ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಕದನ ಶಮನಕ್ಕಾಗಿ ಸದ್ಯಕ್ಕೆ ಒಂದು ‘ಸ್ಟಂಟ್’ ಹಾಕಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರಕ್ಕೆ ಮೇಜರ್ ಆಪರೇಷನ್ ನಡೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಟೀಕಿಸಿದರು.
ಶಿವಮೊಗ್ಗ (ನ.30): ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಕದನ ಶಮನಕ್ಕಾಗಿ ಸದ್ಯಕ್ಕೆ ಒಂದು ‘ಸ್ಟಂಟ್’ ಹಾಕಿಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಟೀಕಿಸಿದರು. ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಇಂದಿನ ಸಿಎಂ-ಡಿಸಿಎಂ ಅವರ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಬರುವ ವಿಧಾನಸಭಾ ಅಧಿವೇಶನ ಮುಗಿಯುವವರೆಗೆ ಈ ಸರ್ಕಾರ ಇರಲೆಂದು ಸಧ್ಯಕ್ಕೆ ತಾತ್ಕಾಲಿಕ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಅಧಿವೇಶನದ ನಂತರ ಕಾಂಗ್ರೆಸ್ ಸರ್ಕಾರಕ್ಕೆ ಮೇಜರ್ ಆಪರೇಷನ್ ನಡೆಯಲಿದೆ ಎಂದು ವ್ಯಂಗ್ಯವಾಡಿದರು. ಸಿಎಂ-ಡಿಸಿಎಂ ತಮ್ಮ ಪತ್ರಿಕಾಗೋಷ್ಠಿಯಲ್ಲಿ ತಮ್ಮ ತಪ್ಪಿಗಾಗಿ ಮಾಧ್ಯಮ ಹಾಗೂ ವಿರೋಧ ಪಕ್ಷದವರನ್ನು ಮೂದಲಿಸುತ್ತಿದ್ದಾರೆ.
ಈ ಸರ್ಕಾರಕ್ಕೆ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿಯಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ಕೇವಲ ಬೂಟಾಟಿಕೆ ಮಾಡಿ ದಿನ ದೂಡುತ್ತಿದ್ದಾರೆ. ರೈತರ ಕಬ್ಬಿನ ಸಮಸ್ಯೆ ಬಗ್ಗೆ ಈಗಾಗಲೆ ರಾಜ್ಯದ ಜನರಿಗೆ ಗೊತ್ತಾಗಿದೆ. ಈಗಾಗಲೇ ಮೆಕ್ಕೆಜೋಳದ ಕಟಾವು ಆರಂಭವಾಗಿದೆ. ಸರ್ಕಾರಕ್ಕೆ ಖರೀದಿ ಕೇಂದ್ರ ತೆರೆಯಲಾಗಲಿಲ್ಲ. ಎಲ್ಲವನ್ನು ಕೇಂದ್ರದ ಮೇಲೆ ಹಾಕಿ ಇವರು ನುಣುಚಿ ಕೊಳ್ಳುತ್ತಿದ್ದಾರೆ. ಇದು ಕರ್ನಾಟಕ ಜನರ ದೌರ್ಭಾಗ್ಯ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕೇಂದ್ರ ಕಬ್ಬಿಣ ಮತ್ತು ಅದಿರು ಸಚಿವ ಎಚ್.ಡಿ. ಕುಮಾರಸ್ವಾಮಿ, ಭದ್ರಾವತಿ- ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು, ವಿಐಎಸ್‌ಎಲ್ ಸಂಸ್ಥೆಗೆ ಪುನರ್‌ಜೀವ ಕೊಡಲು ಮುಂದಾಗಿದ್ದಾರೆ. ಜನತೆಗೆ ಒಂದು ಸಿಹಿಸುದ್ದಿ ಲಭಿಸಿದೆ ಎಂದರು.
ಗಂಗೊಳ್ಳಿ ಸಂಪರ್ಕ ಸೇತುವೆಗೆ ಸಕಲ ಯತ್ನ
ಸಿಗಂಧೂರು ಸೇತುವೆ ಸಹಿತ ಶಿವಮೊಗ್ಗ ಜಿಲ್ಲೆಯ ಅನೇಕ ಊರುಗಳಿಗೆ ಸೇತುವೆ ನಿರ್ಮಿಸುವ ಮೂಲಕ ಸಂಪರ್ಕ ಸಾಧ್ಯವಾಗಿದೆ. ಅದೇ ರೀತಿ ಗಂಗೊಳ್ಳಿಗೂ ಸಂಪರ್ಕ ಸೇತುವೆ ನಿರ್ಮಿಸಬೇಕು ಅನ್ನುವುದು ನನ್ನ ಕನಸು. ಅದನ್ನು ಸಾಧ್ಯವಾಗಿಸಲು ಎಲ್ಲ ರೀತಿಯ ಪ್ರಯತ್ನವೂ ನಡೆಯುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಪಂಚಗಂಗಾವಳಿ ನದಿಗೆ ಅಡ್ಡಲಾಗಿ ಗಂಗೊಳ್ಳಿ - ಕುಂದಾಪುರ ಸೇತುವೆ ನಿರ್ಮಾಣದ ಪ್ರಸ್ತಾವಿತ ಪ್ರದೇಶವನ್ನು ವೀಕ್ಷಿಸಿ, ಅಧಿಕಾರಿಗಳಿಂದ ಡಿಪಿಆರ್ ಬಗ್ಗೆ ಮಾಹಿತಿ ಪಡೆದು, ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರಿಗೂ ಈ ಬಗ್ಗೆ ಈಗಾಗಲೇ ಮನವಿ ಮಾಡಿಕೊಂಡಿದ್ದೇವೆ. ಸೇತುವೆ ಕನಸು ಈಡೇರುವ ನಿರೀಕ್ಷೆಯಿದೆ ಎಂದರು.
ಗಂಗೊಳ್ಳಿಯಿಂದ ಕುಂದಾಪುರ ನಗರವನ್ನು ಸಂಪರ್ಕಿಸುವ ಸುಮಾರು 1.3 ಕಿ.ಮೀ. ದೂರದ ಸೇತುವೆಗೆ ಡಿಪಿಆರ್ ಪ್ರಕ್ರಿಯೆ ನಡೆಯುತ್ತಿದೆ. ಜ. 30 ರೊಳಗೆ ಡಿಪಿಆರ್ ಸಲ್ಲಿಸುವಂತೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಸೂಚಿಸಿದ್ದು, ಅದಕ್ಕಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು 3 ಪ್ರತ್ಯೇಕ ಡಿಪಿಆರ್ ಸಿದ್ಧಪಡಿಸಿದ್ದು, ಶೀಘ್ರ ಸಲ್ಲಿಸಲಾಗುವುದು ಎಂದರು.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊನ್ನಾವರದ ವಿಭಾಗದ ಯೋಜನಾ ನಿರ್ದೇಶಕ ಶಿವಕುಮಾರ್ ಅವರೊಂದಿಗೆ ಚರ್ಚಿಸಿದ ಸಂಸದರು, ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

