Gangavathi Road Widening: ಗಂಗಾವತಿ-ಆನೆಗೊಂದಿಯ ವಿರುಪಾಪುರ ತಾಂಡಾ ಮಾರ್ಗದ ತಾಯಿ ಮಕ್ಕಳ ಆಸ್ಪತ್ರೆಯ ರಸ್ತೆ ಅಗಲೀಕರಣ ಶುರುವಾಗಿದ್ದು, ರಸ್ತೆ ಬದಿಯ ಕಟ್ಟಡಗಳ ತೆರವು ಕಾರ್ಯಾಚರಣೆಗೆ ದಿನಗಣನೆ ಪ್ರಾರಂಭವಾಗಿದೆ.
ರಾಮಮೂರ್ತಿ ನವಲಿ
ಗಂಗಾವತಿ (ಜು.18): ಗಂಗಾವತಿ-ಆನೆಗೊಂದಿಯ ವಿರುಪಾಪುರ ತಾಂಡಾ ಮಾರ್ಗದ ತಾಯಿ ಮಕ್ಕಳ ಆಸ್ಪತ್ರೆಯ ರಸ್ತೆ ಅಗಲೀಕರಣ ಶುರುವಾಗಿದ್ದು, ರಸ್ತೆ ಬದಿಯ ಕಟ್ಟಡಗಳ ತೆರವು ಕಾರ್ಯಾಚರಣೆಗೆ ದಿನಗಣನೆ ಪ್ರಾರಂಭವಾಗಿದೆ. ಯಾವ ಸಮಯದಲ್ಲಾದರೂ ನಗರಸಭೆಯವರು ರಸ್ತೆ ಬದಿಯ ಕಟ್ಟಡ ತೆರವು ಮಾಡಬಹುದು. ಈಗಾಗಲೇ ಮಾಜಿ ಸಂಸದ ಎಚ್.ಜಿ. ರಾಮುಲು ನಿವಾಸದ ರಸ್ತೆಯಿಂದ (ಬಸವೇಶ್ವರ ವೃತ್ತ) ವಿರುಪಾಪುರ ತಾಂಡಾದ ಸೇವಾಲಾಲ್ ವೃತ್ತದ ರಸ್ತೆಯ ಮೂಲಕ ತಾಯಿ ಮಕ್ಕಳ ಆಸ್ಪತ್ರೆಯವರಿಗೂ ಅಗಲೀಕರಣಕ್ಕೆ ನಗರಸಭೆ ಮುಂದಾಗಿದೆ.
ಕಳೆದ ತಿಂಗಳು ನಗರಸಭೆಯವರು ಸರ್ವೇ ಮಾಡಿ ರಸ್ತೆ ಬದಿಯ ಕಟ್ಟಡ ಗುರುತಿಸಿದ್ದಾರೆ. ರಸ್ತೆಯ ಒಟ್ಟು ಅಗಲೀಕರಣ 70 ಫೀಟ್ ಇದ್ದು, ಮದ್ಯ ರಸ್ತೆಯಿಂದ 35/35 ಫೀಟ್ ನಂತೆ ಅಗಲೀಕರಣ ಮಾಡಲು ಸಿದ್ಧತೆ ನಡೆಸಿದೆ. ಕಳೆದ ಆರು ತಿಂಗಳಿನಿಂದ ಜುಲೈನಗರ, ಗುಂಡಮ್ಮ ಕ್ಯಾಂಪ್ ರಸ್ತೆಯ ಅಗಲೀಕರಣ ನಡೆದಿದ್ದು, ರಸ್ತೆಯ ಮಧ್ಯದಲ್ಲಿ ಡಿವೈಡರ್ ಮತ್ತು ವಿದ್ಯುತ್ ದೀಪ ಅಳವಡಿಸಲಾಗಿದೆ. ಅಲ್ಲದೇ ಕನಕದಾಸ ವೃತ್ತದಿಂದ ನೀಲಕಂಠೇಶ್ವರ ವೃತ್ತದವರಿಗೂ ರಸ್ತೆ ಅಗಲೀಕರಣ ಮುಕ್ತಾಯವಾಗಿದೆ.
10 ಕೋಟಿ ರು ಅನುದಾನ
ಗಂಗಾವತಿ ನಗರದ ಮಾಜಿ ಸಂಸದ ಎಚ್. ಜಿ. ರಾಮುಲು ನಿವಾಸದ ಮಾರ್ಗದ ರಸ್ತೆಯಿಂದ ಸೇವಾಲಾಲ್ ವೃತ್ತದ ಮೂಲಕ ತಾಯಿ ಮಕ್ಕಳ ಆಸ್ಪತ್ರೆ 1.2 ಕಿಮಿ ರಸ್ತೆ ಅಗಲೀಕರಣ ಮತ್ತು ಡಾಂಬರೀಕರಣಕ್ಕಾಗಿ ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯ ಅಭಿವೃದ್ದಿಯೋಜನೆ ಅಡಿಯಲ್ಲಿ ₹10 ಕೋಟಿ ಅನುದಾನ ಮಂಜೂರಾಗಿದೆ. ಈಗಾಗಲೇ ಅಗಲೀಕರಣ ಇದ್ದ ಸ್ಥಳದಲ್ಲಿ ರಸ್ತೆ ಅಭಿವೃದ್ಧಿ ನಡೆದಿದ್ದು, ಲೋಕೋಪಯೋಗಿ ಇಲಾಖೆಯವರು ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಿದ್ದಾರೆ. ರಸ್ತೆ, ಅಗಲೀಕರಣ, ಡಿವೈಡರ್ ನಿರ್ಮಾಣ, ವಿದ್ಯುತ್ ದೀಪಗಳ ಕಂಬ ಅಳವಡಿಕೆ, ಚರಂಡಿ, ಫುಟ್ ಪಾತ್ ಸೇರಿದಂತೆ ವಿವಿಧ ಕಾಮಗಾರಿ ಈ ಅನುದಾನದಲ್ಲಿ ನಿರ್ವಹಿಸಲಿದಾರೆ.
