ಸಿಂಧನೂರು(ಮೇ.20): ತಾಲೂಕಿನ ತುರ್ವಿಹಾಳ ಗ್ರಾಮದ ಮಹಿಳೆಯ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ನೊಂದ ಮಹಿಳೆ ತುರ್ವಿಹಾಳ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.

ಏ.12ರಂದು ತುರ್ವಿಹಾಳದ ಆದೇಶ, ಸೋಮನಾಥ ಹಾಗೂ ರಮೇಶ ಎಂಬುವವರು ಅದೇ ಗ್ರಾಮದ ವಿಧವಾ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಪೊಲೀಸ್‌ ಠಾಣೆಗೆ ದೂರು ನೀಡಿದರೆ, ಅಟ್ರಾಸಿಟಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆಯೊಡ್ಡಿದ್ದರು. ಸೋಮವಾರ ಪುನಃ ಆ ಯುವಕರು ಮಹಿಳೆಗೆ ಅವಾಚ್ಯವಾಗಿ ನಿಂದಿಸಿ, ಮಾನಹಾನಿ ಮಾತುಗಳನ್ನಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ತುರ್ವಿಹಾಳ ಪೊಲೀಸ್‌ ಠಾಣೆಗೆ ಡಿವೈಎಸ್‌ಫಿ ವಿಶ್ವನಾಥರಾವ್‌ ಕುಲಕರ್ಣಿ ಭೇಟಿ ನೀಡಿ ಆರೋಪಿತರನ್ನು ವಿಚಾರಿಸಿದರು.

ಒಂದೇ ದಿನ  ಕರ್ನಾಟಕದಲ್ಲಿ 84 ಕೇಸು, ಗ್ರೀನ್ ಝೋನ್ ಜಿಲ್ಲೆಗೂ ವಕ್ಕರಿಸಿದ ಕೊರೋನಾ

ಆರೋಪಿಗಳಾದ ಆದೇಶ, ಸೋಮನಾಥ ಸೇರಿದಂತೆ ಇನ್ನೂ ಮೂರು ಜನರ ಮತ್ತೊಂದು ತಂಡ ಉಮಲೂಟಿ, ಕಲ್ಮಂಗಿ ಗ್ರಾಮಗಳ ಬಳಿ ರಾತ್ರಿ ಲಾರಿಗಳನ್ನು ನಿಲ್ಲಿಸಿ ಡ್ರೈವರ್‌ಗಳಿಂದ ಹಣ ಪೀಕುತ್ತಿದ್ದರು. ಹಣ ಕೊಡದವರನ್ನು ಹೊಡೆದು, ಇನ್ನೊಂದು ಬಾರಿ ಈ ಮಾರ್ಗದಲ್ಲಿ ಹೋಗುವಾಗ ಹಣ ಕೊಟ್ಟು ಹೋಗಬೇಕು ಎಂದು ತಾಕೀತು ಮಾಡುತ್ತಿದ್ದರು. ಈ ಬಗ್ಗೆ ಆರೋಪಿಗಳಿಂದ ಮಾಹಿತಿ ಸಂಗ್ರಹಿಸಿ ಡಕಾಯಿತಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಡಿವೈಎಸ್‌ಪಿ ವಿಶ್ವನಾಥರಾವ್‌ ತಿಳಿಸಿದ್ದಾರೆ.