ಯುವಕರಿಗೆ ಉಚಿತವಾಗಿ ಅಗ್ನಿವೀರ ಮತ್ತು ಸೇನಾ ತರಬೇತಿ ನೀಡಲಾಗುತ್ತಿದೆ. ದೇವರಾಜ ಸರ್ಜ ದೇಸಾಯಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಶಿಬಿರದಲ್ಲಿ ಈಗಾಗಲೇ 50ಕ್ಕೂ ಹೆಚ್ಚು ಯುವಕರು ಸೇನೆಗೆ ಆಯ್ಕೆಯಾಗಿದ್ದಾರೆ. ಪ್ರಸ್ತುತ 100 ಯುವಕರು ತರಬೇತಿ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮಹಿಳೆಯರಿಗೂ ಉಚಿತ ತರಬೇತಿ ನೀಡುವ ಗುರಿ ಹೊಂದಲಾಗಿದೆ.
ವಿಶೇಷ ವರದಿ
ಗದಗ: ಇವತ್ತಿನ ಸ್ಪರ್ಧಾತ್ಮಕ ಹಾಗೂ ವಾಣಿಜ್ಯಯುಗದಲ್ಲಿ ಎಲ್ಲವನ್ನೂ ಹಣದ ಮಾನದಂಡದಿಂದಲೇ ಅಳೆಯಲಾಗುತ್ತದೆ. ಆದರೆ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ದೇಶಸೇವೆಯೇ ಪರಮೋಚ್ಚ ಧರ್ಮವೆಂದು ನಂಬಿ ಯುವಕರಿಗೆ ತಿಂಗಳಗಟ್ಟಲೇ ಉಚಿತವಾಗಿ ಸೇನಾ ತರಬೇತಿ ನೀಡುತ್ತಿರುವ ವಿಜಯ ಮಾರ್ಗ ಟ್ರಸ್ಟ್ ಕಾರ್ಯ ಮೆಚ್ಚುವಂತದ್ದಾಗಿದೆ.
ಯುವಜನತೆಯನ್ನು ಸೈನ್ಯಕ್ಕೆ ಕಳುಹಿಸುವ ಮೂಲಕ ದೇಶಸೇವೆಯ ಕಾಯಕ
ವಿಜಯ ಮಾರ್ಗ ಟ್ರಸ್ಟ್ ಅಧ್ಯಕ್ಷ ತಾಲೂಕಿನ ಇಟಗಿ ಗ್ರಾಮದ ದೇವರಾಜ ಸರ್ಜ (ಮಲ್ಲಸರ್ಜ) ದೇಸಾಯಿ. ರಾಣಿ ಕಿತ್ತೂರ ಚೆನ್ನಮ್ಮ ಅವರ ವಂಶಸ್ಥರಾದ ಇವರು, ಬಿಇ ಪದವೀಧರರಾಗಿದ್ದು, ಗ್ರಾಮೀಣ ಪ್ರದೇಶದ ಯುವಜನತೆಯನ್ನು ಸೈನ್ಯಕ್ಕೆ ಕಳುಹಿಸುವ ಮೂಲಕ ದೇಶಸೇವೆಯ ಕಾಯಕ ಕೈಗೊಂಡಿದ್ದಾರೆ.
ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೇರಿ-ಇಟಗಿ ಮಠದ ಶ್ರೀಗಳ ಸಾಥ್
ಇಂದಿನ ಶ್ರೀಮಂತ ಯುವಕರು ಐಷಾರಾಮಿ ಜೀವನದತ್ತ ವಾಲುತ್ತಿರುವ ಕಾಲದಲ್ಲಿ, ಸಮಾಜಕ್ಕೆ ಏನನ್ನಾದರಿ ಸೇವೆ ಸಲ್ಲಿಸಬೇಕು ಎಂಬ ಮಹದಾಸೆ ಹೊಂದಿ, ತಮ್ಮ ಸ್ವಂತ ಖರ್ಚಿನಲ್ಲಿ ಉಚಿತ ಸೈನಿಕ ತರಬೇತಿ ನೀಡುತ್ತಿರುವುದು ಇಡೀ ಸಮಾಜಕ್ಕೆ ಮಾದರಿಯಾಗಿದೆ. ವಿಜಯ ಮಾರ್ಗ ಟ್ರಸ್ಟ್ ಕಾರ್ಯಕ್ಕೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೇರಿ-ಇಟಗಿ ಮಠದ ಶ್ರೀಗಳು ಸಾಥ್ ನೀಡಿದ್ದಾರೆ.
