ಗದಗ ಜಿಲ್ಲೆಯ ಡಾ.ರಾಚೋಟೇಶ್ವರ ಸ್ವಾಮೀಜಿ ಅವರು 33 ದಿನಗಳ ಶಿವಯೋಗ ಸಮಾಧಿ ಅನುಷ್ಠಾನವನ್ನು ಪೂರ್ಣಗೊಳಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಗದಗ: ಸತತ 33 ದಿನಗಳ ಕಾಲ ಶಿವಯೋಗ ಸಮಾಧಿ ಅನುಷ್ಠಾನ ಕೈಗೊಂಡು ಪೂರ್ಣಗೊಳಿಸಿರುವ ಗದಗ ಜಿಲ್ಲೆಯ ಅಂತೂರ- ಬೆಂತೂರ ಗ್ರಾಮದ ಬೂದೀಶ್ವರ ಮಠದ ಡಾ.ರಾಚೋಟೇಶ್ವರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಗದಗ ಆಸ್ಪತ್ರೆಯಿಂದಲೇ ವೀಡಿಯೋ ಸಂದೇಶದ ಮೂಲಕ ಭಕ್ತರಿಗೆ ಧೈರ್ಯ ತುಂಬಿದ್ದಾರೆ.‘ಯಾರೂ ಆತಂಕಪಡುವ ಅಗತ್ಯವಿಲ್ಲ. ನಾನು ಆರೋಗ್ಯವಾಗಿದ್ದೇನೆ’ ಎಂದಿದ್ದಾರೆ. ಸುದೀರ್ಘ ಯೋಗಸಮಾಧಿಯ ಬಳಿಕವೂ ಸ್ವಾಮೀಜಿ ದೇಹದ ಸ್ಥಿತಿ ಸಹಜವಾಗಿರುವುದು ವೈದ್ಯರನ್ನು ಅಚ್ಚರಿಗೊಳಿಸಿದೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲ ಭಕ್ತರು ನೆಮ್ಮದಿಯಿಂದಿರಿ’ ಎಂದು ಮನವಿ ಮಾಡಿದ್ದಾರೆ.

ತೀವ್ರ ನಿಗಾಘಟಕದಲ್ಲಿರಿಸಿ ಚಿಕಿತ್ಸೆ

ಅಗತ್ಯ ಚಿಕಿತ್ಸೆ ಬಳಿಕ ಶೀಘ್ರದಲ್ಲೇ ಸಂಪೂರ್ಣ ಗುಣಮುಖರಾಗುವ ನಿರೀಕ್ಷೆ ಇದೆ . ಜಿಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ಮಾತನಾಡಿ, ಸ್ವಾಮೀಜಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತೀವ್ರ ನಿಗಾಘಟಕದಲ್ಲಿರಿಸಿ ಸಲೈನ್ ನೀಡಲಾಗಿದೆ. ಅವರ ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲ ಎಂದಿದ್ದಾರೆ.

ಲೋಕ ಕಲ್ಯಾಣಕ್ಕಾಗಿ ಯೋಗಸಮಾಧಿ

ಮಹದಾಯಿ ಯೋಜನೆ ಜಾರಿ ಸೇರಿದಂತೆ ಜಗತ್ತಿನ ಕಲ್ಯಾಣಕ್ಕಾಗಿ ಜೂನ್ 3ರ ಮಧ್ಯರಾತ್ರಿ ಗದಗದ ಜಿಲ್ಲೆಯಲ್ಲಿರುವ ರಾಚೂಟೇಶ್ವರ ಸ್ವಾಮೀಜಿಯವರು ಸಮಾಧಿ ಸ್ಥಿತಿಗೆ ಹೋಗಿದ್ದರು. 33 ದಿನಗಳ ಬಳಿಕ ಸಮಾಧಿಯಿಂದ ಹೊರಗೆ ಬಂದು ಭಕ್ತರಿಗೆ ದರ್ಶನ ನೀಡಿದ್ದಾರೆ. ಅನ್ನ, ನೀರು, ಗಾಳಿ ಮತ್ತು ಬೆಳಕಿಲ್ಲದೆ ಸತತ 775 ಗಂಟೆಗಳ ಕಾಲ ಸ್ವಾಮೀಜಿಗಳು ಯೋಗಸಮಾಧಿಯಲ್ಲಿದ್ದರು ಎಂದು ಭಕ್ತರು ಹೇಳುತ್ತಿದ್ದಾರೆ.