ಕಾಂಗ್ರೆಸ್ ಗ್ಯಾರಂಟಿಗೆ ಪ್ರಧಾನಿ ಮೋದಿ ಹೊಣೆಯಲ್ಲ: ಸಂಸದ ಮುನಿಸ್ವಾಮಿ
ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ಧ ಗ್ಯಾರಂಟಿಗಳನ್ನು ಈಡೇರಿಸಲು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸುವುದು ಯಾವ ನ್ಯಾಯ ಎಂದು ಸಂಸದ ಎಸ್.ಮುನಿಸ್ವಾಮಿ ಪ್ರಶ್ನಿಸಿದರು.
ಕೋಲಾರ (ಜೂ.30): ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ಧ ಗ್ಯಾರಂಟಿಗಳನ್ನು ಈಡೇರಿಸಲು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸುವುದು ಯಾವ ನ್ಯಾಯ ಎಂದು ಸಂಸದ ಎಸ್.ಮುನಿಸ್ವಾಮಿ ಪ್ರಶ್ನಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸುರ್ಜೇವಾಲಾ ಅವರ ಮಾತು ಕೇಳಿ ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ. ಆದರೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಬಿಟ್ಟಿಭಾಗ್ಯಗಳನ್ನು ಮುಂದಿಟ್ಟುಕೊಂಡು ಪ್ರಧಾನಿಯ ವಿರುದ್ಧ ಆರೋಪ ಮಾಡುತ್ತ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.
5 ಕೆಜಿ ಅಲ್ಲ 15 ಕೆಜಿ ಅಕ್ಕಿ ಗ್ಯಾರಂಟಿ: ಈಗಿರುವ 5 ಕೆಜಿ ಅಕ್ಕಿಗೆ 10 ಕೆಜಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿ ಕೊಡುತ್ತೇನೆಂದು ಹೇಳಿ ಈಗ 5 ಕೆಜಿ ಅಕ್ಕಿ ಹಾಗೂ ಇನ್ನೈದು ಕೆಜಿ ಅಕ್ಕಿ ಬದಲು 170 ರುಪಾಯಿಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತೇವೆಂದು ಹೇಳುತ್ತಿದ್ದಾರೆ. ಉಳಿದ 5 ಕೆಜಿ ಅಕ್ಕಿಯ ಹಣ ವನ್ನೂ ಸೇರಿಸಿ ಒಟ್ಟು 340 ರುಪಾಯಿಗಳನ್ನು ಪ್ರತಿ ಫಲಾನುಭವಿಯ ಖಾತೆಗೆ ಹಾಕಬೇಕು. ಅಲ್ಲಿಯ ತನಕ ನಾವು ಬಿಡುವುದಿಲ್ಲ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು. ತಮಿಳುನಾಡು, ಆಂದ್ರ ಸೇರಿದಂತೆ ಕೆಲ ಸರ್ಕಾರಗಳು ಉಚಿತ ಭಾಗ್ಯಗಳನ್ನು ಕೊಟ್ಟು ಅಲ್ಲಿನ ಸರ್ಕಾರಗಳು ಅಧೋಗತಿಗೆ ಹೋಗಿವೆ. ನಿಮ್ಮ ಶಕ್ತಿ ಎಷ್ಟಿತ್ತೋ ಅಷ್ಟಕ್ಕೆ ಕಾಲು ಚಾಚಬೇಕಿತ್ತು, ಈ ಸರ್ಕಾರಕ್ಕೆ ಪೂರ್ಣ ಆಯಸ್ಸು ಇಲ್ಲ ಎಂದು ಭವಿಷ್ಯ ನುಡಿದರು.