ಅವಕಾಶ ನೀಡಿ
ವಿರುಪಾಪುರ ತಾಂಡಾದಲ್ಲಿ ತೀರಾ ಬಡ ಕುಟಂಬಗಳಿದ್ದು, ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಒಂದು ವೇಳೆ 70 ಫೀಟ್ ನಂತೆ ರಸ್ತೆ ಅಗಲೀಕರಣ ಮಾಡಿದರೆ ಗುಡಿಸಲು ನಿವಾಸಿಗಳು ಬೀದಿಗೆ ಬರುವ ಪರಿಸ್ಥಿತಿ ಬರುತ್ತದೆ. ಕಾರಣ ಅಗಲೀಕರಣ ಸಡಿಲಗೊಳಿಸಿ ಅವಕಾಶ ನೀಡುವಂತೆ ನಿವಾಸಿಗಳು ನಗರಸಭೆಗೆ ಕೋರಿದ್ದಾರೆ.
ಸ್ವಯ ಪ್ರೇರಿತ ತೆರವುಗೊಳಿಸಿ
ಈಗಾಗಲೇ ರಸ್ತೆ ಅಗಲೀಕರಣಕ್ಕೆ ಮಾರ್ಕ್ ಮಾಡಲಾಗಿದ್ದು, ರಸ್ತೆಬದಿಯಲ್ಲಿ ಬರುವ ಕಟ್ಟಡ, ಮಳಿಗೆ ಸ್ವಂಪ್ರೇರಿತ ತೆರವುಗೊಳಿಸಿಕೊಳ್ಳಿ ಎಂದು ನಗರಸಭೆಯವರು ಮೌಖಿಕವಾಗಿ ಸೂಚನೆ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆ ಕಾಮಗಾರಿ ಪ್ರಾರಂಭಿಸಿದ್ದು, ಉಳಿದ ಸ್ಥಳ ತೆರವುಗೊಳಿಸುವ ಅವಶ್ಯಕತೆ ಇರುವದರಿಂದ ಸ್ವಂಪ್ರೇರಿತರಾಗಿ ತೆರವುಗೊಳಿಸಿಕೊಳ್ಳುವಂತೆ ತಿಳಿಸಿದ್ದಾರೆ. ಪ್ರಸ್ತುತ ರಸ್ತೆ ಅಗಲೀಕರಣ, ಕಟ್ಟಡಗಳ ತೆರವು ಕಾರ್ಯಕ್ಕೆ ದಿನಗಣನೆ ಪ್ರಾರಂಭವಾಗಿದೆ.
ರಸ್ತೆ ಅಗಲೀಕರಣ, ರಸ್ತೆ ಬದಿಯಲ್ಲಿರುವ ಕಟ್ಟಡಗಳ ತೆರವು ಕಾರ್ಯಾಚರಣೆ ನಗರಸಭೆಯಿಂದ ನಡೆಸಲಾಗುತ್ತದೆ. 70 ಫೀಟ್ ಅಳತೆಯಂತೆ ಸರ್ವೇ ಮಾಡಲಾಗಿದ್ದು, ಇದಕ್ಕಾಗಿ ₹10 ಕೋಟಿ ಅನುದಾನ ಮಂಜೂರಾಗಿದೆ. ಸ್ವಯಂ ಪ್ರೇರಿತರಾಗಿ ಕಟ್ಟಡ ತೆರವುಗೊಳಿಸಿಕೊಳ್ಳಲು ನಿವಾಸಿಗಳು ಸಮಯ ಕೇಳಿದ್ದಾರೆ.
-ಆಸ್ಮಾ ಬೇಗಂ, ಎಇಇ ನಗರಸಭೆಬಸವೇಶ್ವರ ವೃತ್ತದಿಂದ ತಾಯಿ, ಮಕ್ಕಳ ಆಸ್ಪತ್ರೆಯವರಿಗೆ ರಸ್ತೆ ಅಗಲೀಕರಣ ಮಾಡಲಾಗುತ್ತಿದ್ದು, ಡಾಂಬರೀಕರಣ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಡಿಯಲ್ಲಿ ₹10 ಕೋಟಿ ಮಂಜೂರಾಗಿದೆ.ಪಿಡ್ಲೂಡಿ ಇಲಾಖೆ ಕಾರ್ಯ ನಿರ್ವಹಿಸುತ್ತದೆ.
-ವಿಶ್ವನಾಥ, ಎಇಇ ಲೋಕೋಪಯೋಗಿ ಇಲಾಖೆ


