ಪ್ಯಾಸೆಂಜರ್ ರೈಲಿನ ವೇಗ, ನಿಲುಗಡೆ ಮತ್ತು ಸಮಯದಲ್ಲಿ ಬದಲಾವಣೆ ಮಾಡದೆ ಎಕ್ಸ್ಪ್ರೆಸ್ ದರ ವಸೂಲಿ ಮಾಡಿದ್ದ ರೈಲ್ವೆ ಇಲಾಖೆಗೆ ಗ್ರಾಹಕ ಆಯೋಗ ದಂಡ ವಿಧಿಸಿದೆ. ಕಾರವಾರದಿಂದ ಮಂಗಳೂರು ಸೆಂಟ್ರಲ್ಗೆ ಪ್ರಯಾಣಿಸಿದ್ದ ಪ್ರಯಾಣಿಕನೊಬ್ಬರಿಗೆ ಹೆಚ್ಚುವರಿ ದರ ವಿಧಿಸಿದ್ದಕ್ಕಾಗಿ ಪರಿಹಾರ ನೀಡಲು ಆದೇಶಿಸಲಾಗಿದೆ.
ಬೆಂಗಳೂರು (ನ.14): ಸಾಮಾನ್ಯ ಪ್ಯಾಸೆಂಜರ್ ರೈಲಿನ ವೇಗ, ನಿಲುಗಡೆ ಮತ್ತು ಸಮಯದಲ್ಲಿ ಯಾವುದೇ ಬದಲಾವಣೆ ಮಾಡದೆ, ಕೇವಲ ಎಕ್ಸ್ಪ್ರೆಸ್ ಸ್ಪೆಷಲ್ ಎಂಬ ಹೆಸರಿಟ್ಟು ಪ್ರಯಾಣಿಕರಿಂದ ಹೆಚ್ಚುವರಿ ಟಿಕೆಟ್ ದರ ವಸೂಲಿ ಮಾಡಿದ್ದ ದಕ್ಷಿಣ ರೈಲ್ವೆ (Southern Railway) ಹಾಗೂ ರೈಲ್ವೆ ಮಂಡಳಿಗೆ (Railway Board) ಗ್ರಾಹಕ ನ್ಯಾಯಾಲಯ ಬಿಸಿ ಮುಟ್ಟಿಸಿದೆ: ಕಾರವಾರದಿಂದ ಮಂಗಳೂರು ಸೆಂಟ್ರಲ್ಗೆ ಪ್ರಯಾಣಿಸಿದ್ದ ಪ್ರಯಾಣಿಕನೊಬ್ಬರಿಗೆ ₹65 ರ ಬದಲು ₹125 'ಎಕ್ಸ್ಪ್ರೆಸ್ ದರ' ವಿಧಿಸಿದ್ದಕ್ಕಾಗಿ, ಅವರಿಗೆ ಒಟ್ಟು ₹5,330 ಪಾವತಿಸುವಂತೆ ತಮಿಳುನಾಡಿನ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ಆದೇಶ ಹೊರಡಿಸಿದೆ.
ಆಯೋಗದ ಅಧ್ಯಕ್ಷ ಪಿ. ಗಣೇಶ್ರಾಮ್ ಹಾಗೂ ಸದಸ್ಯರಾದ ಆರ್. ರಮೋಲಾ ಮತ್ತು ಎನ್. ಲಕ್ಷ್ಮಣನ್ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪು ನೀಡಿದೆ. 2024ರಲ್ಲಿ ತಾವು ಮೂರು ಬಾರಿ ಕಾರವಾರದಿಂದ ಮಂಗಳೂರು ಸೆಂಟ್ರಲ್ಗೆ ಒಂದೇ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸಿದ್ದು, ಪ್ರತಿ ಬಾರಿಯೂ ಸಾಮಾನ್ಯ ಪ್ಯಾಸೆಂಜರ್ ದರವಾದ ₹65 ರ ಬದಲಾಗಿ ₹125 ಎಕ್ಸ್ಪ್ರೆಸ್ ದರ ವಸೂಲಿ ಮಾಡಲಾಗಿದೆ ಎಂದು ದೂರುದಾರರು ಆಯೋಗದ ಮೊರೆ ಹೋಗಿದ್ದರು.
"ಪ್ರತಿವಾದಿಗಳಾದ ವಾಣಿಜ್ಯ ಗುಮಾಸ್ತರು ಮತ್ತು ದಕ್ಷಿಣ ರೈಲ್ವೆಯು ಸಾಮಾನ್ಯ ಪ್ಯಾಸೆಂಜರ್ ರೈಲಿನ ನಿಲುಗಡೆ, ವೇಗ, ಸಮಯ, ವೈಶಿಷ್ಟ್ಯಗಳು ಮತ್ತು ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡದೆ ಅದನ್ನು ಎಕ್ಸ್ಪ್ರೆಸ್ ಸ್ಪೆಷಲ್ ಹೆಸರಿನಲ್ಲಿ ಓಡಿಸಿ, ದೂರುದಾರರಿಂದ ₹65 ರ ಬದಲು ₹125 ವಸೂಲಿ ಮಾಡಿರುವುದು ಸ್ಪಷ್ಟ ಸೇವಾ ನ್ಯೂನತೆ (Deficiency of service) ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿಯಾಗಿದೆ (Unfair trade practice)" ಎಂದು ಸೆಪ್ಟೆಂಬರ್ 17ರ ಆದೇಶದಲ್ಲಿ ಆಯೋಗ ಕಟುವಾಗಿ ಟೀಕಿಸಿದೆ.
ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣ, ಎಕ್ಸ್ಪ್ರೆಸ್ ದರ ವಸೂಲಿ
ದೂರುದಾರರು ಆಯೋಗದ ಮುಂದೆ ಖುದ್ದಾಗಿ ಹಾಜರಾಗಿ ತಮ್ಮ ವಾದ ಮಂಡಿಸಿದ್ದರು. ಕೋವಿಡ್-19 ಸಾಂಕ್ರಾಮಿಕಕ್ಕೂ ಮುನ್ನ ಈ ರೈಲು ಸಾಮಾನ್ಯ ಪ್ಯಾಸೆಂಜರ್ ರೈಲಾಗಿ ಸಂಚರಿಸುತ್ತಿತ್ತು, ಆದರೆ ಕೋವಿಡ್ ನಂತರ ಇದನ್ನು 'ಎಕ್ಸ್ಪ್ರೆಸ್ ಸ್ಪೆಷಲ್' ಹೆಸರಿನಲ್ಲಿ ಓಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು. 2024ರ ಏಪ್ರಿಲ್ನಂದು ಕಾರವಾರದಿಂದ ಮಂಗಳೂರು ಸೆಂಟ್ರಲ್ಗೆ ಒಬ್ಬರೇ ಪ್ರಯಾಣಿಸಿದಾಗ ಕರ್ತವ್ಯದಲ್ಲಿದ್ದ ವಾಣಿಜ್ಯ ಗುಮಾಸ್ತರು ಪ್ಯಾಸೆಂಜರ್ ದರ ₹65 ರ ಬದಲು ಎಕ್ಸ್ಪ್ರೆಸ್ ದರವಾದ ₹125 ರ ಟಿಕೆಟ್ ನೀಡಿದ್ದರು. ಮೇ 2024ರಂದು ತಮ್ಮ ಪತ್ನಿ, ಪುತ್ರ ಮತ್ತು ಪುತ್ರಿಯೊಂದಿಗೆ ಅದೇ ರೈಲಿನಲ್ಲಿ ಪ್ರಯಾಣಿಸಿದಾಗ ಮೂವರು ವಯಸ್ಕರು ಹಾಗೂ ಒಂದು ಮಗುವಿಗೆ ಎಕ್ಸ್ಪ್ರೆಸ್ ದರ ಲೆಕ್ಕ ಹಾಕಿ ₹440 ವಸೂಲಿ ಮಾಡಲಾಗಿತ್ತು. ಆಗಸ್ಟ್ 2024ರಂದು ಮತ್ತೆ ಒಬ್ಬರೇ ಅದೇ ಮಾರ್ಗದಲ್ಲಿ ಸಂಚರಿಸಿದಾಗ ಪುನಃ ₹125 ಟಿಕೆಟ್ ನೀಡಲಾಗಿತ್ತು. ಪ್ರತಿ ಬಾರಿಯೂ ಹೆಚ್ಚುವರಿ ದರ ವಸೂಲಿ ಬಗ್ಗೆ ಸ್ಟೇಷನ್ ಮಾಸ್ಟರ್ಗೆ ದೂರು ನೀಡಿದ್ದರೂ ಪ್ರಯೋಜನವಾಗಿರಲಿಲ್ಲ.
ರೈಲ್ವೆ ಇಲಾಖೆಯ ಸಮರ್ಥನೆ ಏನಾಗಿತ್ತು?
ವಿಚಾರಣೆ ವೇಳೆ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದ ರೈಲ್ವೆ ಇಲಾಖೆ, ಕೋವಿಡ್ಗೂ ಮುನ್ನ ಪ್ಯಾಸೆಂಜರ್ ಆಗಿದ್ದ ರೈಲನ್ನು ನಂತರ 'ವಿಶೇಷ ರೈಲು' (Special train) ಆಗಿ ಮೇಲ್ದರ್ಜೆಗೇರಿಸಿ ಅದಕ್ಕೆ ತಕ್ಕಂತೆ ದರ ನಿಗದಿಪಡಿಸಲಾಗಿದೆ ಎಂದಿತ್ತು. ಪ್ಯಾಸೆಂಜರ್ ರೈಲನ್ನು ವಿಶೇಷ ರೈಲು ಎಂದು ಘೋಷಿಸುವ ಅಧಿಕಾರ ರೈಲ್ವೆ ಮಂಡಳಿಗಿದೆ, ಇದು ಆಡಳಿತಾತ್ಮಕ ಮತ್ತು ನೀತಿ ನಿರ್ಧಾರವಾಗಿದ್ದು ಇದನ್ನು ಪ್ರಶ್ನಿಸುವ ಹಕ್ಕು ದೂರುದಾರರಿಗಿಲ್ಲ ಎಂದು ರೈಲ್ವೆ ವಾದಿಸಿತ್ತು.