ಗ್ಯಾರಂಟಿ ಯೋಜನೆ ಜನರಿಗೆ ಕೊಡದಂತೆ ಮಾಡುವುದು ಕೇಂದ್ರದ ಉದ್ದೇಶ: ಸಚಿವ ಚಲುವರಾಯಸ್ವಾಮಿ
ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್: ಕಾಂಗ್ರೇಸ್ ಸರ್ಕಾರ ಇದ್ದಾಗ ವಾಚ್ ಕೊಟ್ಟದ್ದು, ವಿಧಾನ ಸೌಧದಲ್ಲಿ ಹಣ ಸಿಕ್ಕಿದ್ದು, ಅರ್ಕಾವತಿ ಹಗರಣ ಎಲ್ಲವನ್ನೂ ತನಿಖೆ ಮಾಡಲಿ. ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್. ಶೇ.60 ಕಮಿಷನ್ ಕಾಂಗ್ರೆಸ್ ಆಗಿದೆ ಎಂದು ಕಂಟ್ರಾಕ್ಟರ್‌ಗಳೇ ಹೇಳುತ್ತಿದ್ದಾರೆ. ಕೋಲಾರದಲ್ಲಿ ನಿಷ್ಠಾವಂತ ಡೀಸಿ, ಸಿಇಒ ಕೆಲಸ ಮಾಡುತ್ತಿದ್ದರು. ಅವರೆಲ್ಲರನ್ನ ವರ್ಗಾವಣೆ ಮಾಡಿದ್ದಾರೆ, ಒಂದೊಂದು ಸ್ಥಾನಕ್ಕೆ ನಾಲ್ಕು ಜನರ ಹೆಸರನ್ನು ಪ್ರಸ್ತಾಪಿಸುತ್ತಿದ್ದಾರೆ. ಈ ಮೂಲಕ ಪೋಸ್ಟಿಂಗ್‌ಗೆ ಡಿಮ್ಯಾಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಪ್ರತಿಯೊಂದು ಇಲಾಖೆಯಲ್ಲೂ ವರ್ಗಾವಣೆ ಮಾಡಿ ಅವರಿಂದ ದುಡ್ಡು ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ದೇಶಕ್ಕೆಲ್ಲ ಒಂದೇ ಕಾನೂನು ಇರಬೇಕು ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಇಸ್ಲಾಮಿಕ್ ಸಂಘಟನೆ ಹಾಗೂ ಕಾಂಗ್ರೆಸ್ ಕೇಳಿಕೊಂಡು ಕಾನೂನು ತರುವ ಸ್ಥಿತಿಯಲ್ಲಿ ನಾವಿಲ್ಲ. ದೇಶಕ್ಕೆ ಒಳ್ಳೆಯದಾಗುವ ನಿಟ್ಟಿನಲ್ಲಿ ಅವರವರ ಪ್ರತಿಕ್ರಿಯೆ ತಿಳಿಸಿ ಎಂದು ಮೋದಿ ಹೇಳಿದ್ದಾರೆ. ಅವರವರ ಅನಿಸಿಕೆಗಳನ್ನ ತಿಳಿಸುವುದಕ್ಕೆ ಹೇಳಿದ್ದಾರೆ, ಮುಂದಿನ ದಿನಗಳಲ್ಲಿ ಜನರ ಸಲಹೆಗಳನ್ನು ನೋಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರ ಕಾಂಗ್ರೆಸ್ ಪಕ್ಷ, ಇಸ್ಲಾಮಿಕ್ ಸಂಘಟನೆಗಳನ್ನ ಕೇಳುವಂತಹ ಪರಿಸ್ಥಿತಿ ನಮಗೆ ಇಲ್ಲ ಎಂದರು.
ಕೇಂದ್ರ ಸರ್ಕಾರದಿಂದ ಪ್ರತಿ ಗ್ರಾಪಂಗಳಿಗೆ ಶೇ.80 ಅನುದಾನ: ಸಂಸದ ಮುನಿಸ್ವಾಮಿ
ಕೋಲಾರ ಮಿನಿ ಪಾಕ್ ಮಾಡಲಿದ್ದಾರೆ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾದ ನಸೀರ್ ಅಹ್ಮದ್ ಕೋಲಾರವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟ್ಟಿದ್ದಾರೆ. ಬಿಜೆಪಿ ಪಕ್ಷದಲ್ಲಿರುವ ಕೆಲವರು ದೇಶ ಮತ್ತು ಪಕ್ಷ ಎಂದು ಬೊಬ್ಬೆ ಹೊಡೆದುಕೊಳ್ಳುತ್ತಾರೆ. ಚುನಾವಣೆ ಬಂದಾಗ ಬೇರೆ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆಂದು ಅಸಮಾಧಾನ ಹೊರಹಾಕಿದ ಸಂಸದರು ಕಾರ್ಯಕರ್ತರು ಗಟ್ಟಿಯಾಗಿ ದೇಶವನ್ನು ಬಲಿಷ್ಠಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟವಾಗುತ್ತದೆ, ದೇಶದ ವಿರುದ್ಧವಾಗಿ ನಿಲ್ಲುವವರಿಗೆ ಕ್ಷಮೆಯಿಲ್ಲದ್ದಾಗಿದೆ ಎಂದು ಗುಡುಗಿದರು.