ಬೆಂಗಳೂರು [ಸೆ.24]:  ಸ್ನೇಹಿತ ತನ್ನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರಿಂದ ನೊಂದ ಯುವತಿ ಹಾಸ್ಟೆಲ್ ನಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಗಾಯತ್ರಿ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಗಾಯತ್ರಿ ಅವರು ತಮಿಳುನಾಡಿನ ತಂಜಾವೂರಿನವರಾಗಿದ್ದು, ಜಯನಗರದ ಖಾಸಗಿ ಕಾಲೇಜಿನಲ್ಲಿ ಎಂಎಸಿಎ ವ್ಯಾಸಂಗ ಮಾಡುತ್ತಿದ್ದರು. ಪಿಯುಸಿ ವ್ಯಾಸಂಗ ಮಾಡುವಾಗಿನಿಂದಲೂ ಸ್ನೇಹಿತನವಾಗಿದ್ದ ಸುದರ್ಶನ್ ಎಂಬುವರನ್ನು ಇಷ್ಟಪಡುತ್ತಿದ್ದರು.

ಸುದರ್ಶನ್ ಹಾಗೂ ಗಾಯತ್ರಿ ಒಂದೇ ಊರಿನವರಾಗಿದ್ದ ಕಾರಣ ಇಬ್ಬರು ಆತ್ಮೀಯರಾಗಿದ್ದರು. ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೂ ಇಬ್ಬರೂ ಒಟ್ಟಿಗೆ ಸುತ್ತಾಡಿದ್ದರು. ಸಂಜೆ ಸುದರ್ಶನ್ ವಾಪಸ್ಸಾದ ಬಳಿಕ ಮತ್ತೆ ಆತನನ್ನು ಹೊರಗೆ ಹೋಗಲು ಕರೆದಿದ್ದರು. ಹೊರಗೆ ಬರಲು ನಿರಾಕರಿಸಿದ್ದ ಸುದರ್ಶನ್ ಬೇರೆ ಕೆಲಸ ಇದೆ ಎಂದು ಹೇಳಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಷ್ಟಕ್ಕೆ ಕೋಪಗೊಂಡ ಯುವತಿ ತನ್ನ ಜತೆ ಬಾರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಾಟ್ಸಪ್ ಸಂದೇಶ ಕಳುಹಿಸಿದ್ದರು. ಸ್ನೇಹಿತೆಯ ಸಂದೇಶದಿಂದ ಬೇಸರಗೊಂಡು ಆಕೆಯ ನಂಬರ್ ಅನ್ನು ಸುದರ್ಶನ್ ಬ್ಲಾಕ್ ಮಾಡಿದ್ದರು. ಇದರಿಂದ ಮನನೊಂದ ಯುವತಿ ಹಾಸ್ಟೆಲ್‌ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ.