- Home
- Karnataka Districts
- Coastal Karnataka Rain Crisis : ಮಕ್ಕಳಂತೆ ಬೆಳೆಸಿದ 800 ಅಡಿಕೆ ಮರಗಳನ್ನು ಜೆಸಿಬಿಯಿಂದ ನೆಲಸಮ ಮಾಡಿಸಿದ ರೈತ!
Coastal Karnataka Rain Crisis : ಮಕ್ಕಳಂತೆ ಬೆಳೆಸಿದ 800 ಅಡಿಕೆ ಮರಗಳನ್ನು ಜೆಸಿಬಿಯಿಂದ ನೆಲಸಮ ಮಾಡಿಸಿದ ರೈತ!
ಕರಾವಳಿಯಲ್ಲಿ ಮಳೆ ಕೊರತೆ ಮತ್ತು ನೀರಿನ ತೀವ್ರ ಅಭಾವದಿಂದ ಹತಾಶರಾದ ರೈತರೊಬ್ಬರು, 4 ವರ್ಷಗಳಿಂದ ಬೆಳೆಸಿದ್ದ 2 ಎಕರೆ ಅಡಿಕೆ ತೋಟವನ್ನು ಜೆಸಿಬಿಯಿಂದ ನೆಲಸಮ ಮಾಡಿದ್ದಾರೆ. ಸುಮಾರು 10 ಲಕ್ಷ ಸಾಲ ಮಾಡಿ 6 ಬೋರ್‌ವೆಲ್ ಕೊರೆಸಿದರೂ ನೀರು ಸಿಗದ ಕಾರಣ, ಬೆಳೆ ಒಣಗುವುದು ನೋಡಲಾರದೇ ನೆಲಸಮ ಮಾಡಿಸಿದ್ದಾರೆ.

ಉತ್ತರ ಕನ್ನಡ (ಜೂ.21): ವರ್ಷಾನುಗಟ್ಟಲೆ ಬೆವರು ಸುರಿಸಿ, ಸಾಲ ಮಾಡಿ ಬೆಳೆಸಿದ ಬೆಳೆ ಕಣ್ಣೆದುರೇ ಒಣಗಿ ಹೋಗುತ್ತಿದ್ದರೆ ಆ ರೈತನ ನೋವು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಇಂತಹದ್ದೇ ಒಂದು ಕರುಣಾಜನಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದನಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಳೆ ಕೊರತೆ ಮತ್ತು ನೀರಿನ ಅಭಾವದಿಂದ ಕಂಗಾಲಾದ ಯುವ ರೈತರೊಬ್ಬರು ತಾವು ನಾಲ್ಕು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ್ದ ಅಡಿಕೆ ತೋಟವನ್ನು ಜೆಸಿಬಿ ಬಳಸಿ ಕಿತ್ತುಹಾಕಿಸಿದ್ದಾರೆ.
ಘಟನೆಯ ವಿವರ:
ದನಗನಹಳ್ಳಿಯ ನಿವಾಸಿ ರಾಕೇಶ್ ರಾಮಚಂದ್ರ ಅಗಸರ್ (22) ಎಂಬ ಯುವ ರೈತನೇ ಈ ಕಠಿಣ ನಿರ್ಧಾರ ತೆಗೆದುಕೊಂಡ ದುರ್ದೈವಿ. ರಾಕೇಶ್ ಕಳೆದ ನಾಲ್ಕು ವರ್ಷಗಳಿಂದ ತನ್ನ ಎರಡು ಎಕರೆ ಜಮೀನಿನಲ್ಲಿ ಅತೀ ಆಸೆಯಿಂದ 800 ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದರು. ಮುಂದಿನ ದಿನಗಳಲ್ಲಿ ಉತ್ತಮ ಫಸಲು ಬಂದು ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು.
10 ಲಕ್ಷ ಸಾಲ, 6 ಬೋರ್‌ವೆಲ್ ಆದರೂ ಸಿಗದ ನೀರು:
ತೋಟವನ್ನು ಉಳಿಸಿಕೊಳ್ಳಲು ರಾಕೇಶ್ ಪಡಬಾರದ ಕಷ್ಟಪಟ್ಟಿದ್ದಾರೆ. ಸುಮಾರು 10 ಲಕ್ಷ ರೂಪಾಯಿಗೂ ಅಧಿಕ ಹಣ ವ್ಯಯಿಸಿ ಆರು ಬೋರ್‌ವೆಲ್‌ಗಳನ್ನು ಕೊರೆಸಿದರೂ ಹನಿ ನೀರು ಸಿಗಲಿಲ್ಲ. ಅತ್ತ ಮಳೆಯೂ ಇಲ್ಲ, ಇತ್ತ ಬೋರ್‌ವೆಲ್‌ನಲ್ಲೂ ನೀರಿಲ್ಲದೆ ತೋಟ ಸಂಪೂರ್ಣ ಒಣಗಲು ಆರಂಭಿಸಿತ್ತು. ಮೊದಲೇ ಬ್ಯಾಂಕ್ ಹಾಗೂ ಹೊರಗಡೆ ಸಾಲ ಮಾಡಿಕೊಂಡಿದ್ದ ರೈತ ನೀರಿನ ಸಮಸ್ಯೆಯಿಂದ ಹತಾಶರಾಗಿದ್ದರು. ಕಣ್ಣೆದುರೇ ಒಣಗುತ್ತಿದ್ದ ಗಿಡಗಳನ್ನು ನೋಡಲಾಗದೆ, ಅಂತಿಮವಾಗಿ ಜೆಸಿಬಿ ತರಿಸಿ ಇಡೀ ತೋಟವನ್ನು ನೆಲಸಮ ಮಾಡಿದ್ದಾರೆ.
ಜಿಲ್ಲೆಯಲ್ಲಿ ಮಳೆ ಕೊರತೆ ಆತಂಕ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮಳೆ ತೀವ್ರ ಕೈಕೊಟ್ಟಿದೆ. ಜೂನ್ ಮೊದಲ ವಾರದಲ್ಲಿ ಶೇ. 32 ರಷ್ಟು ಮಳೆ ಕೊರತೆಯಾಗಿದ್ದರೆ, ಕಳೆದ ವಾರದಲ್ಲಿ ಶೇ. 24 ರಷ್ಟು ಮಳೆಯ ಅಭಾವ ಕಂಡುಬಂದಿದೆ. ಇದರಿಂದ ಕೇವಲ ಅಡಿಕೆ ಮಾತ್ರವಲ್ಲದೆ, ಭತ್ತ ಹಾಗೂ ಇತರ ಬೆಳೆಗಳಿಗೂ ತೀವ್ರ ಸಂಕಷ್ಟ ಎದುರಾಗಿದೆ.
ಬಿಸಿಲಿನ ತಾಪಕ್ಕೆ ತೋಟಗಳು ಸುಟ್ಟು ಕರಕಲಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ತನಗಾದ ನಷ್ಟಕ್ಕೆ ಪರಿಹಾರ ನೀಡಬೇಕು ಮತ್ತು ಜಿಲ್ಲೆಯ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ರಾಕೇಶ್ ಮನವಿ ಮಾಡಿದ್ದಾರೆ.

