Asianet Suvarna News Asianet Suvarna News

ದಸರಾ ಗಜಪಡೆ ಬಗ್ಗೆ ಒಂದಿಷ್ಟು ಮಾಹಿತಿ

ಮೊದಲ ತಂಡದಲ್ಲಿ ಅರ್ಜುನ, ವರಲಕ್ಷ್ಮೀ, ಚೈತ್ರಾ, ಗೋಪಿ, ವಿಕ್ರಮ ಮತ್ತು ಧನಂಜಯ ಆನೆಗಳು ಆಗಮಿಸಿವೆ. 2ನೇ ತಂಡದಲ್ಲಿ ಬಲರಾಮ, ಅಭಿಮನ್ಯು, ಗೋಪಾಲಸ್ವಾಮಿ, ದ್ರೋಣ, ಕಾವೇರಿ ಮತ್ತು ವಿಜಯ ಆನೆಗಳು ಆಗಮಿಸಲಿವೆ.

Gajapayana Heralds Start Of Mysuru Dasara 2018
Author
Bengaluru, First Published Sep 3, 2018, 5:08 PM IST

ಮೈಸೂರು[ಸೆ.03]: ನಾಡಹಬ್ಬ ದಸರಾ ಮಹೋತ್ಸವಕ್ಕೆ ಮೊದಲ ತಂಡದಲ್ಲಿ 6 ಆನೆಗಳು ಆಗಮಿಸಿವೆ. ಈ ಬಾರಿ ದಸರೆಗೆ ಒಟ್ಟು 12 ಆನೆಗಳು ಆಗಮಿಸಲಿದ್ದು, ಎರಡು ತಂಡಗಳಲ್ಲಿ ತಲಾ 6 ಆನೆಗಳು ಕಾಡಿನಿಂದ ನಾಡಿಗೆ ಆಗಮಿಸಲಿವೆ.

ಮೊದಲ ತಂಡದಲ್ಲಿ ಅರ್ಜುನ, ವರಲಕ್ಷ್ಮೀ, ಚೈತ್ರಾ, ಗೋಪಿ, ವಿಕ್ರಮ ಮತ್ತು ಧನಂಜಯ ಆನೆಗಳು ಆಗಮಿಸಿವೆ. 2ನೇ ತಂಡದಲ್ಲಿ ಬಲರಾಮ, ಅಭಿಮನ್ಯು, ಗೋಪಾಲಸ್ವಾಮಿ, ದ್ರೋಣ, ಕಾವೇರಿ ಮತ್ತು ವಿಜಯ ಆನೆಗಳು ಆಗಮಿಸಲಿವೆ. ಈ ಬಾರಿಯ ಗಜಪಡೆಗೆ ಧನಂಜಯ ಆನೆಯು ಹೊಸ ಸೇರ್ಪಡೆಯಾಗಿದ್ದು, ಮೊದಲ ತಂಡದಲ್ಲಿ ಕಾಡಿನಿಂದ ನಾಡಿಗೆ ಆಗಮಿಸಿದೆ ಎಂದು ದಸರಾ ಆನೆ ವೈದ್ಯ ಡಾ. ಡಿ.ಎನ್. ನಾಗರಾಜು ತಿಳಿಸಿದ್ದಾರೆ.

ಮೊದಲ ತಂಡದ 6 ಆನೆಗಳು ಕಾಡಿನಿಂದ ನಾಡಿಗೆ ಆಗಮಿಸಿ, ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಬಿಡಾರ ಹೂಡಿವೆ.

ಅರ್ಜುನ 

58 ವರ್ಷ, ಶರೀರದ ಎತ್ತರ-2.95 ಮೀಟರ್, ಶರೀರದ ಉದ್ದ- 3.75 ಮೀಟರ್, ಆನೆ ಶಿಬಿರ- ಬಳ್ಳೆ ಆನೆ ಶಿಬಿರ, ಅಂದಾಜು ತೂಕ- 5500 ರಿಂದ 5870 ಕೆ.ಜಿ.
ಗುಣ ಲಕ್ಷಣಗಳು- ಅರ್ಜುನ ಆನೆಯನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಹಲವು ವರ್ಷಗಳಿಂದ ದಸರೆಯಲ್ಲಿ ಭಾಗವಹಿಸುತ್ತಿದ್ದು, 2012 ರಿಂದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿ ನಿರ್ವಹಿಸುತ್ತಿದೆ. 
ಮಾವುತ- ವಿನು, ಕಾವಾಡಿ- ಸಣ್ಣಪ್ಪ.

