ರಾಜಿನಾಮೆ ವಿವಾದ : ಬಿಜೆಪಿಯಲ್ಲಿ ಗೇಮ್ ಪ್ಲಾನ್ ಶುರು
ರಾಜೀನಾಮೆ ವಿವಾದ ಎದ್ದಿದ್ದು ಬಿಜೆಪಿಯಲ್ಲಿ ಗೇಮ್ ಪ್ಲಾನ್ ಶುರುವಾಗಿದೆ. ಏನಿದು ವಿಚಾರ
ಚಿಕ್ಕಮಗಳೂರು (ನ.10): ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಅವರ ರಾಜಿನಾಮೆ ವಿವಾದ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ.
ಸೋಮವಾರ ಈ ಅಖಾಡಕ್ಕೆ ಜಿಪಂ ಮಾಜಿ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್ ಅವರು ಎಂಟ್ರಿಯಾಗಿದ್ದಾರೆ. ತಾವು ಅಧ್ಯಕ್ಷರಾಗಿ ರಾಜಿನಾಮೆ ನೀಡುವ ಸಂದರ್ಭದಲ್ಲಿ ಆಗಿದ್ದ ಗೊಂದಲವನ್ನು ಸುದ್ದಿಗೋಷ್ಠಿಯಲ್ಲಿ ಸೋಮವಾರ ಅವರು ಮೆಲಕು ಹಾಕಿದರು. ಸುಜಾತ ಕೃಷ್ಣಪ್ಪ ಅವರು ರಾಜಿನಾಮೆ ನೀಡಿದರೆ ಮುಂದಿನ ಅವಧಿಗೆ ತಾವೇ ಅಧ್ಯಕ್ಷರಾಗುವುದಾಗಿ ಚೈತ್ರಶ್ರೀ ಹೇಳಿದರು.
ಬಿಜೆಪಿಗೆ ಜಾಕ್ ಪಾಟ್ : ಗೆದ್ದು ಬೀಗಿದ ಮುಖಂಡಗೆ ಮಹತ್ವದ ಸ್ಥಾನ .
ಮತ್ತೊಂದು ಸಾಮಾನ್ಯಸಭೆ: ಆಡಳಿತ ಪಕ್ಷ ಬಿಜೆಪಿ ಸದಸ್ಯರ ಕೋರಂ ಇಲ್ಲದೇ ಎರಡು ಬಾರಿ ಮುಂದೂಡಲಾಗಿದ್ದ ಜಿಪಂ ಸಾಮಾನ್ಯ ಸಭೆಯನ್ನು ನ.18ರಂದು ಕರೆಯಲಾಗಿದೆ. ಈ ಸಭೆಗೆ ಹಾಜರಾಗದೆ ಹೋದರೆ ಸತತ ಮೂರು ಸಭೆಗಳಿಗೆ ಗೈರುಹಾಜರಿಯಾಗಿರುವ ಕಾರಣಕ್ಕಾಗಿ ಬಿಜೆಪಿಯ ಜಿಪಂ ಸದಸ್ಯರನ್ನು ಅಮಾನತುಗೊಳಿಸಬಹುದು ಎಂಬುದು ಸದ್ಯ ಪ್ರತಿ ಪಕ್ಷ ಕಾಂಗ್ರೆಸ್ ಮತ್ತು ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಅವರ ಬೆಂಬಲಿಗರ ಲೆಕ್ಕಚಾರ. ಅಂದಿನ ಸಭೆಗೆ ಹಾಜರಾಗಿ ನಂತರದಲ್ಲಿ ಸಭೆಯನ್ನು ಬಹಿಷ್ಕರಿಸಿ ಹೊರಬಂದರೆ, ಅಲ್ಲಿಗೆ ಸಭೆಗೆ ಹಾಜರಾದಂತಾಗುತ್ತದೆ. ಆಗ ತಮ್ಮ ಮೇಲೆ ಕ್ರಮ ಆಗುವುದಿಲ್ಲ ಎಂಬುದು ಬಿಜೆಪಿ ಪಕ್ಷದ ಗೇಮ್ ಪ್ಲಾನ್.
