ಜನದಟ್ಟನೆ ರಸ್ತೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ನಿಷಿದ್ಧ: ವಿಸರ್ಜನೆ ಸ್ಥಳ ಪತ್ತೆಗೆ ಕ್ಯುಆರ್ ಕೋಡ್..!
ಗಣೇಶೋತ್ಸವಕ್ಕೆ ಪೊಲೀಸ್ ಮಾರ್ಗಸೂಚಿ ಪ್ರಕಟ । ಬಲವಂತದ ವಂತಿಗೆ ಸಂಗ್ರಹಿಸಿದರೆ ಕಠಿಣ ಕ್ರಮ । ಪಾಲಿಕೆಯಿಂದ ಪರವಾನಗಿ ಖಡ್ಡಾಯ । ಮೆರವಣಿಗೆ ವೇಳೆ ಅಪರಾಧಗಳು ನಡೆದರೆ ಆಯೋಜಕರೇ ಜವಾಬ್ದಾರಿ.

ಬೆಂಗಳೂರು(ಸೆ.17): ನಗರದ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಚರಿಸುವವರು ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಠಾಣೆಯ ಅನುಮತಿ ಪಡೆಯಬೇಕು. ಗಣೇಶ ವಿಗ್ರಹ ಪ್ರತಿಷ್ಠಾಪನೆ ಹಾಗೂ ಇತರೆ ಕಾರ್ಯಕ್ರಮಗಳ ಹೆಸರಿನಲ್ಲಿ ಬಲವಂತವಾಗಿ ವಂತಿಗೆ ಸಂಗ್ರಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ,ದಯಾನಂದ್ ಎಚ್ಚರಿಸಿದ್ದಾರೆ.
ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮಾರ್ಗಸೂಚಿ ಹೊರಡಿಸಿರುವ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವಾಗ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಚಪ್ಪರ, ಶಾಮಿಯಾನ ಹಾಕಲು ಬಿಬಿಎಂಪಿಯಿಂದ ಪರವಾನಗಿ ಪಡೆಯಬೇಕು. ಸಂಚಾರ ಒತ್ತಡವಿರುವ ರಸ್ತೆಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಗಣೇಶ ಮಂಡಳಗಳಿಂದ ಹೊಸ ಬೇಡಿಕೆ: ಗಣೇಶನಿಗೂ ಫ್ರೀ ಕರೆಂಟ್ ಕೊಡಿ ಎಂದ ಹಿಂದೂ ಸಂಘಟನೆಗಳು!
ವಿವಾದಿತ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಬಾರದು. ಪ್ರತಿಷ್ಠಾಪನೆ ಮಾಡುವ ಸ್ಥಳದ ಮಾಲೀಕರ ಅನುಮತಿ ಪಡೆದು ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ನೀಡಿ ಬಳಿಕ ಪ್ರತಿಷ್ಠಾಪಿಸಬೇಕು. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಆಯೋಜನರ ಪರವಾಗಿ ಇಬ್ಬರು ಜವಾಬ್ದಾರಿಯುತ ಕಾರ್ಯಕರ್ತರು ದಿನದ 24 ತಾಸು ಇರಬೇಕು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಗಣೇಶಮೂರ್ತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಆಯೋಜಕರು ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು, ಬೆಂಕಿ ನಂದಿಸುವ ಸಾಮಗ್ರಿಗಳು, ಸ್ಥಳೀಯ ಪೊಲೀಸ್ ಠಾಣೆ, ಅಗ್ನಿಶಾಮಕ ದಳದ ದೂರವಾಣಿ ಸಂಖ್ಯೆಗಳು, ಪದಾಧಿಕಾರಿಗಳ ಮೊಬೈಲ್ ಸಂಖ್ಯೆ ಪ್ರದರ್ಶಿಸಬೇಕು ಎಂದು ಸೂಚಿಸಿದ್ದಾರೆ.
1. ಪಾಲಿಕೆಯಿಂದ ಪ್ರಮುಖ ಮಾರ್ಗಸೂಚಿಗಳು:
* ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಹಾಗೂ ಸುತ್ತಮುತ್ತ ಅಡುಗೆ ಮಾಡುವ ಕಟ್ಟಿಗೆ, ಉರುವಲು, ಸೀಮೆಎಣ್ಣೆ ಸಾಧನಗಳನ್ನು ಇರಿಸಬಾರದು ಹಾಗೂ ಅಡುಗೆ ಮಾಡಬಾರದು
* ವಿದ್ಯುತ್ ಮತ್ತು ವಿದ್ಯುತ್ ದೀಪ ಅಲಂಕಾರಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಇಲಾಖೆಯಿಂದ ಅನುಮತಿ ಪಡೆಯಬೇಕು. ಅಗ್ನಿಶಾಮಕ ದಳ ಹಾಗೂ ಸಂಚಾರ ಪೊಲೀಸರಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು
* ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ದಿನದ 24 ತಾಸು ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರ ಆಗಮನ ಮತ್ತು ನಿರ್ಗಮನಕ್ಕೆ ವ್ಯವಸ್ಥೆ ಮಾಡ ಬೇಕು, ಜನದಟ್ಟಣೆ ನಿಯಂತ್ರಿಸಲು ಬ್ಯಾರಿಕೇಡ್ ಅಳವಡಿಸಬೇಕು, ಸ್ವಯಂ ಸೇವಕರನ್ನು ನಿಯೋಜಿಸಬೇಕು
*ಗಣೇಶ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಪರಾಧಗಳು ನಡೆದರೆ ಆಯೋಜಕರೇ ಜವಾಬ್ದಾರರು, ಗಣೇಶ ಪ್ರತಿಷ್ಠಾಪನೆ, ಮನರಂಜನಾ ಕಾರ್ಯಕ್ರಮ, ಮೆರವಣಿಗೆ, ವಿಸರ್ಜನಾ ಸ್ಥಳಗಳಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಕೀಟಲೆ ಮಾಡದಂತೆ ಆಯೋಜಕರೇ ಪೂರ್ಣ ಜವಾಬ್ದಾರಿ ವಹಿಸಬೇಕು
* ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು. ಇದಕ್ಕೆ ಸ್ಥಳೀಯ ಪೊಲೀಸರ ಅನುಮತಿ ಪಡೆಯಬೇಕು. ಇದನ್ನು ಕಟ್ಟುನಿಟ್ಟಾಗಿ ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಡಿಮೆ ಮಟ್ಟದ ಶಬ್ಧ ಇರಬೇಕು, ಡಿಜೆ ಅಳವಡಿಕೆಗೆ ಅವಕಾಶವಿಲ್ಲ.
*ಗಣೇಶೋತ್ಸವ ಸಮಿತಿ, ಸಂಘಟಕರು, ಆಯೋಜನಾ ಸಮಿತಿಗಳ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಇತರೆ ಪದಾಧಿಕಾರಿಗಳ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸಂಬಂಧಪಟ್ಟ ಠಾಣಾಧಿಕಾರಿಗೆ ನೀಡಬೇಕು
2. ವಿಸರ್ಜನಾ ಕಾರ್ಯಕ್ರಮಕ್ಕೆ ಮಾರ್ಗಸೂಚಿಗಳು:
* ಗಣೇಶ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಆಯೋಜಕರು ಸ್ವಯಂ ಸೇವಕರನ್ನು ಗುರುತಿಸಲು ಗುರುತಿನ ಚೀಟಿ, ಬ್ಯಾಡ್ಜ್, ಟೀ-ಶರ್ಟ್ ಅಥವಾ ಕ್ಯಾಪ್ ನೀಡಬೇಕು
* ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡಲು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮುಂಚಿತವಾಗಿ ಮಾಹಿತಿ ನೀಡಿ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲು ಸಹಕರಿಸಬೇಕು
*ಮೆರವಣಿಗೆಯು ಸೂಕ್ಷ್ಮಸ್ಥಳ , ಅತೀ ಸೂಕ್ಷ್ಮಸ್ಥಳ ಹಾಗೂ ಪ್ರಾರ್ಥನಾ ಸ್ಥಳಗಳ ಎದುರು ಸಾಗುವಾಗ ಸಿಡಿಮದ್ದು, ಪಟಾಕಿ ಸಿಡಿಸಬಾರದು, ಕರ್ಪೂರ ಹಚ್ಚಬಾರದು.
