೆ ಮಾಡಲಾಗುವುದು. 1,012 ಅರ್ಜಿಗಳು ಬಂದಿದೆ. 

ಕಾಂಗ್ರೆಸ್‌ ಗ್ಯಾರಂಟಿಗೆ ಪ್ರಧಾನಿ ಮೋದಿ ಹೊಣೆಯಲ್ಲ: ಸಂಸದ ಮುನಿಸ್ವಾಮಿ

ತಾಂತ್ರಿಕ ಕಾರಣಕ್ಕೆ ತಡೆಹಿಡಿಯಲಾಗಿದೆ. ಅರ್ಹರನ್ನು ಗುರುತಿಸಿ ಹಂಚಿಕೆ ಮಾಡಲಾಗುವುದು ಎಂದರು.  ಇದಕ್ಕೆ ಧ್ವನಿಗೂಡಿಸಿದ ವಿಧಾನ ಪರಿಷತ್‌ ಇಂಚರ ಗೋವಿಂದರಾಜು, ಬಡವರಿಗೆ ಇದೇ ರೀತಿ ತೊಂದರೆ ಮುಂದುವರಿಸಿದರೆ ನಾವೇ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ, ಶ್ರೀಮಂತರ ಬಳಿ ಹೋಗಿ ಏನಾದರೂ ಮಾಡಿಕೊಳ್ಳಿ. ಬಡವರಿಗೆ ತೊಂದರೆಯಾಗಬಾರದು ಎಂದು ಹೇಳಿದರು.  ನರೇಗಾ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಕೆರೆಗಳ ಅಭಿವೃದ್ಧಿಗೆ ಮಣ್ಣು ಹೂಳು ಎತ್ತಲು ಬಿಲ್‌ ಮಾಡುತ್ತಿರಿ. 

ಆದರೆ, ಕೆಲವರು ಕಟ್ಟಡ ನಿರ್ಮಾಣಕ್ಕೆ ಕೆರೆಯಲ್ಲಿ ಮಣ್ಣು ಎತ್ತಿಕೊಂಡರೆ ಅವರ ವಿರುದ್ದ ಪ್ರಕರಣ ದಾಖಲಿಸುತತಿದ್ದೀರಿ, ಈ ರೀತಿ ಮಾಡುವುದು ಸಮಂಜಸವಲ್ಲ ಎಂದು ನುಡಿದರು. ನರೇಗಾ ಯೋಜನೆ ಜಾರಿ ಸಂಬಂಧ ಮಾತನಾಡಿದ ಮುನಿಸ್ವಾಮಿ, ಯಾವುದೇ ಕಾರಣಕ್ಕೂ ಕೇಂದ್ರ ಪುರಸ್ಕತ್ರೃತ ಯೋಜನೆ ತಡೆಯಬಾರದು. ಸ್ಥಗಿತಗೊಳಿಸಿರುವ ಹಾಗೂ ಪುನಾರಂಭಿಸಿರುವ ಯೋಜನೆಯ ಮಾಹಿತಿ ಹಾಗೂ ದಾಖಲೆ ಪತ್ರ ಕೊಡಿ, ಕೇಂದ್ರದ ಯೋಜನೆಗೆ ತೊಂದರೆ ಉಂಟು ಮಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೇಂದ್ರ ಸರ್ಕಾರದಿಂದ ಪ್ರತಿ ಗ್ರಾಪಂಗಳಿಗೆ ಶೇ.80 ಅನುದಾನ: ಸಂಸದ ಮುನಿಸ್ವಾಮಿ

ಹಿಂದುಳಿದ ವರ್ಗಗಳ ಇಲಾಖೆಗೆ ಸೂಚನೆ: ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಕೈತೋಟ ಮಾಡಿ ತರಕಾರಿ ಬೆಳೆಯಲು ಮುನಿಸ್ವಾಮಿ ಹಾಗೂ ಗೋವಿಂದರಾಜು ಸಲಹೆ ನೀಡಿದರು. ನೀರು ಇಲ್ಲದಿದ್ದರೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು. ಸ್ತ್ರೀಶಕ್ತಿ ಸಂಘಗಳ ಸಾಲಮನ್ನಾ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಈ ಬಗ್ಗೆ ಮಾಹಿತಿ ಪಡೆಯಬೇಕಿದ್ದು, ಸಭೆಗೆ ಡಿಸಿಸಿ ಬ್ಯಾಂಕ್‌ ಅಧಿಕಾರಿಗಳೇ ಬಂದಿಲ್ಲ ಎಂದು ಮುನಿಸ್ವಾಮಿ ತರಾಟೆಗೆ ತೆಗೆದುಕೊಂಡರು. ಸದಸ್ಯರಾದ ಅಪ್ಪಿ ನಾರಾಯಣಸ್ವಾಮಿ, ಸೂರ್ಯನಾರಾಯಣ ರಾವ್‌, ಸಾ.ಮಾ.ಬಾಬು, ದಾಕ್ಷಾಯಿಣಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಭಾಸ್ಕರ್‌ ಇದ್ದರು.

Latest Videos
Follow Us:
Download App:
  • android
  • ios