'ಹೆಸರು ಮುಖ್ಯವಲ್ಲ, ಸೌಲಭ್ಯ ಮುಖ್ಯ' – ಆಯೋಗದ ಚಾಟಿ
ರೈಲ್ವೆ ಇಲಾಖೆಯ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿದ ಗ್ರಾಹಕ ಆಯೋಗ, ಕೇವಲ ರೈಲಿಗೆ 'ಎಕ್ಸ್ಪ್ರೆಸ್ ಸ್ಪೆಷಲ್ ಟ್ರೈನ್' ಎಂದು ಹೆಸರಿಟ್ಟ ಮಾತ್ರಕ್ಕೆ ಪ್ರಯಾಣಿಕರಿಂದ ಎಕ್ಸ್ಪ್ರೆಸ್ ದರ ವಸೂಲಿ ಮಾಡುವ ಹಕ್ಕು ರೈಲ್ವೆಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿತು. "ಪ್ರಯಾಣಿಕರಿಂದ ಎಕ್ಸ್ಪ್ರೆಸ್ ದರ ವಸೂಲಿ ಮಾಡುವಾಗ, ಅವರಿಗೆ ವಿಶೇಷ ಎಕ್ಸ್ಪ್ರೆಸ್ ರೈಲಿನ ಸೌಲಭ್ಯಗಳು ಮತ್ತು ವೈಶಿಷ್ಟ್ಯಗಳನ್ನು ಸಹ ಒದಗಿಸಬೇಕು" ಎಂದು ಆಯೋಗ ಹೇಳಿದೆ.
2022ರ ಮಾರ್ಚ್ 31ರಂದೇ ಭಾರತ ಸರ್ಕಾರವು ಕೋವಿಡ್-19 ನಿರ್ಬಂಧಗಳನ್ನು ಸಂಪೂರ್ಣವಾಗಿ ಹಿಂಪಡೆದಿದೆ ಎಂಬುದನ್ನು ಉಲ್ಲೇಖಿಸಿದ ಆಯೋಗ, ವಿಶೇಷ ಸಂದರ್ಭಗಳಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ವಲಯ ರೈಲ್ವೆಗಳು ವಿಶೇಷ ರೈಲುಗಳನ್ನು ಓಡಿಸುತ್ತವೆ. ಆದರೆ, ಕೊಂಕಣ ಭಾಗದಲ್ಲಿ ಯಾವ ಹಬ್ಬ ಅಥವಾ ವಿಶೇಷ ಸಂದರ್ಭವೂ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ನಡೆದಿಲ್ಲ. ಹೀಗಿರುವಾಗ ಎರಡು ವರ್ಷಕ್ಕೂ ಅಧಿಕ ಕಾಲ ಈ ರೈಲನ್ನು 'ವಿಶೇಷ ರೈಲು' ಎಂದು ಓಡಿಸಿರುವುದನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ರೈಲಿನ ವೇಗ, ಸಮಯ, ನಿಲುಗಡೆ ಅಥವಾ ಇತರ ಯಾವುದೇ ಸೌಲಭ್ಯಗಳಲ್ಲಿ ಬದಲಾವಣೆ ಮಾಡದೆ ಎರಡು ವರ್ಷಕ್ಕೂ ಹೆಚ್ಚು ಕಾಲ ಎಕ್ಸ್ಪ್ರೆಸ್ ದರ ವಸೂಲಿ ಮಾಡಿರುವುದು ತಪ್ಪು ಎಂದು ಆಯೋಗ ತೀರ್ಮಾನಿಸಿದೆ.
ದಕ್ಷಿಣ ರೈಲ್ವೆಗೆ ₹5,330 ಪಾವತಿಸಲು ಆದೇಶ
ದೂರುದಾರರು ಮತ್ತು ಅವರ ಕುಟುಂಬದಿಂದ ಹೆಚ್ಚುವರಿಯಾಗಿ ವಸೂಲಿ ಮಾಡಲಾದ ₹330 ಟಿಕೆಟ್ ಹಣವನ್ನು ಮರಳಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಆಯೋಗ ನಿರ್ದೇಶಿಸಿದೆ. ಇದರೊಂದಿಗೆ, ಸೇವಾ ನ್ಯೂನತೆ ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿಗಾಗಿ ₹3,000 ಮತ್ತು ದೂರುದಾರರಿಗೆ ಉಂಟಾದ ಮಾನಸಿಕ ಹಿಂಸೆಗಾಗಿ ₹2,000 ಸೇರಿದಂತೆ ಒಟ್ಟು ₹5,330 ಪರಿಹಾರವನ್ನು ದಕ್ಷಿಣ ರೈಲ್ವೆ ಮತ್ತು ರೈಲ್ವೆ ಮಂಡಳಿ ಜಂಟಿಯಾಗಿ ಪಾವತಿಸಬೇಕು ಎಂದು ಆದೇಶಿಸಲಾಗಿದೆ.