ಉಚಿತ ತರಬೇತಿ ಕೇಂದ್ರ-ತಮ್ಮ ಕುಟುಂಬದ ವಿಶಾಲವಾದ 4 ಎಕರೆ ಜಾಗೆಯಲ್ಲಿನ ತಮ್ಮ ಮನೆ ಮತ್ತು ವಟಾರವನ್ನು ತರಬೇತಿ ಶಾಲೆಯನ್ನಾಗಿ ಮಾರ್ಪಡಿಸಿ, ಯಾವುದೇ ಶುಲ್ಕವಿಲ್ಲದೆ ತರಬೇತಿ ನೀಡುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಇಲ್ಲಿ ಕಠಿಣ ತರಬೇತಿ ಪಡೆದ 50ಕ್ಕೂ ಹೆಚ್ಚು ಯುವಕರು ಭಾರತೀಯ ಸೇನೆ, ಅಗ್ನಿವೀರ ಹಾಗೂ ಇತರೆ ಸಶಸ್ತ್ರ ಪಡೆಗಳಿಗೆ ಆಯ್ಕೆಯಾಗಿದ್ದಾರೆ.
ಒಂದು ತಿಂಗಳವರೆಗೆ ತರಬೇತಿ
ಪ್ರಸ್ತುತ ಬ್ಯಾಚ್ 100 ಯುವಕರು- ರೋಣ ತಾಲೂಕು ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಸುಮಾರು 100 ಯುವಕರು ಪ್ರಸ್ತುತ ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸೆ.28ರಿಂದ ತರಬೇತಿ ಪ್ರಾರಂಭವಾಗಿದ್ದು, ಒಂದು ತಿಂಗಳವರೆಗೆ ತರಬೇತಿ ನೀಡಲಾಗುವದು. ಪ್ರತಿದಿನ ಬೆಳಗ್ಗೆ 4.30ರಿಂದ ಸಂಜೆ 7ರವರೆಗೆ ಶಿಸ್ತುಬದ್ಧವಾದ ದೈಹಿಕ ವ್ಯಾಯಾಮ, ಓಟ (ರನ್ನಿಂಗ್) ಹಾಗೂ ಲಿಖಿತ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಸಲಾಗುತ್ತದೆ. ಉಡುಪಿಯ
ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ತರಬೇತಿದಾರ ರವಿ ಶೆಟ್ಟಿ ಹಾಗೂ ಗುರುರಾಜ ಹೆಳವರ ಇಲ್ಲಿನ ಯುವಕರಿಗ ತರಬೇತಿ ನೀಡುತ್ತಿದ್ದಾರೆ. ವಿಜಯ ಮಾರ್ಗ ಟ್ರಸ್ಟ್ ಕಾರ್ಯವನ್ನು ಮೆಚ್ಚಿ ಹಾಲಕೇರಿ ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಶ್ರೀಗಳು ಈ ವರ್ಷದ ಬ್ಯಾಚ್ ಯುವಕರಿಗೆ ನಮ್ಮ ಮಠದಿಂದಲೇ ಉಪಾಹಾರ, ಊಟದ ವ್ಯಸಸ್ಥೆ ಕಲ್ಪಿಸಿದ್ದಾರೆ.
