ಗಂಗಾವತಿ ಮತ್ತು ದರೋಜಿ ನಡುವಿನ 36 ಕಿ.ಮೀ ಉದ್ದದ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗಕ್ಕೆ ಅನುದಾನ ಕೋರಿ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ಮಾರ್ಗ ನಿರ್ಮಾಣವಾದರೆ 57 ಕಿ.ಮೀ ಪ್ರಯಾಣದ ಅಂತರ ಕಡಿಮೆಯಾಗಲಿದ್ದು, ಕಂಪ್ಲಿ ಹಾಗೂ ಸಂಡೂರು ಜನರಿಗೂ ಅನುಕೂಲವಾಗಲಿದೆ.
ಕೊಪ್ಪಳ (ಸೆ.28): ಗಂಗಾವತಿ–ದರೋಜಿ ನಡುವಿನ 36 ಕಿಮೀ ಉದ್ದದ ಹೊಸ ಬ್ರಾಡ್‌ಗೇಜ್ ರೈಲು ಮಾರ್ಗಕ್ಕೆ 2026–27ನೇ ಸಾಲಿನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಿ, ಕಾಮಗಾರಿ ಶೀಘ್ರ ಆರಂಭಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಬೆಂಗಳೂರಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣಗೆ ಮನವಿ ಪತ್ರ ಸಲ್ಲಿಸಿದರು.
ಗಂಗಾವತಿಯಿಂದ ಬಳ್ಳಾರಿಗೆ ಪ್ರಸ್ತುತ ರೈಲಿನಲ್ಲಿ ಪ್ರಯಾಣಿಸಲು ಮುನಿರಾಬಾದ್–ಗಿಣಿಗೇರಿ ಮಾರ್ಗವಾಗಿ ಸುಮಾರು 93 ಕಿಮೀ ಸುತ್ತು ಬಳಸಿ ತೆರಳಬೇಕಾಗಿದೆ. ಗಂಗಾವತಿ–ದರೋಜಿ ನಡುವಿನ ನೇರ ರೈಲು ಮಾರ್ಗ ನಿರ್ಮಾಣವಾದರೆ ಈ ದೂರ ಕೇವಲ 36 ಕಿಮೀಗೆ ಇಳಿಯಲಿದ್ದು, ಸುಮಾರು 57 ಕಿಮೀ ಪ್ರಯಾಣದ ಅಂತರ ಕಡಿಮೆಯಾಗಲಿದೆ. ಇದರಿಂದ ಗಂಗಾವತಿ ಮಾತ್ರವಲ್ಲದೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಜನರಿಗೂ ರೈಲ್ವೆ ಸಂಪರ್ಕದ ಅನುಕೂಲ ದೊರೆಯಲಿದೆ ಎಂದು ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.
ಸರ್ವೇ ಕಾರ್ಯ ಪೂರ್ಣ:
ಗಂಗಾವತಿ–ದರೋಜಿ ರೈಲು ಮಾರ್ಗದ ಕುರಿತು ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ಯೋಜನೆಗೆ ಅಗತ್ಯವಿರುವ ಪ್ರಾಥಮಿಕ ಪ್ರಕ್ರಿಯೆಗಳು ನಡೆದಿವೆ. ಆದರೆ ಅನುದಾನದ ಕೊರತೆಯಿಂದ ಯೋಜನೆ ಕಾಮಗಾರಿ ಆರಂಭವಾಗದೇ ನನೆಗುದಿಗೆ ಬಿದ್ದಿದೆ. ಈ ಮಹತ್ವದ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಅಗತ್ಯ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.
ಯೋಜನೆ ಪೂರ್ಣಗೊಂಡಲ್ಲಿ ಗಂಗಾವತಿ, ಬಳ್ಳಾರಿ ಹಾಗೂ ಗುಂತಕಲ್ ನಡುವೆ ನೇರ ರೈಲ್ವೆ ಸಂಪರ್ಕ ಕಲ್ಪಿಸುವುದು ಸಾಧ್ಯವಾಗಲಿದೆ. ಇದರಿಂದ ರೈತರು ತಮ್ಮ ಕೃಷಿ ಉತ್ಪನ್ನ ವಿವಿಧ ಮಾರುಕಟ್ಟೆಗಳಿಗೆ ಸಾಗಿಸಲು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಗೆ ತೆರಳಲು ಹಾಗೂ ವ್ಯಾಪಾರಿಗಳು ವ್ಯಾಪಾರ-ವಹಿವಾಟು ನಡೆಸಲು ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೆ ಈ ಭಾಗದ ಜನರ ಪ್ರಯಾಣದ ಸಮಯ ಮತ್ತು ಸಾರಿಗೆ ವೆಚ್ಚವೂ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಮುಖಂಡರು ಮನವಿಯಲ್ಲಿ ವಿವರಿಸಿದ್ದಾರೆ.
ವಿಶೇಷವಾಗಿ ಕಂಪ್ಲಿ ಹಾಗೂ ಸಂಡೂರು ಭಾಗದ ಜನರಿಗೆ ಗಂಗಾವತಿ ಸೇರಿದಂತೆ ಉತ್ತರ ಕರ್ನಾಟಕದ ಪ್ರಮುಖ ನಗರಗಳೊಂದಿಗೆ ರೈಲ್ವೆ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ. ಈ ಭಾಗದ ಕೈಗಾರಿಕೆ, ಕೃಷಿ, ವ್ಯಾಪಾರ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೂ ಯೋಜನೆಯಿಂದ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದ್ದಾರೆ.
36 ಕಿ.ಮೀ. ಬ್ರಾಡ್ ಗೇಜ್
ಹೀಗಾಗಿ ಗಂಗಾವತಿ–ದರೋಜಿ 36 ಕಿಮೀ ನೇರ ಬ್ರಾಡ್‌ಗೇಜ್ ರೈಲು ಮಾರ್ಗ ಯೋಜನೆಗೆ 2026–27ನೇ ಸಾಲಿನ ರೈಲ್ವೆ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಟ್ಟು ಕಾಮಗಾರಿ ಆರಂಭಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗಂಗಾವತಿಯ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಗಂಗಾವತಿ ತಾಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸುರೇಶ್ ಸಿಂಗನಾಳ, ಗಂಗಾವತಿ ವಕೀಲರ ಸಂಘದ ಕಾರ್ಯದರ್ಶಿ ಎಚ್.ಎಂ. ಮಂಜುನಾಥ, ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಸದಸ್ಯ ಕೆ.ವಿಶ್ವನಾಥ ಸ್ವಾಮಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.