ಸಭೆಗೆ ಇನ್ನು 9 ದಿನಗಳು ಬಾಕಿಯಿವೆ. ಅಷ್ಟರಲ್ಲೇ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಕರೆದು ಜಿಪಂ ಅಧ್ಯಕ್ಷರ ರಾಜಿನಾಮೆಗೆ ಸಂಬಂಧಿಸಿದಂತೆ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯ ಬಗ್ಗೆಯೂ ಪಕ್ಷದಲ್ಲಿ ಈವರೆಗೆ ಚರ್ಚೆಯಾಗಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಎಲ್ಲರ ಚಿತ್ತ ನ.18 ರಂದು ನಡೆಯಲಿರುವ ಜಿಪಂ ಸಾಮಾನ್ಯ ಸಭೆಯತ್ತ ಇದೆ.
ಮುಂದಿನ ಅವಧಿಗೆ ನಾನೇ ಅಧ್ಯಕ್ಷೆ: ಚೈತ್ರಶ್ರೀ
ಚಿಕ್ಕಮಗಳೂರು: ಪಕ್ಷದ ಆದೇಶ ಪಾಲಿಸಿದರೆ ತಮ್ಮ ರಾಜಕೀಯ ಭವಿಷ್ಯ ಉಜ್ವಲವಾಗಲಿದೆ ಎಂದು ಜಿಪಂ ಅಧ್ಯಕ್ಷೆ ಸುಜಾತ ಅವರಿಗೆ ಮಾಜಿ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್ ಸಲಹೆ ನೀಡಿದರು.
ಸುಜಾತ ಕೃಷ್ಣಪ್ಪ 29 ತಿಂಗಳು ಅಧಿಕಾರದಲ್ಲಿದ್ದು, ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಪಕ್ಷದ ಆದೇಶ ಪಾಲಿಸುವುದು ಒಳ್ಳೆಯದು. ಈ ಹಿಂದೆ ಪಕ್ಷದ ಆದೇಶವನ್ನು ಪಾಲನೆ ಮಾಡುವ ಉದ್ದೇಶದಿಂದಲೇ ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ. ನಾನು ರಾಜಿನಾಮೆ ನೀಡಿದೇಹೋಗಿದ್ದರೆ ಸುಜಾತ ಅವರು ಅಧ್ಯಕ್ಷರಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಹೇಳಿದರು.
ಪಕ್ಷದಲ್ಲಿ ಆಗಿರುವ ಒಪ್ಪಂದದ ಪ್ರಕಾರ ನಾನು ಮೊದಲು 20 ತಿಂಗಳು, ಎರಡನೇ ಅವಧಿ 20 ತಿಂಗಳು ಸುಜಾತ ಕೃಷ್ಣಪ್ಪ, ಉಳಿದ 20 ತಿಂಗಳು ಅಧ್ಯಕ್ಷರು ಯಾರಾರಯಗಬೇಕು ಎಂಬ ತೀರ್ಮಾನ ಪಕ್ಷ ಮಾಡುತ್ತದೆ ಎಂದು ಕೋರ್ ಕಮಿಟಿಯಲ್ಲಿ ನಿರ್ಧರಿಸಲಾಗಿತ್ತು. ಈಗ, ಸುಜಾತ ಕೃಷ್ಣಪ್ಪ ಅವರು ರಾಜಿನಾಮೆ ನೀಡಿದರೆ ಮುಂದಿನ ಅವಧಿಗೆ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಲು ಪಕ್ಷ ಒಪ್ಪಿಗೆ ಸೂಚಿಸಿದೆ ಎಂದು ಚೈತ್ರಶ್ರೀ ತಿಳಿಸಿದರು.
ಜಿಪಂ ಅಧ್ಯಕ್ಷರ ರಾಜಿನಾಮೆ ವಿಚಾರ ಸಾರ್ವಜನಿಕವಾಗಿ ಚರ್ಚೆ ಆಗುತ್ತಿರುವುದು ನೋಡಿದರೆ ಪಕ್ಷಕ್ಕೆ ಮತ್ತು ನಮಗೂ ಮುಜುಗರ ಉಂಟಾಗುತ್ತಿದೆ. ಪಕ್ಷದ ಜತೆಯಲ್ಲಿ ಅಧ್ಯಕ್ಷರು ಮಾತುಕತೆ ನಡೆಸಿ ಉತ್ತಮವಾದ ತೀರ್ಮಾನಕ್ಕೆ ಬರಬೇಕೆಂದು ಮನವಿ ಮಾಡಿದರು.