Yadagiri; ಪಿಪಿಇ ಕಿಟ್ ಧರಿಸಿ ವಿನೂತನ ಪ್ರತಿಭಟಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಉಮೇಶ ಮುದ್ನಾಳ್
ಭ್ರಷ್ಟಾಚಾರ, ಅಕ್ರಮ, ಅವ್ಯವಸ್ಥೆ, ಸಮಾಜಕ್ಕೆ ಆಘಾತಕಾರಿ. ನಿರ್ಲಕ್ಷ್ಯ ಅಧಿಕಾರಿಗಳೇ ನಿಜವಾದ ವೈರಸ್ ಎಂದು ಪ್ರತಿಭಟಿಸಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡು ಗಂಗಾಮತ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ.ಕೆ.ಮುದ್ನಾಳ್ ಹುಟ್ಟುಹಬ್ಬವು ಸಮಾಜದ ಒಳಿತಿಗಾಗಿ ಇರಬೇಕು ಎಂಬ ಸಂದೇಶ ಸಾರಿದ್ದಾರೆ.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ (ಅ.13): ಹುಟ್ಟು ಹಬ್ಬವನ್ನು ಸಾಮಾನ್ಯವಾಗಿ ಹೇಗೆ ಆಚರಿಸಿಕೊಳ್ತಾರೆ ಅಂದ್ರೆ ಅದು ನಮಗೆಲ್ಲ ಗೊತ್ತಿರುವುಂತದ್ದು. ಜನರನ್ನು ಸೇರಿಸಿ ಕೇಕ್ ಕಟ್ ಮಾಡಿ, ಹೂವಿನ ಹಾರ, ಶಾಲು ಹೋದಸಿಕೊಂಡು ಸೆಲೆಬ್ರೇಷನ್ ಮಾಡಿಕೊಳ್ತಾರೆ. ಆದ್ರೆ ಟೋಕ್ರಿ ಕೋಲಿ(ಗಂಗಾಮತ) ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ.ಕೆ.ಮುದ್ನಾಳ್ ಅವರ 50 ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಅದು ಹೇಗೆಂದ್ರೆ ಕೇಕ್, ಹೂ ಹಾರ, ಶಾಲಿಗೆ ಕೋಕ್, ಸಾಮಾಜಿಕ ಹೋರಾಟಕ್ಕೆ ಜೈ ಎನ್ನಿ ಎನ್ನುವುದರ ಮೂಲಕ ತನ್ನ ಹುಟ್ಟುಹಬ್ಬವನ್ನು ಹೋರಾಟ ಮೂಲಕ ಆಚರಿಸಿದ್ದಾರೆ. ಹುಟ್ಟುಹಬ್ಬವು ಸಮಾಜದ ಒಳಿತಿಗಾಗಿ ಇರಬೇಕು ಎಂಬ ಸಂದೇಶ ಸಾರಿದ್ದಾರೆ. ಕೋವಿಡ್ ಮಹಾಮಾರಿ ನಮ್ಮನೆಲ್ಲಾ ಹಿಂಡಿ ಹಿಪ್ಪೆಗಾಯಿ ಆಗುವಂತೆ ಮಾಡಿ ಹೋಗಿದೆ. ಅದರ ಹೆಸರು ಕೇಳಿದ್ರೆ ಭಯ ಹುಟ್ಟುವಂತೆ ಮಾಡಿದೆ. ಆದ್ರೆ ಉಮೇಶ.ಕೆ.ಮುದ್ನಾಳ್ ಮಾತ್ರ ಇವತ್ತು ಅವರ ಹುಟ್ಟುಹಬ್ಬದ ದಿನ ಪಿಪಿಇ ಕಿಟ್ ಧರಿಸಿ ಜಿಲ್ಲಾ ಮಟ್ಟದ 5 ಪ್ರಮುಖ ಇಲಾಖೆಗಳಿಗೆ ಸಮಾಜದ ಭ್ರಷ್ಟಾಚಾರ, ಅಕ್ರಮ, ಅನಾಚಾರ, ಅವ್ಯವಸ್ಥೆ ಇವೆಲ್ಲವನ್ನು ತಡೆಗಟ್ಟಬೇಕು ಎಂದು ವಿನೂತನ ಪ್ರತಿಭಟನೆ ಮಾಡಿದರು. ಜನ ಸೇವೆ ಮಾಡುವವರಿಗೆ ಕೇಕ್, ಹಾರ, ತುರಾಯಿ ಬೇಕಾಗಿಲ್ಲ. ಯಾವುದೇ ವ್ಯಕ್ತಿ ದುಂದು ವೆಚ್ಚ ಮಾಡಬಾರದು, ಈಗಿನ ಸಮಾಜದಲ್ಲಿ ಹುಟ್ಟುಹಬ್ಬ ಎಂಬುದು ಒಂದು ಪ್ಯಾಷನ್ ಆಗಿದೆ, ಇದು ಯುವಕರ ದಾರಿ ತಪ್ಪಿವಂತದ್ದು, ಇದನ್ನು ತಡೆದು ಸಮಾಜದ ಒಳಿತಿಗಾಗಿ ಕೆಲಸ-ಕಾರ್ಯಗಳು ಮಾಡಬೇಕು ಎಂಬುದು ಉಮೇಶ.ಕೆ.ಮುದ್ನಾಳ್ ಅವರ ಉದ್ದೇಶವಾಗಿದೆ.
