ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ ಮತ್ತು ಅದರ ಉಪನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದಾಗಿ ಚಿಕ್ಕೋಡಿ ತಾಲೂಕಿನ ಏಳು ಕೆಳಹಂತದ ಸೇತುವೆಗಳು ಜಲಾವೃತವಾಗಿದ್ದು, ಮರಗಳು ಉರುಳಿಬಿದ್ದ ಘಟನೆಗಳು ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಮಲಪ್ರಭಾ ನದಿಗೆ ಮತ್ತೆ ಜೀವಕಳೆ ಬಂದಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಬೆಳಗಾವಿ: ಆರಂಭದಲ್ಲಿ ಕ್ಷೀಣಗೊಂಡಿದ್ದ ಮುಂಗಾರು ಈಗ ತನ್ನ ಚುರುಕು ಪಡೆದು ಆರ್ಭಟಿಸುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿಸಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ ಹಾಗೂ ಅದರ ಉಪನದಿಗಳ ನೀರಿನ ಹರಿವು ಗಣನೀಯವಾಗಿ ಏರಿಕೆಯಾಗಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸುಮಾರು 78 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ಜಿಲ್ಲೆಯ ಹಲವು ಕೆಳಹಂತದ ಸೇತುವೆಗಳು ಜಲಾವೃತವಾಗಿವೆ.
ದೂಧಗಂಗಾ, ವೇದಗಂಗಾ ಸೇರಿದಂತೆ ಕೃಷ್ಣಾ ಉಪನದಿಗಳು, ಮಲಪ್ರಭಾ ಮೈದುಂಬಿ ಹರಿಯುತ್ತಿವೆ. ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ಕರದಗಾ-ಭೋಜ, ಭಾರವಾಡ-ಕುಣ್ಣೂರ, ಅಕ್ಕೋಳ-ಸಿದ್ನಾಳ, ಯಡೂರು-ಕಲ್ಲೋಳ, ಜತ್ರಾಟ- ಭೀವಶಿ, ಭೋಜವಾಡಿ- ಗಜಭರವಾಡಿ, ಮಲಿಕವಾಡ- ದತ್ತವಾಡ ಹಾಗೂ ಮಾಂಜರಿ-ಭಾವನಸೌಂದತ್ತಿ ಸೇರಿದಂತೆ ಏಳಕ್ಕೂ ಹೆಚ್ಚು ಕೆಳಹಂತದ ಸೇತುವೆಗಳು ಜಲಾವೃತವಾಗಿವೆ.
ಸದ್ಯ ನದಿಗಳ ನೀರಿನ ಮಟ್ಟ ಏರಿಕೆಯಲ್ಲಿದ್ದರೂ, ನದಿ ತೀರದ ಗ್ರಾಮಗಳಲ್ಲಿ ಆತಂಕದ ಪರಿಸ್ಥಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿರುವುದರಿಂದ ಪರಿಸ್ಥಿತಿಯ ಮೇಲೆ ನಿರಂತರ ನಿಗಾ ವಹಿಸಲಾಗಿದೆ.
ಚಿಕ್ಕೋಡಿ ತಾಲೂಕಿನ ಮಲಿಕವಾಡ ಬಳಿ ದೂಧಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೂ ಕೆಲವರು ನಿರ್ಲಕ್ಷ್ಯ ಪ್ರದರ್ಶಿಸುತ್ತಿದ್ದಾರೆ. ನಡುಮಟ್ಟದವರೆಗೆ ನೀರಿನಲ್ಲಿ ಇಳಿದು ವೃದ್ಧನೊಬ್ಬ ಮೀನು ಹಿಡಿಯುತ್ತಿರುವ ದೃಶ್ಯ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದ್ದರೂ ಅಪಾಯವನ್ನು ಲೆಕ್ಕಿಸದಿರುವುದು ಕಳವಳಕ್ಕೆ ಕಾರಣವಾಗಿದೆ.
