ಹೊಳೆನರಸೀಪುರ [ಜ.24]:  ಹದಿ ಹರೆಯದ ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನೊಬ್ಬ ನಗರ ಠಾಣಾ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ತಾಲೂಕಿನ ಹಳೆಕೋಟೆ ಹೋಬಳಿಯ ಕಾಮಸಮುದ್ರ ಗ್ರಾಮದ ವಾಸಿ ಕೆ.ಎಸ್‌.ಪುನೀತ್‌ಗೌಡ (22) ಎಂಬಾತನೇ ಬಂಧಿತ ಆರೋಪಿ.

ಘಟನೆ ವಿವರ:  ಬುಧವಾರ ಸಂಜೆ ನಗರ ಠಾಣೆ ಎಸ್ಸೈ ಕುಮಾರ್‌ ಮತ್ತು ಸಿಬ್ಬಂದಿ ಪೇಟೆ ಮುಖ್ಯರಸ್ತೆಯಲ್ಲಿ ರಾತ್ರಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸುಭಾಷ್‌ ಚೌಕದ ಕಡೆಯಿಂದ ಪೇಟೆ ಮುಖ್ಯರಸ್ತೆಯಲ್ಲಿ ನಂಬರ್‌ ಪ್ಲೇಟ್‌ ಇಲ್ಲದ ದ್ವಿಚಕ್ರ ವಾಹನ ತಡೆದು ಆತ ಅನುಮಾನಸ್ಪದ ರೀತಿಯಲ್ಲಿ ಆತ ವರ್ತಿಸಿದ. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಸ್ಕೂಟರ್‌ ಡಿಕ್ಕಿ ಪರಿಶೀಲಿಸಿದಾಗ ಬಟ್ಟೆಯ ಗಂಟೊಂದು ಪತ್ತೆಯಾಯಿತು. ಅದನ್ನು ಬಿಚ್ಚಿ ನೋಡಿದಾಗ ಗಾಂಜಾ ಸೊಪ್ಪು ತುಂಬಿದ ಪೊಟ್ಟಣಗಳಿದ್ದುದು ಕಂಡು ಬಂತು.

ಈ ಬಗ್ಗೆ ವಿಷಯ ತಿಳಿದು ಪೊಲೀಸ್‌ ಇನ್‌ ಸ್ಪೆಕ್ಟರ್‌ ಅಶೋಕ್‌ ಮತ್ತು ತಹಸೀಲ್ದಾರ್‌ ಶ್ರೀನಿವಾಸ್‌ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಆರೋಪಿಯನ್ನು ಠಾಣೆಗೆ ಕರೆತರುವಂತೆ ಸೂಚಿಸಿದ ಮೇರೆಗೆ ನಗರ ಪೊಲೀಸರು ಸ್ಕೂಟರ್‌ ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ.

ಮಂಗಳೂರು ಬಾಂಬ್ ಪತ್ತೆ ಬೆನ್ನಲ್ಲೇ ಹಾಸನದಲ್ಲಿ ಇಬ್ಬರು ಶಂಕಿತರು ಅರೆಸ್ಟ್...

ಆರೋಪಿ ಆಗ ಪೊಲೀಸರ ಮುಂದೆ ಎಲ್ಲವನ್ನು ಬಾಯಿಬಿಟ್ಟಿದ್ದಾನೆ. ತನ್ನ ಹೆಸರು ಕೆ.ಎಸ್‌. ಪುನೀತ್‌ಗೌಡ, ಹಳೇಕೋಟೆ ಹೋಬಳಿಯ, ಕಾಮಸಮುದ್ರ ಗ್ರಾಮದ ನಿವಾಸಿಯಾಗಿದ್ದು, ಮೈಸೂರಿನಲ್ಲಿ ಓರ್ವ ವ್ಯಕ್ತಿಯಿಂದ ಗಾಂಜಾ ಸೊಪ್ಪನ್ನು ಖರೀದಿಸಿ ತಂದು ಇಲ್ಲಿನ ಯುವಕರಿಗೆ ಮೊಬೈಲ್‌ ಕರೆ ಮಾಡಿ ಹೋಟೆಲ್‌ ಬಳಿ ಕರೆಸಿಕೊಂಡು ಅವರಿಗೆ ಮಾರಾಟ ಮಾಡುತ್ತಿದ್ದುದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆಂದು ಹೇಳಲಾಗಿದೆ.

ಮಹಿಳೆ ಬರ್ಬರವಾಗಿ ಕೊಲೆಗೈದು ಸುಟ್ಟು ಹಾಕಿದ ದುಷ್ಕರ್ಮಿಗಳು...

ಮೈಸೂರಿನ ವ್ಯಕ್ತಿಯೊಬ್ಬ ಬಸ್ಸಿನ ಮೂಲಕ ಲಗ್ಗೇಜು ರೀತಿಯಲ್ಲಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಹೊಳೆನರಸೀಪುರಕ್ಕೆ ಕಳುಹಿಸುತ್ತಿದ್ದ ಎನ್ನಲಾಗಿದೆ. ಪ್ರಮುಖವಾಗಿ ಗಾಂಜಾ ಖರೀದಿಸುತ್ತಿದ್ದ ಯುವಕರು ಪೇಟೆ ಮುಖ್ಯ ರಸ್ತೆಯ ದಿ.ವಿರೂಪಾಕ್ಷ ಅವರ ಮನೆ ಸಮೀಪದ ಹೋಟೆಲ್‌ ಟೀ ಕುಡಿವ ನೆಪದಲ್ಲಿ ಅಲ್ಲಿಗೆ ಬಂದು ಆರೋಪಿಯಿಂದ ಗಾಂಜಾ ಸೊಪ್ಪನ್ನು ತೆಗೆದುಕೊಂಡು ಅದನ್ನು ಸಿಗರೇಟಿನಲ್ಲಿ ತುಂಬಿ ನಂತರ ಅಲ್ಲಿಯೇ ಕುಳಿತು ದಮ್‌ ಹೊಡೆದು ನಶೆ ತರಿಸಿಕೊಂಡು ಹೋಗುತ್ತಿದ್ದರೆಂದು ತಿಳಿದುಬಂದಿದೆ.

ಆರೋಪಿ ಪುನೀತ್‌ ಗೌಡ ಆ ದಂಧೆಯನ್ನು ಹಲವು ತಿಂಗಳುಗಳಿಂದಲೂ ನಡೆಸಿಕೊಂಡು ಬರುತ್ತಿದ್ದನು. ಪ್ರತಿದಿನ ಕೆಲವು ಯುವಕರು ಇವನ ಬಳಿ ಗಾಂಜಾ ಪಡೆಯುತ್ತಿದ್ದ ಐವರು ಯುವಕರನ್ನು ಪೊಲೀಸ್‌ ಠಾಣೆಗೆ ಕರೆತಂದು ಇರಿಸಲಾಗಿದೆ. ಈ ಸಂಬಂಧ ನಗರ ಠಾಣೆ ಪೊಲೀಸರು ಆರೋಪಿ ಪುನೀತ್‌ಗೌಡನ ವಿರುದ್ಧ ದೂರು ದಾಖಲಿಸಿಕೊಂಡು ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡು ಈತನಿಗೆ ಗಾಂಜಾ ತಂದುಕೊಡುತ್ತಿದ್ದ ಪ್ರಮುಖ ಆರೋಪಿಯ ಪತ್ತೆಗೆ ಮೈಸೂರಿಗೆ ಕರೆದೊಯ್ಯಲಾಗಿದೆ ಎಂದು ಗೊತ್ತಾಗಿದೆ