ಮೈಸೂರು ಜಿಲ್ಲೆಯ ಈ ಗ್ರಾಮ ದೇಶಕ್ಕೆ ಮಾದರಿಯಾಗಿದೆ. ಇಲ್ಲಿನ ಪ್ರತಿ ಮನೆಯೂ ವರ್ಷಕ್ಕೆ ಸುಮಾರು 50,000 ದಿಂದ 60,000 ಲೀಟರ್‌ಗಳಷ್ಟು ನೀರನ್ನು ಸಂಗ್ರಹಿಸುತ್ತದೆ. ಮಕ್ಕಳಿಗೆ ಜಲಸಂರಕ್ಷಣೆಯ ಪಾಠ ಕಲಿಸಲು ಇದೊಂದು ಉತ್ತಮ ಪ್ರವಾಸಿ ತಾಣವಾಗಿದೆ.

ಮೈಸೂರು: ಜೀವನಕ್ಕೆ ನೀರು ಸಂಗ್ರಹ ಮುಖ್ಯವಾಗುತ್ತದೆ. ಕಾಲ ಕಾಲಕ್ಕೆ ತಕ್ಕಂತೆ ನೀರು ಸಂಗ್ರಹಣೆ ವಿಧಾನಗಳು ಬದಲಾಗುತ್ತಾ ಬಂದಿವೆ. ಈ ಹಿಂದೆ ಕೆರೆ, ಕುಂಟೆ, ಬಾವಿಗಳ ಮೂಲಕ ಸಂಗ್ರಹ ಮಾಡಲಾಗುತ್ತಿತ್ತು. ಕಾಲ ಬದಲಾದಂತೆ ಸರ್ಕಾರಗಳು ಆಣೆಕಟ್ಟೆಗಳನ್ನು ನಿರ್ಮಿಸಿ ನೀರು ಸಂಗ್ರಹಿಸಲಾಗುತ್ತದೆ. ಜಲಾಶಯದ ನೀರನ್ನು ಕಾಲುವೆ ಮೂಲಕ ಹರಿಸುವ ಮೂಲಕ ಕೃಷಿ ಚಟುವಟಿಕೆಗೂ ಬಳಕೆ ಮಾಡಲಾಗುತ್ತದೆ. ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಆತಂಕ ಎದುರಾಗಿದೆ. ಆದ್ರೆ ಮೈಸೂರು ಜಿಲ್ಲೆಯ ಪುಟ್ಟ ಗ್ರಾಮಕ್ಕೆ ವರ್ಷಕ್ಕೆ ಅಂದಾಜು 50 ಸಾವಿರ ಲೀಟರ್‌ನಷ್ಟು ಕುಡಿಯಲು ಯೋಗ್ಯವಾದ ನೀರು ಸಂಗ್ರಹಣೆ ಮಾಡುತ್ತದೆ.

ಈ ಬಾರಿ ವೀಕೆಂಡ್‌ಗೆ ಮಕ್ಕಳೊಂದಿಗೆ ಒನ್ ಡೇ ಟ್ರಿಪ್ ಪ್ಲಾನ್ ಮಾಡುತ್ತಿದ್ರೆ, ಮೈಸೂರು ಜಿಲ್ಲೆಯ ಈ ಗ್ರಾಮಕ್ಕೆ ಹೋಗಿ ಬನ್ನಿ. ನಿಮ್ಮ ಮಕ್ಕಳಿಗೆ ನೀರು ಸಂಗ್ರಹಣೆ ಹೇಗೆ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಂತೆ ಆಗುತ್ತದೆ. ಇದು ಮಕ್ಕಳಿಗೆ ಒಂದು ಪಾಠವಾಗಲಿದೆ. ಹಾಗಾದ್ರೆ ಯಾವುದು ಈ ಜಲಸಂಪನ್ಮೂಲಭರಿಯತ ಗ್ರಾಮ ಎಂದು ನೋಡೋಣ ಬನ್ನಿ.

ಯಾವುದು ಈ ಗ್ರಾಮ? ಜಲಮೂಲ ಏನು?

ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನಲ್ಲಿರುವ ಗೆಂಡತ್ತೂರು (Gendathur) ಗ್ರಾಮ ಸಂಪೂರ್ಣವಾಗಿ ಮಳೆನೀರು ಕೊಯ್ಲು (Rainwater Harvesting) ಪದ್ಧತಿಯನ್ನು ಅತ್ಯಂತ ಯಶಸ್ವಿಯಾಗಿ ಅಳವಡಿಸಿಕೊಂಡಿಕೊಂಡಿದೆ. ಈ ಮೂಲಕ ಇಡೀ ದೇಶಕ್ಕೆ ಗೆಂಡತ್ತೂರು ಗ್ರಾಮ ಮಾದರಿಯಾಗಿದೆ. ಮೈಸೂರು ಜಿಲ್ಲಾ ಪಂಚಾಯತ್, 'ಮೈರಾಡಾ' (MYRADA) ಸ್ವಯಂಸೇವಾ ಸಂಸ್ಥೆ ಮತ್ತು ಪರಿಸರವಾದಿ ಯು.ಎನ್. ರವಿಕುಮಾರ್ ತಾಂತ್ರಿಕ ಮಾರ್ಗದರ್ಶನದಲ್ಲಿ ಈ ಯೋಜನೆ ಆರಂಭವಾಯಿತು

2003ರಲ್ಲಿ ಗ್ರಾಮದ 20 ಮನೆಗಳಿಂದ ಮಳೆನೀರು ಕೊಯ್ಲು ಯೋಜನೆ ಪ್ರಾಯೋಗಿಕವಾಗಿ ಆರಂಭವಾಯ್ತು. ನಂತರ ಹಂತ ಹಂತವಾಗಿ 2005ರಲ್ಲಿ ಗ್ರಾಮದ 137 ಮನೆಗಳಿಗೆ ಈ ಯೋಜನೆ ವಿಸ್ತರಣೆಯಾಯ್ತು. ಇಂದು ಗ್ರಾಮದ ಎಲ್ಲಾ ಮನೆಗಳು ಮನೆನೀರು ಕೊಯ್ಲು ವಿಧಾನವನ್ನು ಅಳವಡಿಸಿಕೊಂಡಿವೆ. ಛಾವಣಿ ಮೇಲೆ ಬೀಳುವ ಮಳೆನೀರನ್ನು ವೈಜ್ಞಾನಿಕವಾಗಿ ಟ್ಯಾಂಕ್‌ಗೆ ಹರಿಸಲಾಗುತ್ತದೆ.

ಸುಮಾರು 50,000 ದಿಂದ 60,000 ಲೀಟರ್‌ ನೀರು ಸಂಗ್ರಹ

ಗೆಂಡತ್ತೂರು ಗ್ರಾಮದಲ್ಲಿ ವಾರ್ಷಿಕವಾಗಿ ಅಂದಾಜು 1,000 ಮಿ.ಮೀ ಮಳೆಯಾಗುತ್ತದೆ. ಶೇಕಡಾ 80 ರಷ್ಟು ಸಂಗ್ರಹಣಾ ದಕ್ಷತೆಯೊಂದಿಗೆ (Collection Efficiency), ಪ್ರತಿ ಮನೆಯೂ ವರ್ಷಕ್ಕೆ ಸುಮಾರು 50,000 ದಿಂದ 60,000 ಲೀಟರ್‌ಗಳಷ್ಟು ನೀರನ್ನು ಸಂಗ್ರಹಿಸುತ್ತದೆ. ಈ ಮೂಲಕ ಕುಡಿಯವ ನೀರು ಸಂಗ್ರಹವಾಗುತ್ತದೆ. ಈ ಕಾರಣದಿಂದ ಗೆಂಡತ್ತೂರು ದೇಶದ ಗಮನ ಸೆಳೆಯುತ್ತದೆ.

ಗೆಂಡತ್ತೂರು ಗ್ರಾಮಕ್ಕೆ ಹೋಗೋದು ಹೇಗೆ?

ಬೆಂಗಳೂರಿನಿಂದ 224 ಕಿ.ಮೀ. ದೂರದಲ್ಲಿ Gendathur ಗ್ರಾಮವಿದ್ದು, ಬಿಡದಿ, ರಾಮನಗರ, ಮದ್ದೂರು, ಮೈಸೂರು, ಮಹದೇವನಗರ, ಬಿದರಹಳ್ಳಿ, ನಂಜನಾಥಪುರ, ಹೊಸಹಳ್ಳಿ ಮಾರ್ಗವಾಗಿ ತಲುಪಬಹುದು.