ಇದರ ನಡುವೆ ಖಾನಾಪುರದಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಜತೆಗೆ ತಾಲೂಕಿನ ಮಲಪ್ರಭಾ, ಪಾಂಡರಿ ಮತ್ತು ಮಲಪ್ರಭಾ ನದಿಗಳಲ್ಲಿ ನೀರಿನ ಪ್ರಮಾಣವೂ ಹೆಚ್ಚಳವಾಗುತ್ತಿದೆ.
ಜಾಂಬೋಟಿ ಬಳಿ ಮರ ಉರುಳಿ ಹೆದ್ದಾರಿ ಬಂದ್
ಖಾನಾಪುರ ತಾಲೂಕಿನ ಜಾಂಬೋಟಿ ಬಳಿ ರಾಜ್ಯ ಹೆದ್ದಾರಿ ಮೇಲೆಯೇ ಬೃಹತ್ ಮರ ಉರುಳಿ ಬಿದ್ದ ಪರಿಣಾಮ ಬೆಳಗಾವಿ-ಗೋವಾ ರಸ್ತೆ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮರ ತೆರವು ಕಾರ್ಯಾಚರಣೆ ನಡೆಸಿದರು.
ಕಾರಿನ ಮೇಲೆ ಬಿದ್ದ ಮರ
ನಗರದ ಭಾಗ್ಯನಗರ 3ನೇ ಕ್ರಾಸ್‌ನಲ್ಲಿ ರಸ್ತೆ ಬದಿಯ ಬೃಹತ್ ಮರ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ನಿರಂತರ ಮಳೆಯಿಂದ ಮರದ ಬೇರುಗಳು ಸಡಿಲಗೊಂಡಿದ್ದರಿಂದ ಈ ಘಟನೆ ಸಂಭವಿಸಿದೆ. ಘಟನೆಯ ವೇಳೆ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.
ಚಿಕ್ಕೋಡಿ ತಾಲೂಕಿನ ವಡ್ರಾಳ ಗ್ರಾಮದಲ್ಲಿ ನಿರಂತರ ಮಳೆಯಿಂದ ದನದ ಕೊಟ್ಟಿಗೆ ಕುಸಿದು ಬಿದ್ದ ಪರಿಣಾಮ ಗರ್ಭಿಣಿ ಎಮ್ಮೆ ಸ್ಥಳದಲ್ಲೇ ಮೃತಪಟ್ಟಿದೆ. ಕೊಟ್ಟಿಗೆ ಲಕ್ಷ್ಮಣ ಕಂಠಿಬಾಳಿ ಅವರಿಗೆ ಸೇರಿದ್ದು, ಘಟನೆಯಿಂದ ಅವರಿಗೆ ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ.
ಮಲಪ್ರಭೆಗೆ ಮತ್ತೆ ಜೀವಕಳೆ
ಮುಂಗಾರು ಆರಂಭದಲ್ಲಿ ಬತ್ತಿಹೋಗಿದ್ದ ಮಲಪ್ರಭಾ ನದಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಮತ್ತೆ ಮೈದುಂಬಿ ಹರಿಯುತ್ತಿದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ ಹಾಗೂ ಹುಬ್ಬಳ್ಳಿ ಸೇರಿದಂತೆ ನಾಲ್ಕು ಜಿಲ್ಲೆಗಳ ಜೀವನಾಡಿಯಾಗಿರುವ ಮಲಪ್ರಭೆಯಲ್ಲಿ ನೀರಿನ ಹರಿವು ಹೆಚ್ಚಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಜಲಾಶಯಗಳಿಗೆ ಒಳಹರಿವು ಹೆಚ್ಚುವ ನಿರೀಕ್ಷೆಯೂ ಮೂಡಿದೆ.
ಇದನ್ನೂ ಓದಿ: ಮುಂಗಾರು ಮಳೆ ಆರ್ಭಟ: ತುಂಬಿದ ಜಲಾಶಯ, ಮುಳುಗಿದ ಸೇತುವೆಗಳು, ರೈತರ ಮೊಗದಲ್ಲಿ ಮಂದಹಾಸ