ಮುಂದಿನ ಬ್ಯಾಚ್ ಯುವತಿಯರಿಗೆ
ಯುವಕರ ತರಬೇತಿ ಬ್ಯಾಚ್ ಮುಗುದ ನಂತರ ಮುಂದಿನ ದಿನಗಳಲ್ಲಿ ಉಚಿತ ಮಹಿಳಾ ಸೈನಿಕ ತರಬೇತಿಯ ಕ್ಯಾಂಪ್ ಪ್ರಾರಂಭಿಸುವ ಗುರಿಯನ್ನೂ ದೇವರಾಜಸರ್ಜ ದೇಸಾಯಿ ಹೊಂದಿದ್ದಾರೆ.
ಕಳೆದ 2 ಬ್ಯಾಚ್ನಲ್ಲಿ ತರಬೇತಿ ಪಡೆದ ಯುವಕರಲ್ಲಿ 50ಕ್ಕೂ ಹೆಚ್ವು ಯುವಕರು ಸೇನೆ ಸೇರಿದ್ದು ನನಗೆ ಅಪಾರ ಸಂತೋಷ ತಂದಿದೆ. ತಮ್ಮ ತಂದೆ-ತಾಯಿ ಮತ್ತು ಶಾಲಾ ಗುರುಗಳಿಂದ ಕಲಿತ ಶಿಸ್ತು ಹಾಗೂ ದೇಶಪ್ರೇಮದ ಪಾಠವನ್ನು ಇಂದಿನ ಯುವ ಪೀಳಿಗೆಗೆ ಧಾರೆಯೆರೆಯುತ್ತಿರುವೆ ಎನ್ನುತ್ತಾರೆ ವಿಜಯ ಮಾರ್ಗ ಟ್ರಸ್ಟ್ ಅಧ್ಯಕ್ಷ ದೇವರಾಜ ಸರ್ಜಾ ದೇಸಾಯಿ.
ಮೊದಲು ನಾನು ಸ್ವತಃ ಪ್ರ್ಯಾಕ್ಟಿಸ್ ಮಾಡುತ್ತಿದ್ದೆ, ಆದರೆ ಯಶಸ್ಸು ಸಿಕ್ಕಿರಲಿಲ್ಲ. ದೇವರಾಜ ಸರ್ಜಾ ದೇಸಾಯಿ ಅವರ ಸೈನಿಕ ತರಬೇತಿ ಕ್ಯಾಂಪ್ ಸೇರಿದ ಮೇಲೆ ಸೇನೆಗೆ ಸೇರಲು ಬೇಕಾದ ಎಲ್ಲಾ ಅರ್ಹತೆ ಸಿಕ್ಕಿದವು. ಸಾಧನೆಗೆ ಸರಿಯಾದ ಮಾರ್ಗದರ್ಶಕರು ಇರಬೇಕು ಎನ್ನುತ್ತಾರೆ ಸೇನೆಗೆ ಆಯ್ಕೆಯಾದ ಯುವಕ ಶಿವಾನಂದ ತೆಗ್ಗಿನಕೇರಿ.
ಅಗ್ನಿವೀರನಾಗಬೇಕೆಂಬ ನನ್ನ ಕನಸಿಗೆ ಇಟಗಿಯ ಈ ತರಬೇತಿ ಕೇಂದ್ರ ಆಸರೆಯಾಗಿದೆ. ಹೊರಗಡೆ ದುಬಾರಿ ಶುಲ್ಕವಿರುವಾಗ, ಇಲ್ಲಿ ಉಚಿತವಾಗಿ ಅತ್ಯುತ್ತಮ ತರಬೇತಿ ಸಿಗುತ್ತಿರುವುದು ನಮ್ಮಂತಹ ಗ್ರಾಮೀಣ ಯುವಕರಿಗೆ ದೊಡ್ಡ ವರವಾಗಿದೆ ಎನ್ನುತ್ತಾರೆ ಸೇನಾ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿ ಬಸನಗೌಡ ಪಾಟೀಲ.


