ಮಂತ್ರಾಲಯದ ರಾಯರ ಮಠದ ಬಳಿ ಬಿಹಾರ ಮೂಲದ ಕಾರ್ಮಿಕರು ವಾಸವಿದ್ದ ಶೆಡ್‌ಗಳಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅವಘಡ ಸಂಭವಿಸಿದೆ. ಕಾರ್ಮಿಕರು ಕೆಲಸಕ್ಕೆ ತೆರಳಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ, ಆದರೆ ಶೆಡ್‌ಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ರಾಯಚೂರು (ಮೇ.14): ಮಂತ್ರಾಲಯದ ರಾಯರ ಮಠದಲ್ಲಿ ನಡೆಯುತ್ತಿರುವ ಕಟ್ಟಡ ಕೆಲಸದಲ್ಲಿ ಟೈಲ್ಸ್ ಹಾಕುವುದಕ್ಕಾಗಿ ಬಿಹಾರದಿಂದ ಆಗಮಿಸಿರುವ 25ಕ್ಕೂ ಹೆಚ್ಚು ಕಾರ್ಮಿಕರು ಉಳಿದುಕೊಂಡಿದ್ದ ತಗಡಿನ ಶೆಡ್‌ಗಳಲ್ಲಿ ಬುಧವಾರ ಮಧ್ಯಾಹ್ನ ಏಕಾಏಕಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು, ಶೆಡ್‌ಗಳು ಸುಟ್ಟು ಕರಕಲಾಗಿವೆ.

ಈ ವೇಳೆ, ಕಾರ್ಮಿಕರೆಲ್ಲರೂ ಕೆಲಸಕ್ಕೆ ಹೋಗಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಫೋಟದ ಸದ್ದು ಕೇಳಿ ಭಕ್ತರು ಭಯಭೀತರಾಗಿ ಓಡಿಹೋದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ರಾಯರ ಮಠದಲ್ಲಿ ನಡೆಯುತ್ತಿರುವ ಕಟ್ಟಡ ಕೆಲಸದಲ್ಲಿ ಟೈಲ್ಸ್ ಹಾಕುವುದಕ್ಕಾಗಿ ಬಿಹಾರದಿಂದ 25ಕ್ಕೂ ಹೆಚ್ಚು ಕಾರ್ಮಿಕರು ಆಗಮಿಸಿದ್ದು, ಐದು ತಾತ್ಕಾಲಿಕ ಶೆಡ್‌ಗಳಲ್ಲಿ ನೆಲೆಸಿದ್ದರು. ಬುಧವಾರ ಎಲ್ಲರೂ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಒಂದು ಶೆಡ್‌ನಲ್ಲಿನ ಸಿಲಿಂಡರ್ ಸ್ಫೋಟಗೊಂಡಿದ್ದು, ಬೆಂಕಿ ಹೊತ್ತಿಕೊಂಡಿದೆ. ನಂತರ, ಇತರ ಬೆಂಕಿ ಇತರ ಶೆಡ್‌ಗಳಿಗೂ ವ್ಯಾಪಿಸಿ, 5 ಕೆಜಿಯ ಮೂರು ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಉಳಿದಿದ್ದ ಎರಡು ಸಿಲಿಂಡರ್‌ಗಳನ್ನು ಹೊರ ತೆಗೆದು ಹೆಚ್ಚಿನ ಅಪಾಯ ಸಂಭವಿಸದಂತೆ ತಡೆಯಲಾಗಿದೆ.
ಘಟನಾ ಸ್ಥಳಕ್ಕೆ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಐದು ಶೆಡ್‌ಗಳಲ್ಲಿ ವಾಸವಿದ್ದ 25ಕ್ಕೂ ಹೆಚ್ಚು ಕಾರ್ಮಿಕರಿಗೆ ಪಡಿತರ ಸೇರಿ ಇತರ ವಸ್ತುಗಳನ್ನು ವಿತರಿಸುವುದಾಗಿ ಭರವಸೆ ನೀಡಿದ್ದಾರೆ. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