ವರಲಕ್ಷ್ಮೀ
62 ವರ್ಷ, ಶರೀರದ ಎತ್ತರ- 2.46 ಮೀಟರ್, ಶರೀರದ ಉದ್ದ- 3.34 ಮೀಟರ್, ಆನೆ ಶಿಬಿರ- ಮತ್ತಿಗೊಡು, ಅಂದಾಜು ತೂಕ- 3325 ಕೆ.ಜಿ. ಗುಣ ಲಕ್ಷಣಗಳು- ಈ ಆನೆಯು ತುಂಬಾ ಸಾಧು ಸ್ವಭಾವದಾಗಿದ್ದು, ಇದನ್ನು 1977ರಲ್ಲಿ ಕಾಕನಕೋಟೆಯಲ್ಲಿ ಸೆರೆ ಹಿಡಿಯಲಾಗಿದೆ. ಈ ಆನೆಯು 10ನೇ ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಲಿದೆ.
ಮಾವುತ - ಜೆ.ಕೆ. ರವಿ, ಕಾವಾಡಿ - ಮಾದೇಶ.

ಗೋಪಿ
36 ವರ್ಷ, ಶರೀರದ ಎತ್ತರ- 2.92 ಮೀಟರ್, ಶರೀರದ ಉದ್ದ- 3.42 ಮೀಟರ್, ಅಂದಾಜು ತೂಕ- 3710 ಕೆ.ಜಿ., ದುಬಾರೆ ಆನೆ ಶಿಬಿರ. ಈ ಆನೆಯನ್ನು 1993ರಲ್ಲಿ ಕಾರೇಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ದುಬಾರೆ ಆನೆ ಶಿಬಿರದಲ್ಲಿ ಸಫಾರಿ ಕೆಲಸ ನಿರ್ವಹಿಸುತ್ತಿರುವ ಈ ಆನೆಯು 8ನೇ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿದೆ. 
ಮಾವುತ- ನವೀದ್, ಕಾವಾಡಿ- ಅಪ್ಪಯ್ಯ.

ವಿಕ್ರಮ
45 ವರ್ಷ, ಶರೀರದ ಎತ್ತರ- 2.60 ಮೀಟರ್, ಶರೀರದ ಉದ್ದ- 3.43 ಮೀಟರ್. ಅಂದಾಜು ತೂಕ- 3820 ಕೆ.ಜಿ. ದುಬಾರೆ ಆನೆ ಶಿಬಿರ. ಈ ಆನೆಯನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, 14ನೇ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿದೆ. 2015ನೇ ಸಾಲಿನಿಂದ ಪಟ್ಟದ ಆನೆಯಾಗಿ ಅರಮನೆಯ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸುತ್ತಿದೆ.
ಮಾವುತ- ಪುಟ್ಟ, ಕಾವಾಡಿ- ಹೇಮಂತಕುಮಾರ್.

ಧನಂಜಯ
35 ವರ್ಷ, ಶರೀರದ ಎತ್ತರ- 2.78 ಮೀಟರ್, ಶರೀರದ ಉದ್ದ- 3.48 ಮೀಟರ್, ಅಂದಾಜು ತೂಕ- 3900 ರಿಂದ 4050 ಕೆ.ಜಿ. ಈ ಆನೆಯನ್ನು 2013ರಲ್ಲಿ ಹಾಸನ ಜಿಲ್ಲೆಯ ಯಸಳೂರು ವಲಯ ವ್ಯಾಪ್ತಿಯಲ್ಲಿ ಸೆರೆ ಹಿಡಿಯಲಾಗಿದ್ದು, ಇದು ಬಲಿಷ್ಠವಾದ ಆನೆಯಾಗಿದೆ. ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಗಳಲ್ಲಿ ಭಾಗವಹಿಸುತ್ತಿದೆ. ಇದೇ ಮೊದಲ ಬಾರಿ ದಸರಾದಲ್ಲಿ ಭಾಗವಹಿಸುತ್ತಿದೆ. 
ಮಾವುತ- ಜೆ.ಸಿ. ಭಾಸ್ಕರ್,ಕಾವಾಡಿ- ಜೆ.ಬಿ. ಸೂನ್ಯ.