ಪಿಪಿಇ ಕಿಟ್ ಧರಿಸಿ 5 ಇಲಾಖೆಗಳಿಗೆ ಮನವಿ: ಜಿಲ್ಲೆಯಲ್ಲಿ ಭ್ರಷ್ಟಾಚಾರ, ಅಕ್ರಮ ಎಗ್ಗಿಲ್ಲದೇ ನಡೆಯುತ್ತಿದ್ದು ಇದನ್ನು ತಡೆಯಲು ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಹಾಗಾಗಿ ನನ್ನ ಹುಟ್ಟುಹಬ್ಬದಂದು ಅಧಿಕಾರಿಗಳಿಗೆ ಪಿಪಿಇ ಕಿಟ್ ಧರಿಸಿ ಬೈಕ್ ರ್ಯಾಲಿ ಮೂಲಕ 5 ಪ್ರಮುಖ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಯಿತು. ಮೊದಲನೇಯದಾಗಿ ರೈತರು ಬ್ಯಾಂಕ್ ಗಳಲ್ಲಿ ಕೃಷಿ ಸಾಲ ತೆಗೆದುಕೊಳ್ಳಲು ಪರದಾಡುವಂತಾಗಿದ್ದು, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಹಾಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲೀಡ್ ಬ್ಯಾಂಕ್ ಮ್ಯಾನೇಜರ್ ಗೆ ನೂರಾರು ಜನರೊಂದಿಗೆ ಮನವಿ ಮಾಡಲಾಯಿತು. ನಂತರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಬಸ್ಸಿನ ಕೊರತೆಯಿದ್ದು, ಅದನ್ನು ಸರಿಪಡಿಸಿ ವಿದ್ಯಾರ್ಥಿ ಓದಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರಿಗೆ ಇಲಾಖೆಯ ವಿಭಾಗ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದರು. ಜೊತೆಗೆ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ, ಸೇಂಧಿ, ಕಳ್ಳಬಟ್ಟಿ ಮಾರಾಟ ಹೆಚ್ಚಾಗಿದೆ. ಇದರಿಂದಾಗಿ ಯುವಕರು ಸಂಪೂರ್ಣ ದಾರಿ ತಪ್ಪಿ ಸಂಸಾರವೇ ಹಾಳಾಗುತ್ತಿದೆ.
ಹಾಗಾಗಿ ಇದನ್ನು ತಡೆಗಟ್ಟಬೇಕು ಎಂದು ಅಬಕಾರಿ ಡಿಸಿಗೆ ವಿನಂತಿಸಲಾಯಿತು. ಹಾಗೂ ಜಿಲ್ಲೆಯಲ್ಲಿ ಗೋಡಿಹಾಳ, ಟೋಕಾಪುರ ಮತ್ತು ಮುದ್ನಳ್ ಗ್ರಾಮದಲ್ಲಿ ಸರ್ಕಾರಿ ಜಾಗವನ್ನು ಅಕ್ರಮವಾಗಿದ್ದು, ಸರ್ವೇ ಮೂಲಕ ಬಯಲಾಗಿದೆ ಇದರ ವಿರುದ್ಧ ಕ್ರಮ ಕೈಗೊಳ್ಳಲು ಸಿಇಓ ಹಿಂದೇಟು ಹಾಕುತ್ತಿದ್ದು, ಅವರ ವಿರುದ್ಧವೇ ಜಿಲ್ಲಾಧಿಕಾರಿ ಹಾಗೂ ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು ಎಂದರು. ನಂತರ ಜಿಲ್ಲೆಯಲ್ಲಿ ಮಟ್ಕಾ ಹಾವಳಿ ವಿಪರೀತವಾಗಿದ್ದು ಇದನ್ನು ತಡೆಯಬೇಕು ಜೊತೆಗೆ ಪೋನ್ ಇನ್ ಪ್ರೋಗ್ರಾಂ ಮೂಲಕ ಜನರಿಗೆ ಜನಸ್ನೇಹಿ ಆಗಬೇಕು ಎಂದು ಎಸ್ಪಿಗೆ ಒತ್ರಾಯ ಮಾಡಿದರು.
ಭ್ರಷ್ಟಾಚಾರಿ ಅಧಿಕಾರಿಗಳೇ ಕೊರೋನಾ ವೈರಸ್: ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಉಮೇಶ.ಕೆ.ಮುದ್ನಾಳ್ ಮಹಾಮಾರಿ ಕೊರೋನಾ ವನ್ನು ನಾವು ಕಣ್ಣಾರೆ ಕಂಡಿಲ್ಲ, ಲ್ಯಾಬ್ ನಲ್ಲಿದ್ದಂತ ವೈದ್ಯರು ನೋಡಿದ್ದಾರೆ. ಹಾಗಾಗಿ ಈಗ ಸಮಾಜದ ಆಘಾತಕಾರಿ ವೈರಸ್ ಅಂದ್ರೆ ಅದು ಭ್ರಷ್ಟಾಚಾರಿ, ಸಮಾಜವಿರೋಧಿ ಅಧಿಕಾರಿಗಳಾಗಿದ್ದಾರೆ. ನಾವು ಕಟ್ಟುವ ತೇರಿಗೆಯಲ್ಲಿ ಕಾರು ಅದಕ್ಕೆ ಡಿಸೇಲ್, ಕಚೇರಿ ನೀಡಿ ಸಮಾಜದ ಸೇವೆ ಮಾಡಬೇಕಾದ ಅಧಿಕಾರಿಗಳು ಸಮಾಜದ್ರೋಹಿಯಾಗಿದ್ದು, ಈ ಐದು ಇಲಾಖೆಯ ಅಧಿಕಾರಿಗಳು ಇಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.