* ಗಣೇಶ ವಿಸರ್ಜನಾ ಮೆರವಣಿಗೆ ರಾತ್ರಿ 10 ಗಂಟೆಯೊಳಗೆ ಮುಗಿಯುವಂತೆ ಆಯೋಜಕರು ನೋಡಿಕೊಳ್ಳಬೇಕು. ಮೆರವಣಿಗೆ ವೇಳೆ ವಿದ್ಯುತ್ ವೈರ್‌ಗಳು , ಮರದ ಕೊಂಬೆಗಳ ಬಗ್ಗೆ ಗಮನಹರಿಸಬೇಕು. ಮೆರವಣಿಗೆ ಸುಸೂತ್ರವಾಗಿ ಸಾಗಲು ಸಂಬಂಧಪಟ್ಟ ಇಲಾಖೆಗಳಿಂದ ಮುಂಜಾಗ್ರತಾ ಕ್ರಮಗಳನ್ನು ಪಡೆದುಕೊಳ್ಳಬೇಕು.
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಗರದ 39 ಕೆರೆ ಅಂಗಳದಲ್ಲಿ ತಾತ್ಕಾಲಿಕ ಕಲ್ಯಾಣಿ, 418 ತಾತ್ಕಾಲಿಕ ಮೊಬೈಲ್ ವಿಸರ್ಜನೆ ಟ್ಯಾಂಕರ್‌ಗಳನ್ನು ಬಿಬಿಎಂಪಿ ವ್ಯವಸ್ಥೆ ಮಾಡಿದೆ.
ಗಣೇಶ ವಿಸರ್ಜನೆಗೆ ಕಲ್ಯಾಣಿ ಗಳ ಸ್ಥಾಪನೆ
ನಗರದಲ್ಲಿ ಸೋಮವಾರ ಗಣೇಶ ಚತುರ್ಥಿ ಆಚರಣೆ ಮಾಡಲಾಗುತ್ತಿದೆ. ಹೀಗಾಗಿ, ಬಿಬಿಎಂಪಿ ನಗರದ ಎಲ್ಲ ವಾರ್ಡ್‌ನಲ್ಲಿ ಗಣೇಶ ವಿಸರ್ಜನೆಗೆ ತಾತ್ಕಾಲಿಕ ವಿಸರ್ಜನಾ ವ್ಯವಸ್ಥೆಗಳನ್ನು ಮಾಡಲಾಗಿದೆ. ವಿಸರ್ಜನೆ ವ್ಯವಸ್ಥೆಯ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳನ್ನು ಬಿಬಿಎಂಪಿ ನಿಯೋಜನೆ ಮಾಡಿದೆ.
ಗಣೇಶ ಹಬ್ಬ: ರಾಜ್ಯಕ್ಕೆ ಸೆ.18ರಂದು ರಜೆಯಿದ್ದರೆ, ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಬದಲಿ ದಿನ ರಜೆ ಘೋಷಣೆ
ವಿಸರ್ಜನೆಯ ವಿವರಗಳಿಗಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅಥವಾ ವೆಬ್ ಸೈಟ್ https://apps.bbmpgov.in/ganesh2023/ ನಲ್ಲಿ ಅಥವಾ ಬಿಬಿಎಂಪಿ ಸಹಾಯವಾಣಿ 1533ಗೆ ಕರೆಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.
ವಲಯವಾರು ವಿಸರ್ಜನಾ ವ್ಯವಸ್ಥೆ ವಿವರ: ವಲಯ ತಾತ್ಕಾಲಿಕ ಮೊಬೈಲ್ ಟ್ಯಾಂಕರ್ ಕೆರೆ ಅಂಗಳ ತಾತ್ಕಾಲಿಕ ಕಲ್ಯಾಣಿಗಳು
ಪೂರ್ವ 88 01
ಪಶ್ಚಿಮ 6 01
ದಕ್ಷಿಣ 4 02
ಮಹದೇವಪುರ 4 14
ದಾಸರಹಳ್ಳಿ 19 01
ಬೊಮ್ಮನಹಳ್ಳಿ 5 04
ಆರ್.ಆರ್. ನಗರ 9 06
ಯಲಹಂಕ 04 10
ಒಟ್ಟು 41 39