Gangavathi ತಾಲೂಕಿನ ತಿಮಲಾಪುರ ಗ್ರಾಮದ ಪುರಾತನ ಲಕ್ಷ್ಮೀ ದೇಗುಲದಲ್ಲಿ ನಿಧಿಗಾಗಿ ಕಳ್ಳರು ಶೋಧನೆ ನಡೆಸಲು ಯತ್ನಿಸಿದ್ದಾರೆ. ವಿಜಯನಗರ ಕಾಲದ ದೇಗುಲದಲ್ಲಿ ನಿಧಿ ಇದೆ ಎಂಬ ಅನುಮಾನದಿಂದ ದೇಗುಲಕ್ಕೆ ಹಾನಿ ಮಾಡಲಾಗಿದೆ.
ಗಂಗಾವತಿ (ಜೂ.21): ತಾಲೂಕಿನ ಕೊನೆ ಗ್ರಾಮ ತಿಮಲಾಪುರ ಬಳಿ ಲಕ್ಷ್ಮೀ ದೇಗುಲದಲ್ಲಿ ನಿಧಿಗಾಗಿ ಕಳ್ಳರು ಯತ್ನ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿರುವ ದೇಗುಲದಲ್ಲಿ ನಿಧಿ ಇರಬಹುದೆಂದು ಊಹಿಸಿ ಕಳ್ಳರು ದೇಗುಲ ಪ್ರವೇಶಿಸಿ ಶೋಧನೆ ನಡೆಸಿದ್ದಾರೆ.
ದೇಗುಲದಲ್ಲಿ ಲಕ್ಷ್ಮಿಮೂರ್ತಿ ಇಲ್ಲದಿದ್ದರೂ ಸಹ ನಿಧಿ ಇರಬಹುದೆಂಬ ಕಾರಣಕ್ಕೆ ಮಧ್ಯರಾತ್ರಿ 4 ರಿಂದ 5 ಜನರು ದೇಗುಲ ಮುಂಭಾಗ ಒಡೆದಿದ್ದಾರೆ. ಇದೇ ವೇಳೆ ಶ್ವಾನಗಳು ಬೊಗಳಿದ್ದರಿಂದ ಕಳ್ಳರು ಕಾಲ್ಕಿತ್ತಿದ್ದಾರೆ.
ಕಳೆದ 8 ವರ್ಷಗಳ ಹಿಂದೆ ನವವೃಂದಾವನ ಗಡ್ಡೆಯಲ್ಲಿರುವ ಕೃಷ್ಣದೇವರಾಯರ ರಾಜ ಗುರು ವ್ಯಾಸರಾಯರ ವೃಂದಾವನವನ್ನು ನಿಧಿಗಾಗಿ ಧ್ವಂಸಗೊಳಿಸಿ ವಿಫಲವಾದ ಘಟನೆ ಮಾಸುವ ಮುನ್ನವೇ ಮತ್ತೇ ಅರಸರ ಕಾಲದ ಲಕ್ಷ್ಮಿ ದೇಗುಲಕ್ಕೆ ಲಗ್ಗೆ ಹಾಕಿ ವಿಫಲರಾಗಿದ್ದಾರೆ.
ಪ್ರಕರಣ ದಾಖಲು
ಅಲ್ಲದೇ ಗವಿ ರಂಗನಾಥ. ಮಲ್ಲಾಪುರ, ಚಿಂತಾಮಣಿ ಸೇರಿದಂತೆ ವಿಜಯನಗರ ಕಾಲದ ದೇಗುಲಗಳನ್ನು ನಿಧಿಗಾಗಿ ಅಗೆದಿರುವ ಉದಾಹರಣೆಗಳು ಇವೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.


