ಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಭಿನ್ನಮತ ಸ್ಫೋಟಗೊಂಡಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದ ಕಾರಣ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಈ ಹಿಂದೆ ಡಿಕೆಶಿ ನೀಡಿದ್ದರೆನ್ನಲಾದ ಭರವಸೆ ಮುರಿದಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.

ಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡೇ ದಿನಗಳಲ್ಲಿ ಖಾತೆ ಹಂಚಿಕೆಯ ಕಿಚ್ಚು ಜೋರಾಗಿದೆ. ಜಲಸಂಪನ್ಮೂಲ ಖಾತೆಯನ್ನು ನಿರಾಕರಿಸಿ, ಬೆಂಗಳೂರು ನಗರಾಭಿವೃದ್ಧಿ ಇಲಾಖೆಗಾಗಿಯೇ ಹಠ ಹಿಡಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ನಡೆ ಈಗ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಹಠಾತ್ ಬೆಳವಣಿಗೆಯ ಬೆನ್ನಲ್ಲೇ ರೆಡ್ಡಿ ಅವರು ಯಾರ ಕೈಗೂ ಸಿಗದೆ ಅಜ್ಞಾತ ಸ್ಥಳಕ್ಕೆ ತೆರಳಿರುವುದು ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ, ರಾಮಲಿಂಗಾರೆಡ್ಡಿ ಅವರ ಈ ಆಕ್ರೋಶ ಮತ್ತು ಹಠದ ಹಿಂದೆ ಕೇವಲ ಇಂದಿನ ಹಠ ಮಾತ್ರವಿಲ್ಲ, ಅದರ ಹಿಂದೆ "ಕೊಟ್ಟ ಮಾತು ತಪ್ಪಿದ" ಹಳೇ ರಾಜಕೀಯ ಇತಿಹಾಸ ಮತ್ತು ನೋವಿದೆ ಎನ್ನಲಾಗುತ್ತಿದೆ.

ಕಳೆದ ಬಾರಿ ಕೈತಪ್ಪಿದ್ದ ಖಾತೆ, ಡಿಕೆಶಿ ಕೊಟ್ಟಿದ್ದ ಭರವಸೆ! 

ಹಾಗೆ ನೋಡಿದರೆ, ಕಳೆದ ಬಾರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವಿದ್ದಾಗಲೂ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಯ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಆ ಸಂದರ್ಭದಲ್ಲಿ ಸಿದ್ದರಾಮಯ್ಯನವರು ರೆಡ್ಡಿ ಬದಲಿಗೆ ಡಿಕೆ ಶಿವಕುಮಾರ್ ಅವರಿಗೆ ಬೆಂಗಳೂರು ಅಭಿವೃದ್ಧಿ ಜವಾಬ್ದಾರಿಯನ್ನು ವಹಿಸಿದ್ದರು. ಇದರಿಂದ ರಾಮಲಿಂಗಾರೆಡ್ಡಿ ಅಸಮಾಧಾನಗೊಂಡಾಗ, ಸ್ವತಃ ಡಿಕೆ ಶಿವಕುಮಾರ್ ಅವರೇ ರೆಡ್ಡಿ ಅವರ ಮನವೊಲಿಸಿದ್ದರು. "ಮುಂದೆ ನಾನು ಮುಖ್ಯಮಂತ್ರಿಯಾದಾಗ ಖಂಡಿತವಾಗಿಯೂ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ನಿಮಗೇ ನೀಡುತ್ತೇನೆ" ಎಂದು ಡಿಕೆಶಿ ಆ ಸಂದರ್ಭದಲ್ಲಿ ಮಾತು ಕೊಟ್ಟಿದ್ದರು ಎನ್ನಲಾಗಿದೆ.

ಪ್ರಮಾಣ ವಚನದವರೆಗೂ ಜೀವಂತವಾಗಿದ್ದ ಭರವಸೆ 

ಪ್ರಸ್ತುತ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ರೆಡ್ಡಿ ಅವರ ನಿರೀಕ್ಷೆ ಸಹಜವಾಗಿಯೇ ಹೆಚ್ಚಾಗಿತ್ತು. ಸಚಿವ ಸಂಪುಟದ ಮೊದಲ ಲಿಸ್ಟ್‌ನಲ್ಲಿ ಹೆಸರು ಬಂದಾಗಲೂ ಹಾಗೂ ಪ್ರಮಾಣ ವಚನ ಸ್ವೀಕರಿಸುವುದ ಕ್ಕಿಂತ ಮುನ್ನವೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು "ಬೆಂಗಳೂರು ಅಭಿವೃದ್ಧಿ ಖಾತೆ ನಿಮಗೇ" ಎಂದು ರಾಮಲಿಂಗಾರೆಡ್ಡಿ ಅವರಿಗೆ ಮತ್ತೊಮ್ಮೆ ಭರವಸೆ ನೀಡಿದ್ದರು ಎನ್ನಲಾಗಿದೆ. ಇದೇ ನಂಬಿಕೆಯಿಂದ ರಾಮಲಿಂಗಾರೆಡ್ಡಿ ಅವರು ತಮ್ಮ ಆಪ್ತ ವಲಯದಲ್ಲೂ "ಈ ಬಾರಿ ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನ ನನಗೆ ಸಿಗುವುದು ಖಚಿತ" ಎಂದು ಹೇಳಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಈ ಪ್ರತಿಷ್ಠಿತ ಖಾತೆಯನ್ನು ಕೃಷ್ಣಾ ಬೈರೇಗೌಡ ಅವರಿಗೆ ನೀಡಿ, ರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆ ಹಂಚಿಕೆ ಮಾಡಿದ್ದೇ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಯಾರ ಕೈಗೂ ಸಿಗದೆ ಅಜ್ಞಾತ ಸ್ಥಳಕ್ಕೆ ಹೋದ ರೆಡ್ಡಿ! 

