*  ಪ್ರಾಣ ಹೋದರೂ ಆತ್ಮ ಹೋಗಿಲ್ಲ ಎಂಬ ನಂಬಿಕೆಯಿಂದ 14 ದಿನ ಪೂಜೆ*  ಮುಂಡಗೋಡದಲ್ಲಿ ಟಿಬೆಟಿಯನ್‌ ಧಾರ್ಮಿಕ ವಿಧಿ ವಿಧಾನದೊಂದಿಗೆ ಅಂತ್ಯಸಂಸ್ಕಾರ*  ಅಗ್ನಿ ಸ್ಪರ್ಶ ಮಾಡಿ ಶವಸಂಸ್ಕಾರ ನೆರವೇರಿಸಿದ ತುಲ್ಕು ಲೋಬ್ಸಾಂಗ್‌ ಪೆಲ್ಜೋರ್‌ ರಿಂಪೋಚೆ 

ಸಂತೋಷ ದೈವಜ್ಞ

ಮುಂಡಗೋಡ(ಸೆ.24): ಪ್ರಾಣ ಹೋದರೂ ಆತ್ಮ ಹೋಗಿಲ್ಲ ಎಂಬ ನಂಬಿಕೆಯಿಂದ 14 ದಿನಗಳಿಂದ ಮೃತದೇಹವನ್ನು ಇಟ್ಟುಕೊಂಡು ಪೂಜಿಸಲಾಗುತ್ತಿದ್ದ ಟಿಬೇಟಿಯನ್‌ ಹಿರಿಯ ಸನ್ಯಾಸಿಯ(Buddhist Monk) ಅಂತಿಮ ಸಂಸ್ಕಾರವನ್ನು 15ನೇ ದಿನವಾದ ಗುರುವಾರ ಸಕಲ ಗೌರವ ಮೆರವಣಿಗೆ ನಡೆಸಿ ಟಿಬೆಟಿಯನ್‌ ಧಾರ್ಮಿಕ ಪೂಜಾ ವಿಧಿ ವಿಧಾನದೊಂದಿಗೆ ನೆರವೇರಿಸಲಾಯಿತು.

ಇಲ್ಲಿಯ ಟಿಬೆಟಿಯನ್‌ ಕಾಲನಿ ಲಾಮಾ ಕ್ಯಾಂಪ್‌ ನಂ. 1 ಶೇರ್‌ ಗಂದೆನ್‌ ಬೌದ್ಧ ಮಠದ ಹಿರಿಯ ಸನ್ಯಾಸಿ ಯಶಿ ಪೋನ್ಸೊ ತೆಂಜಿನ್‌ (90) ಅವರು ಸೆ. 9ರಂದು ಧ್ಯಾನ ಮಾಡುವಾಗಲೇ ಚಿರನಿದ್ರೆಗೆ ಜಾರಿದ್ದರು. ಮೃತದೇಹದಿಂದ ಯಾವುದೇ ದುರ್ವಾಸನೆಯಾಗಲಿ ಬಂದಿರಲಿಲ್ಲ. ಅಲ್ಲದೇ ಯಾವುದೇ ರೀತಿ ನೀರು ಸೋರಿಕೆಯಾಗುವುದಾಗಲಿ, ದೇಹದಲ್ಲಿ ಬಾವು ಕಾಣಿಸಿಕೊಳ್ಳದೇ ಇರುವುದರಿಂದ ಪ್ರಾಣ ಹೋಗಿದೆ, ಆದರೆ ಆತ್ಮ ಇಂದಿಗೂ ಇಲ್ಲಿಯೇ ಇದೆ ಎಂಬ ನಂಬಿಕೆಯಿಂದ ಇಲ್ಲಿಯ ಕಿರಿಯ ಟಿಬೆಟಿಯನ್‌(Tibet) ಸನ್ಯಾಸಿಗಳಿಂದ ಶವವನ್ನು ಪೆಟ್ಟಿಗೆಯೊಂದರಲ್ಲಿ ಇಟ್ಟು ದೀಪ ಹಚ್ಚಿ ನಿತ್ಯ ಪೂಜೆ ಸಲ್ಲಿಸುತ್ತಿದ್ದರು.