ಚೈತ್ರಾ
47 ವರ್ಷ, ಶರೀರದ ಎತ್ತರ- 2.52 ಮೀಟರ್, ಶರೀರದ ಉದ್ದ- 3.62 ಮೀಟರ್, ಅಂದಾಜು ತೂಕ- 3600 ಕೆ.ಜಿ. ಈ ಆನೆಯು ಶಾಂತ ಸ್ವಭಾವದಾಗಿದ್ದು, ಇದು ಅರಣ್ಯ ಇಲಾಖೆಯ ಆನೆ ಶಿಬಿರದಲ್ಲಿ ಗಂಗೆ ಆನೆಯ ಮರಿಯಾಗಿದೆ. 5ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ.
ಮಾವುತ- ಮಹದೇವ, ಕಾವಾಡಿ- ಕಲೀಂ.

ಗಜಪಯಣ ಹಿನ್ನೆಲೆ
ಮೈಸೂರನ್ನು ಆಳಿದ ರಾಜಮಹಾರಾಜರ ಕಾಲದಲ್ಲಿ ಆನೆಗಳನ್ನು ಕಾಡಿನಿಂದ ನಾಡಿಗೆ ನಾಗರಹೊಳೆಯಿಂದ ಗಜಪಯಣದ ಹೆಸರಿನಲ್ಲಿ ಕರೆ ತರಲಾಗುತ್ತಿತ್ತು. ನಂತರ ಈ ಸಂಪ್ರದಾಯ ನಿಂತು ಹೋಗಿ, ಆನೆಗಳನ್ನು ನೇರವಾಗಿ ವಿವಿಧ ಶಿಬಿರಗಳಲ್ಲಿ ಲಾರಿಗಳಲ್ಲಿ ಮೈಸೂರಿಗೆ ತಂದು, ಅರಮನೆಯಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಗುತ್ತಿತ್ತು. 

2003ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್. ವಿಶ್ವನಾಥ್ ಅವರು ಗಜಪಯಣವನ್ನು ಮತ್ತೆ ಆರಂಭಿಸಿದರು. ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಮರು ವರ್ಷದಿಂದ ಗಜಪಯಣದ ನಂತರ ಆನೆಗಳನ್ನು ನೇರವಾಗಿ ಲಾರಿಯಲ್ಲಿ ಮೈಸೂರಿಗೆ ಕರೆತರಲಾಗುತ್ತದೆ. 2003ರಿಂದಲೂ ನಾಗರಹೊಳೆ ಭಯಾರಣ್ಯದ ಹೆಬ್ಬಾಗಿಲು ವೀರನಹೊಸಹಳ್ಳಿ ಯಿಂದ ಗಜಪಯಣ ಆರಂಭಿಸ ಲಾಗುತ್ತಿತ್ತು. ಆದರೆ, 2012ರಿಂದ 2017ರವರೆಗೆ ವೀರನಹೊಸಹಳ್ಳಿ ಯಿಂದ ೪ ಕಿ.ಮೀ. ದೂರದಲ್ಲಿ ರುವ ನಾಗಾಪುರ- 1ನೇ ಬ್ಲಾಕ್‌ನ ಸರ್ಕಾರಿ ಗಿರಿಜನ ಆಶ್ರಮ ಶಾಲೆಯ ಬಳಿ ಗಜಪಯಣ ಆರಂಭಿಸಲಾಗುತ್ತಿತ್ತು. ಈ ವರ್ಷ ಮತ್ತೆ ವೀರನಹೊಸಹಳ್ಳಿ ಬಳಿ ಗಜಪಯಣಕ್ಕೆ ಚಾಲನೆ ನೀಡುವ ಮೂಲಕ ಹಳೆಯ ಸಂಪ್ರದಾಯವನ್ನು ಮುಂದುವರಿಸಲಾಯಿತು.
 

Follow Us:
Download App:
  • android
  • ios