ಖಾತೆ ಹಂಚಿಕೆ ಬೆನ್ನಲ್ಲೇ ತೀವ್ರ ಆಕ್ರೋಶಗೊಂಡ ರಾಮಲಿಂಗಾರೆಡ್ಡಿ ಅವರು ತಮ್ಮ ಸರ್ಕಾರಿ ಕಚೇರಿಯಿಂದ ಖಾಸಗಿ ಕಾರೊಂದರಲ್ಲಿ ಯಾರಿಗೂ ಸುಳಿವು ನೀಡದೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಕೆಪಿಸಿಸಿ ಹಾಗೂ ಎಐಸಿಸಿ ಮುಖಂಡರು ಅವರ ಮನವೊಲಿಸಲು ತರಾತುರಿಯಲ್ಲಿ ಆಗಮಿಸುತ್ತಿರುವ ಸುಳಿವು ಸಿಗುತ್ತಿದ್ದಂತೆ, ಯಾರ ಕೈಗೂ ಸಿಗಬಾರದು ಅಲ್ಲಿಂದ ತೆರಳಿದ್ದಾರೆ. ಹೋಗುವ ಮುನ್ನ ತಮ್ಮ ಆಪ್ತರಿಗೆ ಅಧಿಕೃತವಾಗಿ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ತಲುಪಿಸಿ ಬರುವಂತೆ ಸೂಚಿಸಿ ಹೋಗಿದ್ದಾರೆ ಎನ್ನಲಾಗಿದೆ.

ರಾಮಲಿಂಗಾರೆಡ್ಡಿ ಆಕ್ರೋಶಕ್ಕೆ ಮಣಿಯುತ್ತಾರಾ ಕಾಂಗ್ರೆಸ್ ನಾಯಕರು? 

ರಾಜ್ಯದಲ್ಲಿ ಹೈಕಮಾಂಡ್ ನಾಯಕರು ಬೀಡು ಬಿಟ್ಟಿರುವಾಗಲೇ ಇಂತಹ ಮುಜುಗರದ ಬೆಳವಣಿಗೆ ನಡೆದಿರುವುದು ಕಾಂಗ್ರೆಸ್ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಹೈಕಮಾಂಡ್ ಎದುರೇ ಈ ಬಂಡಾಯ ಉಂಟಾಗಿರುವುದು ಸರಿಯಲ್ಲ ಎಂದು ಭಾವಿಸಿರುವ ಹಿರಿಯ ನಾಯಕ ಸಿದ್ದರಾಮಯ್ಯನವರು ತಾವೇ ಖುದ್ದಾಗಿ ರಾಮಲಿಂಗಾರೆಡ್ಡಿ ಜೊತೆ ಮಾತನಾಡಿ ಸಂಧಾನ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ಕೈ ಪಾಳಯದಲ್ಲಿ ಖಾತೆ ಬದಲಾವಣೆಯ ಕುರಿತು ಗಂಭೀರ ಚರ್ಚೆಗಳು ಆರಂಭವಾಗಿವೆ.

ಮುಂದೇನು?

ಬೆಂಗಳೂರು ರಾಜಕಾರಣದಲ್ಲಿ ರಾಮಲಿಂಗಾರೆಡ್ಡಿ ಅವರ ಹಿರಿತನ ಮತ್ತು ಪ್ರಭಾವವನ್ನು ಕಡೆಗಣಿಸುವುದು ಕಾಂಗ್ರೆಸ್‌ಗೆ ಸುಲಭವಲ್ಲ. ಒಂದು ವೇಳೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಸಂಧಾನಕ್ಕೆ ರೆಡ್ಡಿ ಒಪ್ಪದೇ ಇದ್ದರೆ, ಹೈಕಮಾಂಡ್ ನಾಯಕರ ಸಲಹೆಯಂತೆ ಮುಜುಗರ ತಪ್ಪಿಸಲು ಕೊನೆ ಕ್ಷಣದಲ್ಲಿ ಖಾತೆ ಬದಲಾವಣೆ ಮಾಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಕೃಷ್ಣಾ ಬೈರೇಗೌಡ ಅವರಿಗೆ ನೀಡಿರುವ ಬೆಂಗಳೂರು ಖಾತೆಯನ್ನು ಮರಳಿ ರೆಡ್ಡಿ ಅವರಿಗೆ ನೀಡಲಾಗುತ್ತದೆಯೇ ಅಥವಾ ರೆಡ್ಡಿ ಅವರನ್ನು ಸಮಾಧಾನಪಡಿಸಲು ಬೇರೆ ಸೂತ್ರ ಹುಡುಕಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.