ಮುಂಡಗೋಡ: ಬೌದ್ಧ ಸನ್ಯಾಸಿ ದೇಹತ್ಯಾಗ ಮಾಡಿ 10 ದಿನವಾದರೂ ನಿತ್ಯಪೂಜೆ..!

ಸಾಮಾನ್ಯವಾಗಿ ಯಾವುದೇ ಒಬ್ಬ ವ್ಯಕ್ತಿ ಮೃತಪಟ್ಟರೆ 1- 2 ದಿಗಳಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಆದರೆ ಇಷ್ಟು ದಿನವಾದರೂ ಅಂತ್ಯಸಂಸ್ಕಾರ ಮಾಡದೆ ತೀವ್ರ ಕುತೂಹಲ ಮೂಡಿಸಿದ್ದ ಈ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಯಾವಾಗ ಅಂತ್ಯಸಂಸ್ಕಾರ ನಡೆಯಲಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿತ್ತು. ಕೊನೆಗೂ ಅಂತ್ಯಸಂಸ್ಕಾರ(Funeral) ನಡೆಸಲಾಗಿದ್ದು, ಸಾರ್ವಜನಿಕರ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ.

ಅಗ್ನಿಸ್ಪರ್ಶ:

ನಾಲ್ಕೈದು ದಿನಗಳಿಂದ ಆವರಣದಲ್ಲಿ ಮಂಟಪ ಕಟ್ಟಿಅದರ ನಡುವೆ ಗದ್ದುಗೆ ನಿರ್ಮಿಸಿ ಸುತ್ತ ಹೂವಿನ ಅಲಂಕಾರ ಮಾಡಲಾಗಿತ್ತು. ಗುರುವಾರ ಸಂಜೆ ಟಿಬೆಟಿಯನ್‌ ಲಾಮಾಗಳೆಲ್ಲ ಸೇರಿ ಮೆರವಣಿಗೆಯೊಂದಿಗೆ ಪೆಟ್ಟಿಗೆಯೊಂದರಲ್ಲಿ ಹಿರಿಯ ಸನ್ಯಾಸಿಗಳ ದೇಹವನ್ನು ಹೊತ್ತು ಗದ್ದುಗೆಯಲ್ಲಿಟ್ಟು ಪೂಜೆ ಸಲ್ಲಿಸಿ ಬಳಿಕ ಅಗ್ನಿಸ್ಪರ್ಶ ನೀಡಲಾಯಿತು.

ತುಕ್ತಂ(ಯೋಗತಂತ್ರ)ದಲ್ಲಿ ಕುಳಿತು ನಿಧನರಾದರೆ, 14 ದಿನಗಳ ಕಾಲ ಪೂಜೆ ಸಲ್ಲಿಸಿ 15ನೇ ದಿನಕ್ಕೆ ಟಿಬೇಟಿಯನ್‌ ಸಂಪ್ರದಾಯದಂತೆ ಚೌಕ್ಸಿಕ್‌(ಪವಿತ್ರ) ಅಗ್ನಿಹವನ ಮಾಡಲಾಗುತ್ತದೆ. ಅದೇ ರೀತಿ ನಿರಂತರ ಪೂಜೆ ಸಲ್ಲಿಸುವ ಮೂಲಕ ಗದ್ದುಗೆ ನಿರ್ಮಾಣ ಮಾಡಿ ಶಾಸೊತ್ರೕಕ್ತವಾಗಿ ಹಿರಿಯ ಸನ್ಯಾಸಿಗಳ ಶವಸಂಸ್ಕಾರ ನಡೆದಿದ್ದು, ತುಲ್ಕು ಲೋಬ್ಸಾಂಗ್‌ ಪೆಲ್ಜೋರ್‌ ರಿಂಪೋಚೆ ಅವರು ಅಗ್ನಿ ಸ್ಪರ್ಶ ಮಾಡಿ ಶವಸಂಸ್ಕಾರವನ್ನು ನೆರವೇರಿಸಿದರು.